ವಿಜಯಪುರ ಉತ್ಪಾದನೆ ವಲಯ ಆಗಿಸಲು ಕ್ರಮ: ಸಚಿವ ಎಂ.ಬಿ.ಪಾಟೀಲ
ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಸ್ತರಿಸುವ ಮೂಲಕ ಬೋಯಿಂಗ್ ಮಾದರಿಯ ವಿಮಾನಗಳು ಇಲ್ಲಿ ಇಳಿಯುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ನಾಲ್ಕೈದು ತಿಂಗಳಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಆರಂಭಗೊಳ್ಳಲಿದೆ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ
ವಿಜಯಪುರ(ನ.02): ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸೌಕರ್ಯಗಳನ್ನು ಕಲ್ಪಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದ ಅವರು, ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಸ್ತರಿಸುವ ಮೂಲಕ ಬೋಯಿಂಗ್ ಮಾದರಿಯ ವಿಮಾನಗಳು ಇಲ್ಲಿ ಇಳಿಯುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ನಾಲ್ಕೈದು ತಿಂಗಳಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಆರಂಭಗೊಳ್ಳಲಿದೆ ಎಂದು ಹೇಳಿದರು.
ಕುಡಿದ ಮತ್ತಿನಲ್ಲಿ ಡಯಾಲಿಸಿಸ್ ಮಾಡಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ: ಕುಡುಕನ ಯಡವಟ್ಟಿಗೆ ಮಹಿಳೆ ಬಲಿ
ಈ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ನವದೆಹಲಿ, ಗುಜರಾತ್ ಮೊದಲಾದ ರಾಜ್ಯಗಳೊಂದಿಗೆ ಔದ್ಯಮಿಕ, ಶೈಕ್ಷಣಿಕ, ಆರ್ಥಿಕ ಒಡನಾಟಗಳು ತೀವ್ರಗೊಳ್ಳಲಿವೆ. ದ್ರಾಕ್ಷಿ ಮೊದಲಾದ ಬೆಳೆಗಳ ರಫ್ತು ಚಟುವಟಿಕೆಗಳಿಗೆ ವಿಜಯಪುರ ವಿಮಾನ ನಿಲ್ದಾಣ ಹೆಬ್ಬಾಗಿಲು ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮ್ಯಾನುಫ್ಯಾಕ್ಚರಿಂಗ್ ಹಬ್:
ವಿಜಯಪುರ ಜಿಲ್ಲೆಯನ್ನು ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ದೃಢ ನಿರ್ಧಾರ ಕೈಗೊಂಡಿದ್ದು, ಶೀಘ್ರವೇ ಜಿಲ್ಲೆ ಉತ್ಪಾದನಾ ವಲಯದ ದೊಡ್ಡ ಕೇಂದ್ರವಾಗಿ ರೂಪುಗೊಳ್ಳುವ ದಿನಗಳು ದೂರವಿಲ್ಲ. ಈ ಮಹತ್ತರ ಕಾರ್ಯ ಸಾಧಿಸುವುದರಿಂದ ಕೈಗಾರಿಕಾ ವಲಯಗಳಲ್ಲಿ ತಯಾರಿಕಾ ಚಟುವಟಿಕೆಗಳು ಇಲ್ಲಿ ನೆಲೆಗೊಂಡು ಸಾವಿರಾರು ಉದ್ಯೋಗಗಳು ಸ್ಥಳೀಯ ಯುವಕರ ಕೈಗೆ ಶೀಘ್ರದಲ್ಲಿಯೇ ದೊರೆಯಲಿವೆ ಎಂದರು.
ಪಂಚ ಗ್ಯಾರಂಟಿಗಳನ್ನು ಸಹ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿನಿತ್ಯ ೪೦೮೬ ಸರತಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಇಲ್ಲಿಯವರೆಗೆ ೨.೨೪ ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸದುಪಯೋಗಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪಡೆಯಲು ೪,೪೯,೬೧೪ ಗೃಹ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೯೯ ಹಾಗೂ ನಗರ ಪ್ರದೇಶದಲ್ಲಿ ಶೇ.೯೫ ರಷ್ಟು ಗ್ರಾಹಕರು ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅದೇ ತೆರನಾಗಿ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಶೇ.೮೮ ರಷ್ಟು ಫಲಾನುಭವಿಗಳ ಅರ್ಜಿಗಳು ನೋಂದಣಿಯಾಗಿವೆ ಎಂದು ವಿವರಿಸಿದರು.
ಬರ ಪರಿಸ್ಥಿತಿ ನಿಭಾಯಿಸಲು ಸಿದ್ದತೆ:
ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ. ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮತ್ತೆ ಶಾಸಕರನ್ನು ಖರೀದಿ ಮಾಡಿದ್ರೆ ನಾಶವಾಗಿ ಹೋಗ್ತಿರಿ: ಸಚಿವ ಎಚ್.ಕೆ.ಪಾಟೀಲ್
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖಾಸಗಿ ಟ್ಯಾಂಕರ್‌ಗಳನ್ನು ಗೊತ್ತುಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಅಗತ್ಯವಿದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಸಹ ಗುತ್ತಿಗೆ-ಒಪ್ಪಂದ ಆಧರಿಸಿ ಪಡೆದುಕೊಳ್ಳುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀಗಳ ಆಶಯದಂತೆ ಹಸಿರು ಜಿಲ್ಲೆ ಪ್ರಯತ್ನ:
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಜಗತ್ತಿಗೆ ಬೆಳಕಾದವರು. ಅವರು ಇಹಲೋಕ ತ್ಯಜಿಸಿ ಜನವರಿ ೨ಕ್ಕೆ ಒಂದು ವರ್ಷ ತುಂಬುತ್ತದೆ. ಶ್ರೀಗಳು ಕೃಷಿ, ಗ್ರಾಮೀಣ ಬದುಕು, ಶಿಕ್ಷಣ, ವಿಜ್ಞಾನ, ಪರಿಸರ-ಪ್ರಕೃತಿ ಹೀಗೆ ಅನೇಕ ವಿಷಯಗಳ ಬಗ್ಗೆ ಅಮೃತಭರಿತವಾದ ಪ್ರವಚನವನ್ನು ಉಣಬಡಿಸುತ್ತಿದ್ದರು. ಯುವಪೀಳಿಗೆಗೆ ಶ್ರೀಗಳ ಸಂದೇಶ ಮುಟ್ಟಿಸಲು ವಿಜಯಪುರವನ್ನು ಹಸಿರು ಜಿಲ್ಲೆಯಾಗಿಸುವ ಪಣ ತೊಡಲಾಗಿದೆ. ಈ ಬಗ್ಗೆ ಮತ್ತಷ್ಟು ಅರಿವು ಮೂಡಿಸಲು ವೃಕ್ಷಥಾನ್ ಹೆರಿಟೇಜ್ ರನ್ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.