*  ಜವಳಿ ಪಾರ್ಕ್ ನಿರ್ಮಾಣಕ್ಕೆ 1500 ಎಕರೆ ಜಮೀನು ಜವಳಿ ಇಲಾಖೆಗೆ ವರ್ಗಾವಣೆ*  ಸೋಲಾರ್‌ ಪಾರ್ಕ್‌ಗೆ ಮೀಸಲಾದ ಹೊನ್ನಕಿರಣಗಿ ಜಮೀನು ಪಡೆಯಲಾಗಿದೆ*  ಡಿಸಿ ಕಾರ್ಯಕ್ಕೆ ಸಚಿವರ ಮೆಚ್ಚುಗೆ 

ಕಲಬುರಗಿ(ಜೂ.26): ಜಿಲ್ಲೆಯ ಹೊನ್ನಕಿರಣಗಿ ಬಳಿ ಸೋಲಾರ್‌ ಪಾರ್ಕ್‌ಗೆ ಮಂಜೂರಾಗಿದ್ದ 1500 ಎಕರೆ ಜಮೀನನ್ನು ಉದ್ದೇಶಿತ ಮೆಗಾ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಕರ್ನಾಟಕ ಪವರ್‌ ಕಾಪೋರೇಷನ್‌ ಸಂಸ್ಥೆಯಿಂದ ಜವಳಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.

ಕಲಬುರಗಿ ಐವಾನ್‌-ಎ-ಶಾಹಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿಯಲ್ಲಿ ಹೆಚ್ಚಿನ ಹತ್ತಿ ಬೆಳೆಯಲಾಗುತ್ತಿರುವುದರಿಂದ ಜವಳಿ ಪಾರ್ಕ್ ನಿರ್ಮಾಣಕ್ಕೆ ನಮ್ಮ ಮೊದಲ ಆದ್ಯತೆ ಕಲಬುರಗಿ ಆಗಲಿದೆ ಎಂದರು.

Kalaburagi News: ದತ್ತನ ಹೆಸರಲ್ಲಿ ಪೂಜಾರಿಗಳಿಂದಲೇ ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ?

ಜವಳಿ ಉದ್ಯಮಕ್ಕೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆವಿರುತ್ತದೆ. ಪ್ರತಿನಿತ್ಯ ಕಾರ್ಮಿಕರ ಓಡಾಟ ಇರುವ ಕಾರಣ ಮತ್ತು ಯೋಜನೆಗೆ ಪೂರಕವಾದ ಜಮೀನು ಪ್ರಸ್ತುತ ಬೇರೆಡೆ ಲಭ್ಯವಿಲ್ಲದ ಕಾರಣ ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಸೋಲಾರ್‌ ಪಾರ್ಕ್‌ಗೆ ಮೀಸಲಾದ ಹೊನ್ನಕಿರಣಗಿ ಜಮೀನು ಪಡೆಯಲಾಗಿದೆ. ಸೋಲಾರ್‌ ಪಾರ್ಕ್‌ಗೆ ಪ್ರತ್ಯೇಕ ಜಮೀನು ನೀಡಲಾಗುವುದು ಎಂದು ಸಚಿವರು ಹೇಳಿದರು.

1000 ಕೋಟಿ ರು. ಅನುದಾನ:

ಕೇಂದ್ರ ಸರ್ಕಾರದಿಂದ ಜವಳಿ ಪಾರ್ಕ್ ಕಲಬುರಗಿಗೆ ಮಂಜೂರಾದಲ್ಲಿ 1000 ಕೋಟಿ ರು. ಅನುದಾನ ಹರಿದು ಬರಲಿದೆ. ಜೊತೆಗೆ 25 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಡಾ.ಸರೋಜಿನಿ ಮಹಿಷಿ ವರದಿಯಂತೆ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ. 1000 ಕೋಟಿ ರು. ಅನುದಾನದಿಂದ 500 ಎಕರೆಯಲ್ಲಿ ರಸ್ತೆ, ಚರಂಡಿ ನಿರ್ಮಿಸಿ ಉಳಿದ 1000 ಎಕರೆ ಪ್ರದೇಶವನ್ನು ಸಂಪೂರ್ಣವಾಗಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣಕ್ಕೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ದೇಶದಲ್ಲಿ ಜವಳಿ ಉದ್ಯಮಕ್ಕೆ ಹೆಚ್ಚಿನ ರಿಯಾಯಿತಿ ನೀಡುವುತ್ತಿರುವ ರಾಜ್ಯ ನಮ್ಮದಾಗಿದೆ. ಸ್ಟ್ಯಾಂಪ್‌ ಡ್ಯೂಟಿ ವಿನಾಯಿತಿ ನೀಡಲಾಗಿದೆ. ವಿದ್ಯುತ್‌ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 2 ರು. ಸಬ್ಸಿಡಿ ಜೊತೆಗೆ ಕಾರ್ಮಿಕರಿಗೆ ವೇತನದ ಹೊರತಾಗಿ ಪ್ರತಿ ಮಾಹೆ 3000 ರು. ಹೆಚ್ಚುವರಿ ಸಬ್ಸಿಡಿ ಹಣ ನೀಡಲಾಗುತ್ತದೆ. ಇದಲ್ಲದೆ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಟಮ್‌ರ್‍ ಲೋನ್‌ ಪಡೆದಲ್ಲಿ ಶೇ.6 ರಷ್ಟು ಬಡ್ಡಿ ಸಬ್ಸಿಡಿ ಸಹ ನೀಡುವ ಯೋಜನೆ ಹೊಂದಿದ್ದೇವೆ ಎಂದರು.

