22 ಯೋಜನೆಗಳಡಿ 28,900 ಫಲಾನುಭವಿಗಳಿಗೆ ಏಕಕಾಲಕ್ಕೆ ವಿವಿಧ ನೆರವು, ಈವರೆಗಿನ 10 ಗ್ರಾಮ ವಾಸ್ತವ್ಯಗಳಲ್ಲೇ ಅತಿ ಹೆಚ್ಚು ಮಂದಿ ಸೇರಿದ ದಾಖಲೆ

ಶೇಷಮೂರ್ತಿ ಅವಧಾನಿ

ಕಲಬುರಗಿ(ಆ.21): ಸೇಡಂ ತಾಲೂಕಿನ ಆಡಕಿಯಲ್ಲಿ ಶನಿವಾರ ನಡೆದ ಸಚಿವ ಆರ್‌.ಅಶೋಕ ಅವರ ಗ್ರಾಮ ವಾಸ್ತವ್ಯ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಂದಾಯ ಸಚಿವರ ಇದುವರೆಗಿನ 10 ಗ್ರಾಮ ವಾಸ್ತವ್ಯಗಳಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ನೀಡಿರುವ ಕಾರ್ಯಕ್ರಮವೆಂದೂ ಆಡಕಿ ವಾಸ್ತವ್ಯ ಖ್ಯಾತಿಗೆ ಪಾತ್ರವಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ 12 ಇಲಾಖೆಗಳ ಅಧಿಕಾರಿಗಳು ಕಳೆದ 1 ತಿಂಗಳಿಂದ ಸೇಡಂ, ಚಿಂಚೋಳಿ ಸೇರಿದಂತಿರುವ 150 ಹಳ್ಳಿಗಳು, 50 ತಾಂಡಾಗಳನ್ನು ಸುತ್ತಿ ಅಲ್ಲಿರುವ ಅರ್ಹ 28,900 ಜನರಿಗೆ ವಿವಿಧ ಸೌಲಭ್ಯ, ಪ್ರಮಾಣ ಪತ್ರಗಳು ನೀಡಲಾಯಿತು.

ಇದರಲ್ಲಿ ಸೇಡಂ ತಾಲೂಕಿನ 448 ಸೇರಿ 522 ಸಂಘಗಳು ಸೇರಿದಂತೆ ಡಿಸಿಸಿ ಬ್ಯಾಂಕಿನಿಂದ 10 ಸಾವಿರ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಯಿತು. ವೇದಿಕೆ ಮೇಲೆ ಸಚಿವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಉಳಿದವರಿಗೆ ವಿವಿಧ ಇಲಾಖೆಗಳು ಹಾಕಿರುವ ಮಳಿಗೆಯಲ್ಲಿಯೇ ಅಧಿಕಾರಿಗಳು ಸೌಲಭ್ಯ ವಿತರಿಸಿದರು.

ಕರ್ನಾಟಕದ ಏಳು ಅದ್ಭುತಗಳಿಗೆ ಮತ ಚಲಾಯಿಸಿ: ಕಲಬುರಗಿಯಿಂದ ಬುದ್ಧ ವಿಹಾರ ನಾಮನಿರ್ದೇಶನ

ಗ್ರಾಮ ವಾಸ್ತವ್ಯ ಅಂಗವಾಗಿ ಕಂದಾಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ವಿಕಲಚೇತನರ ಕಲ್ಯಾಣ, ಭೂದಾಖಲೆ, ಆರೋಗ್ಯ, ಕಾರ್ಮಿಕ, ಆಹಾರ ಹೀಗೆ ವಿವಿಧ 27 ಇಲಾಖೆಗಳು ಮಳಿಗೆ ಹಾಕಿ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯ್ತು.

ಇದೆಲ್ಲ ವಿಚಾರ ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಸಚಿವ ಆರ್‌.ಅಶೋಕ ಗ್ರಾಮವಾಸ್ತವ್ಯ ತಮಗೆ ಪಾಠಶಾಲೆಯಾಗಿದೆ ಎಂದರಲ್ಲದೆ ಜನರ ಸಮಸ್ಯೆಗಳನ್ನು ಸಾಕ್ಷಾತ್‌ ಕಂಡು ಪರಿಹಾರ ಹುಡುಕಲು ಇದು ವೇದಿಕೆಯಾಗಿದೆ. ಇದರಿಂದ ಕಂದಾಯ ಇಲಾಖೆಯನ್ನ ಭಿನ್ನ ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವ ತೃಪ್ತಿಯೂ ತಮಗಿದೆ ಎಂದು ಹೇಳುತ್ತ ಜನರ ಗಮನ ಸೆಳೆದರು.

ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರರು ಹಳ್ಳಿಕಡೆ ಹೆಜ್ಜೆ ಇಡುತ್ತಿರಲಿಲ್ಲ, ಇದೀಗ ಮಾಸಿಕ ಹಳ್ಳಿಗಳಲ್ಲಿ ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡಬೇಕು, ತಹಸೀಲ್ದಾರರು ಆಯಾ ತಾಲೂಕುಗಳಲ್ಲಿನ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಬೇಕು, ಮತ್ತೆ ಜಿಲ್ಲಾಧಿಕಾರಿ ಪ್ರತಿ ವಾರ ಒಂದೊಂದು ತಾಲೂಕಿಗೆ ಹೋಗಿ ಅಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿದ್ದು ಜನರ ಅಹವಾಲು ಆಲಿಸಬೇಕೆಂದು ತಾವು ಖಡಕ್‌ ಆದೇಶ ಮಾಡಿ ಜಾರಿಗೊಳ್ಳಿಸಿದ್ದರಿಂದ ಕಂದಾಯ ಇಲಾಖೆಯೇ ಈಗ ಗ್ರಾಮೀಣ ಮುಖಿಯಾಗಿದೆ ಎಂದರು.

ಈ ಅಶೋಕ ಗ್ರಾಮ ವಾಸ್ತವ್ಯ ಎಂದು ಸುಮ್ಮನೇ ಬಂದು ಹೋಗುವವರ ಪೈಕಿ ಅಲ್ಲ, ನಾನು ಇಡೀ ದಿನ ಇಲ್ಲಿದ್ದು ಜನರೊಂದಿಗೆ ಬೆರೆಯುವೆ, ಚಚೆÜರ್‍ ಮಾಡುವೆ. ಆಯ್ಕೆಯಾದ ಫಲಾನುಭವಿಗಳಿಗೆಲ್ಲರಿಗೂ ಇಲ್ಲೇ ಸೇವೆಗಳನ್ನು ವಿತರಿಸುವೆ. ಯಾರಿಗಾದರೂ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಜೊತೆ ಸೇರಿ ಅವುಗಳಿಗೆ ಪರಿಹಾರ ಇಲ್ಲೇ ನೀಡುವ ಯತ್ನ ಮಾಡುವೆ. ಬದ್ಧತೆಯಿಂದ ಗ್ರಾಮ ವಾಸ್ತವ್ಯ ಆರಂಭಿಸಿರುವೆ. ಇದು ನನಗೆ ಪಾಠಶಾಲೆಯಿದ್ದಂತೆ ಅಂತ ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದ್ದಾರೆ. 

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಆಡಕಿಯಲ್ಲಿ ಶನಿವಾರ ಕಂದಾಯ ಸಚಿವ ಆರ್‌.ಅಶೋಕ ಅವರು ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳ ಪ್ರಮಾಣ ಪತ್ರ, ಚೆಕ್‌ ವಿತರಿಸಿದರು.

ಸೇಡಂನಿಂದ ಎರೆದ ಜೀಪಿನಲ್ಲಿ ಸಚಿವರು ಆಡಕಿಗೆ ಬಂದಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಬಂದವರೇ ಪುರಾತನ ಕಸ್ತೂರಿ ರಂಗನಾಥ ಮಂದಿರಕ್ಕೆ ಭೇಟಿ ನೀಡಿ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಚೆಕ್‌ ವಿತರಿಸುತ್ತ ವೇದಿಕೆಯಲ್ಲೇ ಅವರೊಂದಿಗೆ ಮಾತುಕತೆ ನಡೆಸಿದರು. ಭೋಜನದ ನಂತರ ಮತ್ತೆ ಮೈದಾನಲ್ಲೇ ಕುಳಿತು ಜನರ ಅಹವಾಲು ಆಲಿಸಿದರು. ಜಿಲ್ಲಾಧಿಕಾರಿ ಯಶವಂತ ಗುರುಕರ್‌, ಆರ್‌ ಸಿ ಪ್ರಸಾದ್‌, ಶಾಸಕ ರಾಜಕುಮಾರ್‌ ತೇಲ್ಕೂರ್‌ ಸೇರಿದಂತೆ ಅನೇಕರಿದ್ದು ಸಚಿವರಿಗೆ ಸಾಥ್‌ ನೀಡಿದರು.