Uttara Kannada: ಯಾಂತ್ರಿಕೃತ ವ್ಯವಸ್ಥೆ ನಡುವೆಯೂ ರೈತರ ಪಾಲಿಗೆ ಕಹಿಯಾದ ಕಬ್ಬು
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಆಲೆಮನೆ ಹಬ್ಬ ಯಾರಿಗೆ ತಾನೆ ಗೊತ್ತಿಲ್ಲ? ಹಿಂದೆಯಂತೂ ಕೋಣ ಕಟ್ಟಿಕೊಂಡು ಕಬ್ಬು ಮುರಿಯಲು ಪ್ರಾರಂಭವಾದರೆ ಎರಡು ತಿಂಗಳವರೆಗೂ ಆಲೆಮನೆ ನಡೆಯುತ್ತಲೇ ಇರುತಿತ್ತು.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಏ.11): ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ನಡೆಯುವ ಆಲೆಮನೆ ಹಬ್ಬ ಯಾರಿಗೆ ತಾನೆ ಗೊತ್ತಿಲ್ಲ? ಹಿಂದೆಯಂತೂ ಕೋಣ ಕಟ್ಟಿಕೊಂಡು ಕಬ್ಬು (Sugarcane) ಮುರಿಯಲು ಪ್ರಾರಂಭವಾದರೆ ಎರಡು ತಿಂಗಳವರೆಗೂ ಆಲೆಮನೆ ನಡೆಯುತ್ತಲೇ ಇರುತಿತ್ತು. ಪ್ರಸ್ತುತ, ಯಾಂತ್ರೀಕೃತ ವ್ಯವಸ್ಥೆಯಿಂದಾಗಿ ಎಲ್ಲವೂ ವಾರ ಇಲ್ಲವೇ, ತಿಂಗಳಾಂತ್ಯದಲ್ಲಿಯೇ ಮುಗಿದು ಹೋಗುತ್ತಿದೆ. ಕೆಲಸ ಇಷ್ಟೊಂದು ಸುಲಭವಾಗಿದ್ರೂ ಕೂಡಾ ಬೆಳೆಗಾರರ ಪಾಲಿಗೆ ಮಾತ್ರ ಕಬ್ಬು ಸಿಹಿಯಾಗದೇ ಕಹಿಯಾಗಿಯೇ ಉಳಿಯುವಂತಾಗಿದೆ. ಅಲ್ಲದೇ, ರೈತರು ಕಬ್ಬು ಬೆಳೆಯುವ ಉತ್ಸಾಹವನ್ನೇ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ರೈತರು (Farmers) ಎದುರಿಸುತ್ತಿರುವ ಸಮಸ್ಯೆಯಾದ್ರೂ ಏನು ಅಂತೀರಾ? ಈ ಸ್ಟೋರಿ ನೋಡಿ.
ಹೌದು! ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುವ ಆಲೆಮನೆ ಅಂದರೆ ಹಬ್ಬದ ವಾತಾವರಣಕ್ಕೇನೂ ಕಮ್ಮಿಯಿಲ್ಲ. ಎಲ್ಲಿ ಆಲೆಮನೆ ಪ್ರಾರಂಭವಾದ್ರೂ ಕೂಡಾ ಸಾವಿರಾರು ಜನರು ಸೇರಿ ಕಬ್ಬಿನ ಜ್ಯೂಸ್, ಜೋನಿ ಬೆಲ್ಲವನ್ನು ಸವಿಯುತ್ತಿದ್ದರು. ಕೋಣವನ್ನು ಕಟ್ಟಿಕ್ಕೊಂಡು ಮುಂಜಾನೆ ಇಲ್ಲವೇ ಸಂಜೆ ಹೊತ್ತಿಗೆ ಮಾತ್ರ ಗಾಣ ಪ್ರಾರಂಭಿಸಿ ಹಾಲು ಹಿಂಡುತ್ತಿದ್ದ ಆಲೆಮನೆ ಇದೀಗ ಮಾಯವಾಗಿದೆ. ಬದಲಿಗೆ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಎಷ್ಟೊತ್ತಿಗೆ ಬೇಕಾದ್ರೂ ಗಾಣ ಪ್ರಾರಂಭಿಸಿ ಹಾಲು ಹಿಂಡಿ ಬೆಲ್ಲ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ಕೆಲಸ ಸುಲಭವಾಗಿದೆ. ಈಗಾಗಲೇ ಕುಮಟಾ, ಸಿದ್ದಾಪುರ ಸುತ್ತಮುತ್ತಲಿನ ಭಾಗಗಳಲ್ಲಿ ಆಲೆಮನೆ ನಡೆದಿದ್ದು, ಕೆಲವೆಡೆ ವಾರದಲ್ಲಿಯೇ ಮುಕ್ತಾಯವಾಗಿದೆ.
Uttara Kannada ಪ್ರೇಮಿಗಳಿಬ್ಬರ ಜೀವನಕ್ಕೆ ಕಂಟಕವಾಯ್ತು ಕುಡಿತದ ಚಟ!
