Asianet Suvarna News Asianet Suvarna News

ವಿಜಯಪುರದಲ್ಲಿ ಭೀಕರ ಬರ: ಫೀಲ್ಡಿಗಿಳಿದ ಸಚಿವ ಎಂ.ಬಿ.ಪಾಟೀಲ್..!‌

ವಿಜಯಪುರ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ಶಾಸಕರ ಜೊತೆಗೆ ಬರ ಪೀಡಿತ ಪ್ರದೇಶಗಳಿಗೆ ತೆರಳಿ ರೈತರ ಅಳಲು ಆಲಿಸಿದ್ದಾರೆ. ಇತ್ತ ಕಾಮಗಾರಿ ಬೇಗ ಮುಗಿಸಲು ಗುತ್ತಿಗೆದಾರನಿಗೆ ೨೦ ಗ್ರಾಂ ಬಂಗಾರ ಗಿಫ್ಟ್‌ ನೀಡುವ ಆಫರ್‌ ನೀಡಿದ್ದಾರೆ.

Minister MB Patil Conducted Drought Study in Vijayapura grg
Author
First Published Nov 15, 2023, 9:00 PM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ(ನ.15): ರಾಜ್ಯದಲ್ಲಿ ಬರ ಆವರಿಸಿದ್ದು, ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸ್ವತಃ ಬಿಜೆಪಿ ಪೀಲ್ಡಿಗಿಳಿದು ಬರ ಅಧ್ಯಯನ ನಡೆಸಿತ್ತು. ಇದ್ರ ಬೆನ್ನಲ್ಲೇ ಸಿಎಂ ಸೂಚನೆಯಂತೆ ಈಗ ಸಚಿವರೇ ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ಶಾಸಕರ ಜೊತೆಗೆ ಬರ ಪೀಡಿತ ಪ್ರದೇಶಗಳಿಗೆ ತೆರಳಿ ರೈತರ ಅಳಲು ಆಲಿಸಿದ್ದಾರೆ. ಇತ್ತ ಕಾಮಗಾರಿ ಬೇಗ ಮುಗಿಸಲು ಗುತ್ತಿಗೆದಾರನಿಗೆ ೨೦ ಗ್ರಾಂ ಬಂಗಾರ ಗಿಫ್ಟ್‌ ನೀಡುವ ಆಫರ್‌ ನೀಡಿದ್ದಾರೆ.

ಸಿಎಂ ಸೂಚನೆ ಬೆನ್ನಲ್ಲೇ ಪೀಲ್ಡಿಗಿಳಿದ ಉಸ್ತುವಾರಿ ಸಚಿವರು..!

ರಾಜ್ಯದಲ್ಲಿ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದು, ಭೀಕರ ಆವರಿಸಿದೆ. ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿದ ಕಾಂಗ್ರೆಸ್‌ ಸರ್ಕಾರ ಬರ ನಿರ್ವಹಣೆ ವಿಚಾರದಲ್ಲಿ ಯಡವಿದೆ ಎಂದು ಬಿಜೆಪಿ ಆರೋಪಿಸಿತ್ತು, ಅಷ್ಟೆ ಅಲ್ಲದೆ ಸ್ವತಃ ಬಿಜೆಪಿ ನಾಯಕರ ತಂಡಗಳೆ ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿತ್ತು. ಇದ್ರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವರುಗಳಿಗೆ ಬರ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವರು ಪೀಲ್ಡಿಗಿಳಿದಿದ್ದಾರೆ.

ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ: ಗೋವಿಂದ ಕಾರಜೋಳ

ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಂದ ಬರ ಪರಿಶೀಲನೆ..!