PSI Recruitment Scam: ಮಾಜಿ ಸೈನಿಕನ ಬಂಧಿಸಿದ ಸಿಐಡಿ ಅಧಿಕಾರಿಗಳು!

ರಸಗೊಬ್ಬರ ಕೊರತೆಯಿಲ್ಲ:

ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಿಲ್ಲ. ಪ್ರಸಕ್ತ ಮುಂಗಾರಿಗೆ ಕಳೆದ ಏಪ್ರಿಲ್‌ನಿಂದ ಬರುವ ಸೆಪ್ಟೆಂಬರ್‌ವರೆಗೆ 25 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆ ಇದ್ದು, ಇದರಲ್ಲಿ ಈಗಾಗಲೆ 17 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಇನ್ನೆರಡು ದಿನದಲ್ಲಿ 2 ಸಾವಿರ ಮೆಟ್ರಿಕ್‌ ಟನ್‌ ಬರಲಿದೆ. ಹೀಗಿದ್ದಾಗಿಯೂ ಕೊರತೆಯಾದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರೊಂದಿಗೆ ಮಾತನಾಡಿ ರಸಗೊಬ್ಬರ, ಬೀಜದ ಕೊರತೆ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.

ಡಿಸಿ ಕಾರ್ಯಕ್ಕೆ ಸಚಿವರ ಮೆಚ್ಚುಗೆ:

ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅಧಿಕಾರ ವಹಿಸಿದ ನಂತದ ಕಳೆದ 5 ತಿಂಗಳಿನಲ್ಲಿ 10 ವರ್ಷದಿಂದ ಬಾಕಿ ಇದ್ದ 10 ಸಾವಿರ ಪಹಣಿ ತಿದ್ದುಪಡಿ ಅರ್ಜಿಗಳ ಪೈಕಿ 6500 ಅರ್ಜಿ ವಿಲೇವಾರಿ ಮಾಡಿದ್ದಾರೆ. ಎಜೆಎಸ್‌ಕೆ ಅರ್ಜಿಗಳ ವಿಲೇವಾರಿಯಲ್ಲಿ 6ನೇ ಹಾಗೂ ಭೂಮಿ ಅರ್ಜಿಗಳ ವಿಲೇವಾರಿಯಲ್ಲಿ 7ನೇ ಸ್ಥಾನ ಹೊಂದಿದೆ. ಇತ್ತೀಚೆಗೆ ನಗರಕ್ಕೆ ಹೊಂದಿಕೊಂಡಿರುವ ಜಾಫರಾಬಾದನಲ್ಲಿ 21 ಎಕರೆ ಅತಿಕ್ರಮಣ ಪ್ರದೇಶ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಮಕ್ಷಮ ಸಾರ್ವಜನಿಕರ ದೂರುಗಳನ್ನು ಆಲಿಸಲು ಯಶವಂತ ಗುರುಕರ್‌ ಆರಂಭಿಸಿರುವ ‘ಸ್ಪಂದನ ಕಲಬುರಗಿ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 72 ಗಂಟೆಯಲ್ಲಿಯೇ ಪಿಂಚಣಿ ಆದೇಶ ನೀಡುವ ಡಿಸಿ ಚಿಂತನೆಗೆ ಕಂದಾಯ ಸಚಿವರು ಒಪ್ಪಿ ರಾಜ್ಯದ್ಯಾಂತ ಯೋಜನೆಗೆ ಚಾಲನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ 6 ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೆ ಬಗೆಹರಿಸಿದ್ದಾರೆ ಎಂದು ಡಿಸಿ ಕಾರ್ಯದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಯುಸಿ ರಿಸಲ್ಟ್‌: ಜೇವರ್ಗಿ ಕೂಲಿ ಕಾರ್ಮಿಕನ ಮಗ ನಿಂಗಣ್ಣ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2 ನೇ ರ್‍ಯಾಂಕ್..!

ಕಿರುಹೊತ್ತಿಗೆ ಬಿಡುಗಡೆ:

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರತಂದಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಮಾಹಿತಿವುಳ್ಳ ಸೇವಾ, ಸುಶಾಸನ್‌, ಗರೀಬ ಕಲ್ಯಾಣ್‌ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಅವರು ಬಿಡುಗಡೆಗೊಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ. ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ, ಎಂಎಲ್‌ಸಿ ಬಿಜಿ ಪಾಟೀಲ, ಕ್ರೆಡೆಲ್‌ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಡಿಸಿ ಯಶವಂತ ಗುರುಕರ್‌, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ನಗರ ಅಧ್ಯಕ್ಷ ಸಿದ್ಧಾಜಿ ಪಾಟೀಲ ಇದ್ದರು.