ಸದ್ಯ ಸಿದ್ದಾಪುರದ ಉಡಳ್ಳಿ, ಬಿಳೆಗೋಡ, ಕುಮಟಾದ ಮೇದಿನಿ ವ್ಯಾಪ್ತಿಯಲ್ಲಿ ಟಿಲ್ಲರ್ ಉಪಯೋಗಿಸಿ ಗಾಣ ತಿರುಗಿಸಲಾಗುತ್ತಿದೆ. ಈ ಹಿಂದೆ ಅರ್ಧ ದಿನ ಹಿಂಡುತ್ತಿದ್ದ ಕಬ್ಬಿನ ಹಾಲನ್ನು ಇದೀಗ ಯಂತ್ರದ ಮೂಲಕ ಒಂದು ಗಂಟೆಯಲ್ಲಿಯೇ ಹಿಂಡಿ ಬೆಲ್ಲಕ್ಕೆ ಸಿದ್ದಪಡಿಸಲಾಗುತ್ತಿದೆ. ಕೆಲಸ ಇಷ್ಟೊಂದು ಸುಲಭವಾದ್ರೂ ಕೂಡಾ ಕಬ್ಬು ಬೆಳೆಯಲು ರೈತರು ಮಾತ್ರ ಉತ್ಸಾಹ ತೋರುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಕಬ್ಬು ಬೆಳೆದು ಬೆಲ್ಲ ತಯಾರಿಸಿದರೆ ಅದಕ್ಕೆ ತಕ್ಕುದಾದ ಬೆಲೆ ಸಿಗದಿರುವುದೇ ಇದಕ್ಕೆ ಮುಖ್ಯ ಕಾರಣ. ಒಂದೆಡೆ ಕಬ್ಬಿಗೂ ಬೆಲೆಯಿಲ್ಲ, ಮತ್ತೊಂದೆಡೆ ಬೆಲ್ಲಕ್ಕೂ ಉತ್ತಮ ದರ ದೊರಕುತ್ತಿಲ್ಲ. ಈ ಹಿಂದೆ ಒಂದು ಕೊಡ ಬೆಲ್ಲಕ್ಕೆ 2000ರೂ.ನಿಂದ 2500ರೂ.ವರೆಗೆ ಬೆಲೆಯಿತ್ತು. ಆದರೆ, ಇದೀಗ 1500ರೂ.,1,000ರೂ., 500ರೂ.ಗೆ ಕೇಳಲಾಗುತ್ತಿದೆ. ಈ ಬೆಲೆಗೆ ಬೆಳೆಯ ಖರ್ಚು ಕೂಡಾ ದೊರೆಯದ ಕಾರಣ ಹಲವು ರೈತರು ಕಬ್ಬು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಕಬ್ಬು ಬೆಳೆದ ರೈತರಿಗೆ ಅದನ್ನು ಹಂದಿ, ಮಂಗ, ಆನೆಗಳಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಸಿದ್ದಾಪುರ, ಶಿರಸಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ್ದು, ತೋಟದಲ್ಲಿ ಇತರ ವಸ್ತುಗಳ ಜತೆಗೆ ಕಬ್ಬುಗಳನ್ನು ಸಹ ಲೂಟಿ ಮಾಡತೊಡಗಿವೆ. ಮುಂಡಗೋಡ ವ್ಯಾಪ್ತಿಯಲ್ಲಂತೂ ಕಬ್ಬಿನ ತೋಟಕ್ಕೆ ನುಗ್ಗುವ ಆನೆಗಳು ಎಲ್ಲವನ್ನೂ ಖಾಲಿ ಮಾಡಿ ತೆರಳುತ್ತವೆ. ಇದರಿಂದ ಕೃಷಿಕರಿಗೆ ಬೆಳೆ ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಅಕಾಲಿಕ ಮಳೆ, ಏಜೆಂಟ್, ಟ್ರಾನ್ಸ್‌ಪೋರ್ಟ್ ಚಾರ್ಜ್ ಮುಂತಾದವುಗಳು ರೈತರನ್ನು ಹೈರಾಣಾಗಿಸಿದೆ. ಇಷ್ಟೆಲ್ಲಾ ಮಾಡಿ ಬೆಲ್ಲ ತಯಾರಿಸಿದರೂ ಅದಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ.
Kumta: ಅಬ್ಬೊಳ್ಳಿಯಲ್ಲಿ 3 ಕಾಳಿಂಗ ಸರ್ಪಗಳ ರಕ್ಷಣೆ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ
ಇದರಿಂದ ಬಿಳೆಗೋಡ, ಉಡಳ್ಳಿ ಸೇರಿದಂತೆ ಸಿದ್ದಾಪುರ ವ್ಯಾಪ್ತಿಯಲ್ಲಿ ಬಹುತೇಕರು ಮನೆ ಬಳಕೆಗೆ ಬೇಕಾಗುವಷ್ಟು ಮಾತ್ರ ಕಬ್ಬನ್ನು ಬೆಳೆದು ಬೆಲ್ಲ ತಯಾರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಬ್ಬು ಬೆಳೆಗಾರರನ್ನು ಪ್ರೋತ್ಸಾಹಿಸಬೇಕು ಹಾಗೂ ಪ್ರಾಣಿಗಳ ಹಾವಳಿ ತಡೆಗಟ್ಟಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಇಂದಿನ ದುಬಾರಿ ದುನಿಯಾದಲ್ಲಿ ರೈತರು ಬೆಳೆದ ಕಬ್ಬು ಹಾಗೂ ಇದರ ಉತ್ಪನ್ನ ವಸ್ತುಗಳಿಗೆ ಸೂಕ್ತ ಬೆಲೆ ದೊರೆಯದೇ ಇರುವುದು ವಿಪರ್ಯಾಸ. ಪ್ರಾಣಿಗಳ ಹಾವಳಿಯಿಂದಾಗಿ ಕಬ್ಬು ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಕಬ್ಬು ಹಾಗೂ ಬೆಲ್ಲಕ್ಕೆ ಉತ್ತಮ ಬೆಲೆ ದೊರಕದಿರುವುದು ರೈತರಿಗೆ ಬೇಸರ ತಂದಿದೆ. ಸರ್ಕಾರ ಇಂತಹ ಬೆಳೆಗಾರರನ್ನು ಪ್ರೋತ್ಸಾಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.