ವಿಜಯಪುರ ಜಿಲ್ಲೆಯಲ್ಲು ರೈತರಿಗೆ ಬರದ ಬರೆ ಬಿದ್ದಿದ್ದು, ಇಡೀ ಜಿಲ್ಲೆಯನ್ನ ಬರ ಪೀಡಿತ ಜಿಲ್ಲೆ ಎಂದು ಘೋಷಿಸಿಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್‌ ಚಡಚಣ ಹಾಗೂ ಇಂಡಿ ತಾಲೂಕುಗಳಲ್ಲಿ ಬರ ಪೀಡಿತ ಪ್ರದೇಶಗಳಿಗೆ ಶಾಸಕರ ಸಮೇತ ಭೇಟಿ ನೀಡಿ ರೈತರ ಅಳಲು ಆಲಿಸಿದರು. ಇಂಡಿ-ಚಡಚಣ ತಾಲೂಕುಗಳ ೧೯ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಜಾಕ್‌ವೆಲ್‌ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದ್ರು. ಕಾಮಗಾರಿ ಹೇಗೆ ನಡೆಯುತ್ತಿದೆ, ಎಷ್ಟು ದಿನಗಳಲ್ಲಿ ಮುಗಿಯಬಹುದು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಇಂಜೀನಿಯರ್‌ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದು, ಅಗತ್ಯ ಸೂಚನೆ ನೀಡಿದ್ರು.

"ಬೇಗ ಕಾಮಗಾರಿ ಮುಗಿದ್ರೆ ೨೦ ಗ್ರಾಂ ಚಿನ್ನ : ಸಚಿವರಿಂದ ಬಿಗ್ ಆಫರ್‌"..!‌

ಹೌದು, ಇನ್ನು ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಚಿವ ಎಂ ಬಿ ಪಾಟೀಲ್‌ ಬರದ ನಡುವೆ ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಯಲಿ ಎನ್ನುವ ದೃಷ್ಟಿಯಿಂದ ಗುತ್ತಿಗೆದಾರನಿಗೆ ಚಿನ್ನದಂತ ಆಫರ್‌ ನೀಡಿದ ಘಟನೆಯು ನಡೆದಿದೆ. ಇಂಡಿ ತಾಲೂಕಿನ ಅಗಸಾಳ ಗ್ರಾಮಗದ ಬಳಿ ಇಂಡಿ ಚಡಚಣ ತಾಲೂಕುಗಳ 19 ಕೆರೆಗಳಿಗೆ ನೀರು ಹರಿಸೋ ಯೋಜನೆಯ ಜಾಕ್ ವೆಲ್ ನಿರ್ಮಾಣ ಕಾಮಗಾರಿ ಪರಿಶೀಲನೆ ವೇಳೆ ಗುತ್ತಿಗೆದಾರನಿಗೆ ಸಚಿವರು ಆಫರ್‌ ನೀಡಿದ್ದಾರೆ.. ಬರ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನೀರಿನ ಅವಶ್ಯಕತೆ ಜಾಸ್ತಿ ಇದೆ. ಹೀಗಾಗಿ ಜಾಕವೆಲ್ ನಿರ್ಮಾಣದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸಬೇಕೆಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು. ಈ ವೇಳೆ ನಿಗದಿತ ಸಮಯದಲ್ಲೇ ಕಾಮಗಾರಿ ಮುಗಿಸಿದರೆ 20 ಗ್ರಾಂ ಚಿನ್ನ ನೀಡುತ್ತೇನೆಂದು ಹೇಳಿದ್ರು. ಸಚಿವರು ನೀಡಿದ ಆಫರ್‌ ನಿಂದಾಗಿ ಗುತ್ತಿಗೆದಾರ ಪುಳಕಿನಾಗಿದ್ದಲ್ಲದೆ, ಕಾಮಗಾರಿ ಬೇಗ ಮುಗಿಸಿಕೊಡುವ ಮಾತು ಕೊಟ್ಟಿದ್ದಾರೆ. ಇದೆ ವೇಳೆ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ನಮಗೂ ಸ್ವಲ್ಪ ಚಿನ್ನ ಹಾಕಿ ಕೇಳಿದ್ರು, ನಿಮಗೂ  ಹಾಕುತ್ತೇನೆಂದು ಹಾಸ್ಯಭರಿತವಾಗಿ ಸಚಿವರು ಮಾತನಾಡಿದರು.

ವಿಜಯೇಂದ್ರ ನೇಮಕ ದೊಡ್ಡವರ ಕೆಲಸ ನಾವು ಜೈ ಅನ್ನೋದಷ್ಟೇ: ಸಂಸದ ರಮೇಶ ಜಿಗಜಿಣಗಿ

ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ..!

