ತನಿಖೆ ನಡೆಸಿ ಅವ್ಯವಹಾರಕ್ಕೆ ಇತಿಶ್ರೀ ಹಾಡುವುದಾಗಿ ಸಚಿವ ಮುನಿರತ್ನ ಗುಡಗು
- ಸ್ತ್ರೀಶಕ್ತಿ ಸಂಘಗಳ ಹೆಸರಿನಲ್ಲಿ ವಂಚನೆ ಮಾಡಿಕೊಂಡಿದ್ದರೂ ಅದನ್ನು ನೋಡಿಕೊಂಡು ಸರ್ಕಾರ ಕಣ್ಣು ಮುಚ್ಚಿ ಕೂರುವುದಿಲ್ಲ
- ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಎಳೆಎಳೆಯಾಗಿ ತನಿಖೆ ನಡೆಸಿ ಇತಿಶ್ರೀ ಹಾಡುವುದಾಗಿ ಎಚ್ಚರಿಕೆ
ಕೋಲಾರ (ಸೆ.26): ಸ್ತ್ರೀಶಕ್ತಿ ಸಂಘಗಳ ಹೆಸರಿನಲ್ಲಿ ವಂಚನೆ ಮಾಡಿಕೊಂಡಿದ್ದರೂ ಅದನ್ನು ನೋಡಿಕೊಂಡು ಸರ್ಕಾರ ಕಣ್ಣು ಮುಚ್ಚಿ ಕೂರುವುದಿಲ್ಲ. ಡಿಸಿಸಿ ಬ್ಯಾಂಕ್ (DCC Bank)ನಿಂದ ಸಾಲ ವಿತರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಎಳೆಎಳೆಯಾಗಿ ತನಿಖೆ ನಡೆಸಿ ಇತಿಶ್ರೀ ಹಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ (Muniratna) ಗುಡುಗಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಮಹಿಳಾ ಸಮಾವೇಶ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ
ಹಣ ವಂಚಿಸಿದ್ದರೆ ದೂರು ನೀಡಿ
ರಾಜ್ಯ ಸರ್ಕಾರ, ಪ್ರಧಾನಿ ಮೋದಿ ದೇಶದ ಹೆಣ್ಣು ಮಕ್ಕಳು ಅವರವರ ಶಕ್ತಿ ಮೇಲೆ ಬದುಕಬೇಕೆಂಬ ಉದ್ದೇಶದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸಹಾಯ ಮಾಡುತ್ತಿದೆ. ಕೇಂದ್ರದಿಂದ ಜಿಲ್ಲೆಯ 5012 ಸಂಘಗಳಲ್ಲಿನ 78720 ಫಲಾನುಭವಿಗಳಿಗೆ ಒಟ್ಟು 12.60 ಕೋಟಿ ರು.ಗಳ ಆರ್ಥಿಕ ಸಹಾಯ ಮಾಡಿದ್ದಾರೆ. ಹೆಣ್ಣು ಮಕ್ಕಳಹೆಸರಿನಲ್ಲಿ ಖಾತೆ ತೆರೆದು ಸದಸ್ಯೆಯರಿಗೆ ಬರಬೇಕಾದ 25,000 ರು.ಗಳಲ್ಲಿ 5000 ರು. ನೀಡಿ 20,000 ರು ವಂಚಿಸಿದ್ದರೆ ಅಂತಹವರು ನೇರವಾಗಿ ದೂರು ನೀಡಿ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.
ಪಾಪಿಗಳನ್ನು ದೇವರೂ ಕ್ಷಮಿಸುವುದಿಲ್ಲ
ಡಿಸಿಸಿ ಬ್ಯಾಂಕ್‌ನಿಂದ ನೀಡುವ ಸಾಲವನ್ನು ತಮ್ಮ ತಾತ, ಮುತ್ತಾತನ ಆಸ್ತಿ ಮಾರಿ ಸಹಾಯ ಮಾಡುತ್ತಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಶೋಷಿತರ ಹೆಸರಿನಲ್ಲಿ ಸಾಲ ವಿತರಿಸುತ್ತಾ ವಂಚಿಸಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಹಣವನ್ನು ದಾನದಂತೆ ನೀಡಲು ಅವರು ಯಾರು ಎಂದು ಪ್ರಶ್ನಿಸಿದ ಸಚಿವರು, ಇಂತಹ ಕೆಲಸ ಮಾಡಿದವರು ಯಾರೇ ಆಗಲಿ ಪ್ರಾಯಶ್ಚಿತ್ತ, ಪಶ್ಚಾತ್ತಾಪ ಪಡಬೇಕು. ಯಾರು ಎಷ್ಟೆಷ್ಟುಮಾಡಿದ್ದಾರೆ ಎಂಬುದನ್ನು ಮಾಹಿತಿ ಪಡೆಯುತ್ತಿರುವೆ. ಬಡವರ ಹೆಸರಿನಲ್ಲಿ ತಿನ್ನುವ ಪಾಪಿಗಳನ್ನು ದೇವರೂ ಕ್ಷಮಿಸಲ್ಲ ಎಂದು ಗುಡುಗಿದರು.
ಅಂದು ನನ್ನನ್ನು ಬಿಜೆಪಿಗೆ ಕರೆದಿದ್ದರು ಎಂದ ಕೈ ಶಾಸಕಗೆ ಈಗ ಮತ್ತೆ ಆಹ್ವಾನ
ಸಾಲ (Loan) ವಿತರಣೆಯಲ್ಲಿ ಲೋಪಗಳಾದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ. ವಂಚನೆ ಆದಲ್ಲಿ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ದೂರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.
ಹಣ ಅಧ್ಯಕ್ಷರ ಮನೆಯದ್ದಲ್ಲ
ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಬಾರ್ಡ್ , ಅಪೆಕ್ಸ್ ಬ್ಯಾಂಕ್ ನೆರವಿನಿಂದ ಮಹಿಳಾ ಸಂಘಗಳಿಗೆ ಸಾಲ ನೀಡುತ್ತದೆ, ಇದನ್ನು ತಮ್ಮ ಮನೆಯಿಂದಲೇ ಸಾಲ ನೀಡಿದಂತೆ, ಚುನಾವಣೆ (election) ಸಂದರ್ಭದಲ್ಲಿ ಬಳಸಿಕೊಳ್ಳುವುದು ನಡೆಯುತ್ತಿದೆ. ಸಾಲದ ಹಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆಯದ್ದಲ್ಲ. ಸಾಲ ವಿತರಣೆ ಕಾರ್ಯಕ್ರಮಗಳು ಕೂಡ ಇದೇ ರೀತಿ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರನ್ನು ಕೋರಿದರು.