Uttara Kannada: ಕಾರವಾರದಲ್ಲಿ ಮುಸ್ಲಿಮರಿಗೆ ಸುಲಭದಲ್ಲಿ ದೊರೆಯಲ್ಲ ಬಾಡಿಗೆ ಮನೆ
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಾಡಿಗೆ ಮನೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕುವ ಮೂಲಕ ಹಿಂದು ಹಾಗೂ ಮುಸ್ಲಿಂ ಸಮುದಾಯದ ಜನರ ನಡುವೆ ಒಳಜಗಳ ಮುಂದುವರಿದಿದೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಏ.14): ರಾಜ್ಯದಲ್ಲಿ (Karnataka) ಹಿಜಾಬ್ (Hijab), ಹಲಾಲ್ ಕಟ್ (Halal Cut), ಜಟ್ಕಾ ಕಟ್ (Jhatka Cut), ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಮುಂತಾದ ಹಲವು ವಿಚಾರಗಳು ಸಮುದಾಯಗಳ ನಡುವಿನ ದ್ವೇಷಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ಬಾಡಿಗೆ ಮನೆ (Rent House) ನೀಡುವ ವಿಚಾರದಲ್ಲಿ ಹಿಂದೇಟು ಹಾಕುವ ಮೂಲಕ ಹಿಂದು (Hindu) ಹಾಗೂ ಮುಸ್ಲಿಂ (Muslim) ಸಮುದಾಯದ ಜನರ ನಡುವೆ ಒಳಜಗಳ ಮುಂದುವರಿದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.
ರಾಜ್ಯದಲ್ಲಿ ಒಂದಲ್ಲಾ ಒಂದು ವಿಚಾರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರ ನಡುವೆ ದ್ವೇಷ ಕಾಣಿಸಿಕೊಳ್ಳುತ್ತಿವೆ. ರಾಜ್ಯದ ಕರಾವಳಿ ಭಾಗದಲ್ಲಿ ಹುಟ್ಟಿಕೊಂಡ ಈ ವಿವಾದ ರಾಜ್ಯದ ವಿವಿಧೆಡೆ ಹಬ್ಬಿ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹೀಗೆ ಹಲವು ಗಲಾಟೆಗಳು ನಡೆದರೂ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತ್ರ ಹಿಂದು ಮುಸ್ಲಿಮರ ನಡುವಿನ ಸಾಮರಸ್ಯ ಹಾಗೆಯೇ ಇತ್ತು. ಆದರೆ, ಮತೀಯ ವಿವಾದ ಇದೀಗ ಕಾರವಾರಲ್ಲೂ ಬೆಳಕಿಗೆ ಬಂದಿದೆ.
Uttara Kannada: ಯಾಂತ್ರಿಕೃತ ವ್ಯವಸ್ಥೆ ನಡುವೆಯೂ ರೈತರ ಪಾಲಿಗೆ ಕಹಿಯಾದ ಕಬ್ಬು
ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಬೇರೆ ತಾಲೂಕುಗಳಿಂದ ಕಾರವಾರಕ್ಕೆ ಕೆಲಸಕ್ಕಾಗಿ ಬರುವ ಮುಸ್ಲಿಂ ಕುಟುಂಬಗಳಿಗೆ ಬಾಡಿಗೆ ಮನೆ ನೀಡಲು ಕೆಲವರು ನಿರಾಕರಿಸುತ್ತಿದ್ದಾರೆ. ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ಸೇರಿದಂತೆ ಹಲವು ಕಂಪೆನಿಗಳಿದ್ದು, ಇಲ್ಲಿ ಉದ್ಯೋಗ ಹಾಗೂ ವ್ಯಾಪಾರದ ಉದ್ದೇಶಕ್ಕಾಗಿ ಹಲವು ಮುಸ್ಲಿಂ ಕುಟುಂಬಗಳು ಈ ಭಾಗದಲ್ಲಿ ತಮ್ಮ ಜೀವನ ಕಂಡುಕೊಳ್ಳಲು ಆಗಮಿಸುತ್ತಿವೆ. ಭೌಗೋಳಿಕವಾಗಿ ಚಿಕ್ಕ ನಗರವಾಗಿರುವ ಕಾರವಾರದಲ್ಲಿ ಬಹುತೇಕ ಹಿಂದು ಸಮುದಾಯದ ಮನೆಗಳೇ ಬಾಡಿಗೆಗೆ ದೊರಕುತ್ತದೆ.