ಚಾಕವೆಲ್ ನಿರ್ಮಾಣ ಕಾಮಗಾರಿ ಬಳಿಕ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಬೆಳೆ ಹಾಳಾದ ಜಮೀನುಗಳಿಗೆ ಭೇಟಿ ನೀಡಿದರು. ತೊಗರಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದ್ದನ್ನ ಗಮನಿಸಿದ್ರು. ಈ ವೇಳೆ ರೈತರಿಗೆ ಧೈರ್ಯ ತುಂಬಿದರು. ಇಂಚಗೇರಿ ಕೆರೆಗೆ ಎರಡ್ಮೂರು ವರ್ಷಗಳಿಂದ ನೀರು ಬಂದಿಲ್ಲಾ. ಸಧ್ಯ ಜಿಲ್ಲೆಯ ಕೆರೆಗಳಿಗೆ ನೀರು ಭರಿಸಲಾಗುತ್ತಿದೆ. ಈ ಹಿನ್ನಲೆ ಇಂಚಗೇರಿ ಕೆರೆಗೆ ತುರ್ತಾಗಿ ನೀರು ಭರಿಸಲಾಗುತ್ತದೆ ಎಂದು ಗ್ರಾಮದ ಜನರಿಗೆ ಭರವಸೆ ನೀಡಿದರು. ನಂತರ ಇಂಡಿ ತಾಲೂಕಿನ ಸಾವಳಸಂಗ ಗ್ರಾಮಕ್ಕೆ ಬಂದ ಸಚಿವರು ಹಾಳಾಗಿರೋ ಸೂರ್ಯಕಾಂತಿ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ವೀಕ್ಷಿಸಿದರು. ರೈತರಿಂದ ಬೆಳೆಹಾನಿಯ ಮಾಹಿತಿ ಪಡೆದ್ರು. ಖರ್ಚು-ವೆಚ್ಚ-ಹಾನಿಯ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಂಡರು.

ವರ್ಷದ ಎಲ್ಲ ದಿನಗಳು ಕೆಲಸ ನೀಡಿ; ಸಿಇಓಗೆ ಸೂಚನೆ..!

ವರ್ಷದಲ್ಲಿ 200 ದಿನ ಮಾತ್ರವಲ್ಲಾ 365 ದಿನವೂ ನರೇಗಾ ಯೋಜನೆಯ ಕೆಲಸ ನೀಡಬೇಕೆಂದು ಆಧಿಕಾರಿಗಳಿಗೆ ಸೂಚನೆ ನೀಡಿದರು.  ಎಷ್ಟೇ ಜನರು ಬಂದರೂ ಸಹ ಯಾರಿಗೂ ಕೆಲಸ ಇಲ್ಲಾ ಎಂದು ವಾಪಸ್ ಕಳಿಸದೇ ಎಲ್ಲರಿಗೂ ಕೆಲಸ ನೀಡಬೇಕೆಂದು ಜಿಪಂ ಸಿಇಓ ಅವರಿಗೆ ಸೂಚನೆ ನೀಡಿದರು. ಇನ್ನೂ ಈ ಬರ ಪರಿಶೀಲನೆಗೆ ಸಚಿವ ಎಂ ಬಿ ಪಾಟೀಲ್‌ ಗೆ ಇಂಡಿ ಶಾಸಕ ಯಶವಂತರಾಯಗೌ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಸಾತ್‌ ನೀಡಿದ್ರು, ಕೇಂದ್ರವೂ ರಾಜ್ಯದಲ್ಲಿ ಆವರಿಸಿದ ಬರ ನಿರ್ವಹಣೆಗೆ ಸಹಕಾರ ನೀಡಬೇಕು ಅಂತ ಆಗ್ರಹಿಸಿದ್ರು.  ಒಟ್ಟಿನಲ್ಲಿ ಸ್ವತಃ ಉಸ್ತುವಾರಿ ಸಚಿವರೇ ಶಾಸಕರೊಂದಿಗೆ ಪೀಲ್ಡಿಗಿಳಿದಿರೋದು ರೈತರಲ್ಲಿ ಕೊಂಚ ಧೈರ್ಯ ಮೂಡಿಸಿದೆ.

Follow Us:
Download App:
  • android
  • ios