Asianet Suvarna News Asianet Suvarna News

ವಿಜಯೇಂದ್ರ ನೇಮಕ ದೊಡ್ಡವರ ಕೆಲಸ ನಾವು ಜೈ ಅನ್ನೋದಷ್ಟೇ: ಸಂಸದ ರಮೇಶ ಜಿಗಜಿಣಗಿ

ಪಕ್ಷದ ಹಿರಿಯರು ಅವರದೇ ಆದ ಕಾರಣಕ್ಕೆ ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಹಳ ಯೋಚನೆ ಮಾಡಿ ಯಡಿಯೂರಪ್ಪರ ಮಗನೇ ಆಗಬೇಕು ಎಂದು ನೇಮಕ ಮಾಡಿದ್ದಾರೆ ಎಂದು ಹೇಳಿದ ಸಂಸದ ರಮೇಶ ಜಿಗಜಿಣಗಿ 

Vijayapura MP Ramesh Jigajinagi React to BY Raghavendra Appointed as BJP State President grg
Author
First Published Nov 14, 2023, 10:00 PM IST

ವಿಜಯಪುರ(ನ.14): ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ದೊಡ್ಡವರ ಕೆಲಸ ಎಂದು ಸಂಸದ ರಮೇಶ ಜಿಗಜಿಣಗಿ ಮಾರ್ಮಿಕವಾಗಿ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯರು ಅವರದೇ ಆದ ಕಾರಣಕ್ಕೆ ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಹಳ ಯೋಚನೆ ಮಾಡಿ ಯಡಿಯೂರಪ್ಪರ ಮಗನೇ ಆಗಬೇಕು ಎಂದು ನೇಮಕ ಮಾಡಿದ್ದಾರೆ ಎಂದು ಹೇಳಿದರು.

ವರಿಷ್ಠರ ಪ್ರಕಾರ ವಿಜಯೇಂದ್ರ ಆಯ್ಕೆ ಅನಿವಾರ್ಯ ಅನಿಸಿರಬೇಕು, ಅದಕ್ಕೆ ಅಧ್ಯಕ್ಷರಾಗಿದ್ದಾರೆ. ಅವರು ಆಗಿರುವುದರಿಂದ ನಮಗೇನೂ ಹೊಟ್ಟೆ ಉರಿ ಇಲ್ಲ. ನಾನೇ ಪಕ್ಷದ ರಾಜ್ಯ ಅಧ್ಯಕ್ಷ ಆಗಬೇಕು ಎಂದು ಬಯಸಿದ್ದೂ ಇಲ್ಲ. ಅದರ ಕನಸೂ ಕಂಡಿರಲಿಲ್ಲ. ಪಕ್ಷದ ನಿರ್ಧಾರಕ್ಕೆ ಸಹಮತ ಕೊಡಬೇಕಾಗುತ್ತದೆ. ಅವರು ಅಧ್ಯಕ್ಷರಾಗಿದ್ದಕ್ಕೆ ಏನೂ ತೊಂದರೆ ಇಲ್ಲ ಎಂದರು.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ: ಮಾಜಿ ಸಚಿವ ಗೋವಿಂದ ಕಾರಜೋಳ

ಕೈ ಎತ್ತುತ್ತಲೇ ಬಂದೀವಿ:

ನಾವೆಲ್ಲ ಮೊದಲಿನಿಂದಲೂ ದೊಡ್ಡವರಿಗೆ ಕೈ ಎತ್ತುತ್ತಲೇ ಬಂದಿದ್ದೇವೆ. ಈಗಲೂ ಜೈ ಅನ್ನೋದೆ ನಮ್ಮ ಕೆಲಸ ಎಂದು ಹೇಳಿದ ಸಂಸದ ಜಿಗಜಿಣಗಿಯವರ ಮಾತಲ್ಲಿ ಅಸಮಾಧಾನದ ಭಾವನೆ ಕಂಡುಬಂತು. ಎಂದಿನ ತಮ್ಮ ಆಡು ಮಾತಿನ ಶೈಲಿಯಲ್ಲಿ, "ಆಗ್ಲಿ ಬಿಡ್ರಪಾ ನಮಗೇನೂ ಬೇಸರವಿಲ್ಲ.." ಎನ್ನುತ್ತಲೇ ಒಂದಷ್ಟು ಒಳ ಬೇಗುದಿಯನ್ನೂ ಹೊರ ಹಾಕಿದರು.

ಯಡಿಯೂರಪ್ಪರನ್ನು ಕಡೆಗಣಿಸದಿದ್ರೆ ನಾವೇ ಅಧಿಕಾರದಲ್ಲಿರುತ್ತಿದ್ದೆವು: ವಿಜುಗೌಡ ಪಾಟೀಲ

ವಿಜಯೇಂದ್ರರ ನೇಮಕ ನಾವಂತೂ ಮಾಡಿಲ್ಲ. ಅದು ದೊಡ್ಡವರ ನಿರ್ಧಾರ ಎನ್ನುತ್ತಲೇ ನಮಗೆ ಗೊತ್ತಿದೆ, ವಿಧಾನಸಭೆಯಲ್ಲೂ ನೋಡಿದ್ದೇವೆ. ಲೋಕಸಭೆಯಲ್ಲೂ ನೋಡಿದ್ದೇವೆ ಅಲ್ಲಿ ದೊಡ್ಡ ದೊಡ್ಡ ಗೌಡ್ರು.. ಸಾಹುಕಾರುಗಳು ಬಂದ್ರ ನಮಸ್ಕಾರ, ಅವರ ಪರವಾಗಿ ಜೈ ಅಂತ ಕೈ ಎತ್ತುತ್ತಲೇ ಇದ್ದೇವೆ ಎಂದಿದ್ದು ಮಾರ್ಮಿಕವಾಗಿತ್ತು.

ನಮಗ್ಯಾರೂ ಕೈ ಎತ್ತಲ್ಲ

75 ವರ್ಷವಾಯ್ತು ನಾವು ಗೌಡ್ರು, ಸಾಹುಕಾರರು ಅಂತ ಎಲ್ಲರಿಗೂ ಕೈ ಎತ್ತುತ್ತಲೇ ಇದ್ದೀವಿ.. ನಮಗೆ ಉಳಿದವರು ಯಾರೂ ಕೈ ಎತ್ತಿಲ್ಲ. ಇದು ಭಾಳ ನೋವಿನ ಸಂಗತಿ ಎಂದು ಹೇಳಿದ ರಮೇಶ ಜಿಗಜಿಣಗಿ ಅವರ ಮಾತಿನಲ್ಲಿ ದಲಿತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ಪ್ರಮುಖ ಹುದ್ದೆ ಸಿಗಬೇಕಿತ್ತು ಎನ್ನುವ ಹಳಹಳಿ ಇತ್ತು.

Follow Us:
Download App:
  • android
  • ios