ಆದರೆ ಈ ಬಾಡಿಗೆ ಮನೆಗಳನ್ನು ಪಡೆಯಬೇಕಂದ್ರೆ ಮುಸ್ಲಿಂ ಕುಟುಂಬಗಳು ಸಾಕಷ್ಟು ಪರದಾಡಬೇಕಿದೆ. ಮುಸ್ಲಿಂ ಮಾಲೀಕತ್ವದ ಮನೆಗಳು ಖಾಲಿಯಿದ್ದರೆ ಸಲೀಸಾಗಿ ದೊರೆಯುತ್ತವೆಯಾದ್ರೂ, ಉಳಿದೆಡೆ ಸಂಪ್ರದಾಯ, ಮಾಂಸ ತಿನ್ನುತ್ತಾರೆ ಮುಂತಾದ ಹಲವು ವಿಚಾರದ ಮೇಲೆ ಮುಸ್ಲಿಮರಿಗೆ ಬಾಡಿಗೆ ಮನೆ ನೀಡಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಸಾಕಷ್ಟು ಸಮಯಗಳಿಂದಲೂ ಈ ವಿಚಾರ ನಡೆಯುತ್ತಲೇ ಬರುತ್ತಿದೆಯಾದರೂ ಇತ್ತೀಚೆಗೆ ಹಿಜಾಬ್ ಹಾಗೂ ಇತರ ವಿವಾದಗಳು ನಡೆದ ಬಳಿಕ ಅಮಾಯಕ ಮುಸ್ಲಿಮರು ಇದರಿಂದ ಕೊಂಚ ಹೆಚ್ಚಾಗಿಯೇ ಸಮಸ್ಯೆ ಎದುರಿಸುತ್ತಿದ್ದಾರೆ.
ಉದ್ಯೋಗ, ವ್ಯಾಪಾರ ನಿಮಿತ್ತ ಕಾರವಾರಕ್ಕೆ ಬರುವ ಮುಸ್ಲಿಮರು ಬಾಡಿಗೆ ಮನೆ ಸಿಗದೆ ತಮ್ಮದೇ ಸಮುದಾಯದ ಮನೆ ಮಾಲಕರನ್ನು ಅಥವಾ ಸಾಕಷ್ಟು ಹುಡುಕಾಡಿದ ಬಳಿಕ ಕೆಲವು ಹಿಂದು ಮನೆಗಳನ್ನು ಹುಡುಕಲು ಸಫಲರಾಗುತ್ತಾರೆ. ಇತ್ತೀಚೆಗೆ ಈ ಸಮಸ್ಯೆ ಕೊಂಚ ಹೆಚ್ಚಾಗಿದ್ದು, ಅಮಾಯಕರು ಇದರಿಂದ ಸಂಕಷ್ಟ ಎದುರಿಸಬೇಕಾದ ಸ್ಥಿತಿ ಕಾಣುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿದ ಹಿಂದೂ ಸಂಘಟನೆಯ ಮುಖಂಡರು, ಇದು ಕ್ರಿಯೆಗೆ ಪ್ರತಿಕ್ರಿಯೆಯಷ್ಟೇ. ಕೆಲವು ಮುಸ್ಲಿಮರು ಹಿಂದೂ ನಂಬಿಕೆಗೆ ಅಡ್ಡಗಾಲಿಡುತ್ತಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ ಯಾವತ್ತೂ ಸುಖ, ಸಂತೃಪ್ತಿಯಿಲ್ಲ. ಇಲ್ಲಿ ಬಂದ್ರೆ ಅವರು ಸುಖಿಗಳಾಗಿರ್ತಾರಾ..? ಯಾವುದಾದರೊಂದು ವಿವಾದಕ್ಕೆ ಎಡೆ ಮಾಡಿಕೊಡ್ತಾನೆ ಇರ್ತಾರೆ.
Uttara Kannada: ಕುಮಟಾದಲ್ಲಿ ಶಾಲಾ ಬಳಿಯೇ ಎಂಎಸ್‌ಐಎಲ್ ನಿರ್ಮಾಣಕ್ಕೆ ಸಿದ್ಧತೆ
ಹಿಂದೂಗಳ ಮನೆಗಳಲ್ಲಿ ಸಂಪ್ರದಾಯ, ಆಚಾರ- ವಿಚಾರಗಳಿರೋದ್ರಿಂದ ಅವರಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಹಿಂದೂಗಳು ಕೂಡಾ ಅವರ ಮನೆಗೆ ಬಾಡಿಗೆ ಪಡೆಯಲು ಹೋಗುವುದಿಲ್ಲ. ಅವರು ನಡೆಸಿದ ಕ್ರಿಯೆಗೆ ಇದೊಂದು ಪ್ರತಿಕ್ರಿಯೆಯಷ್ಟೇ ಎಂದು ಪ್ರತಿಕ್ರಯಿಸ್ತಾರೆ ಹಿಂದೂ ಮುಖಂಡರು. ಒಟ್ಟಿನಲ್ಲಿ ಈ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಹಿಂದಿನಿಂದಲೂ ಕಾಣಿಸಿಕೊಳ್ತಿದ್ದ ಬಾಡಿಗೆ ಮನೆ ನೀಡಲು ಹಿಂದೇಟು ವಿಚಾರ ಇತ್ತೀಚೆಗೆ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಉರಿದು ಕೊಂಚ ಆರಿರುವ ಹಿಂದು- ಮುಸ್ಲಿಂ ಸಮುದಾಯಗಳ ನಡುವಿನ ಗಲಭೆ ವಿಚಾರ ಇದೀಗ ಉರಿಯುವ ಬೆಂಕಿಗೆ ಮತ್ತೆ ತುಪ್ಪ ಸುರಿವ ಸ್ಥಿತಿ ನಿರ್ಮಾಣವಾದಂತಾಗಿದೆ.