Asianet Suvarna News Asianet Suvarna News

'ಬಿಜೆಪಿ-ಜೆಡಿಎಸ್‌ ಒಂದಾಗಿದ್ದಕ್ಕೆ ಕಾಂಗ್ರೆಸ್‌ಗೆ ಹೊಟ್ಟೆಯುರಿ'

ಕುಡಿವ ನೀರು ಕೊಡುವುದು ಪುಣ್ಯದ ಕೆಲಸ| ಏನು ಬೇಕೋ ಅದನ್ನು ಕೇಳಿ ಪಡೆಯಿರಿ ಇಲ್ಲಾಂದ್ರ ನಮ್ಮನ್ನು ಹರಾಜು ಹಾಕಿ: ಕೆ.ಎಸ್‌.ಈಶ್ವರಪ್ಪ| ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಈಶ್ವರಪ್ಪ|

Minister KS Eshwarappa Talks Over Congress grg
Author
Bengaluru, First Published Feb 20, 2021, 2:52 PM IST

ರಾಯಚೂರು(ಫೆ.20): ಜನಪ್ರತಿನಿಧಿಗಳು ಜಿಲ್ಲೆಗೆ ಏನು ಬೇಕೋ ಅದನ್ನು ಸರ್ಕಾರದ ಗಮನಕ್ಕೆ ತಂದು ಕೇಳಿ ಪಡೆಯುವ ಕೆಲಸವನ್ನು ಮಾಡಬೇಕು. ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ ವಿಧಾನಸೌಧದಲ್ಲಿ ನಮ್ಮನ್ನು ಹರಾಜು ಹಾಕಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ. 

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯ ಶಾಸಕರು, ಎಂಎಲ್ಸಿಗಳು ನಮನ್ನು ಜಿಲ್ಲೆಗೆ ಕರೆಸಿಕೊಳ್ಳಬೇಕು, ಸಭೆಗಳಲ್ಲಿ ಸಮಸ್ಯೆಗಳು, ಅಭಿವೃದ್ಧಿಗೆ ಬೇಕಾದ ವಿಷಯಗಳ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಎಲ್ಲರೂ ಚುರುಕಾಗಿ ಕೆಲಸ ಮಾಡಬೇಕು ಎಂದರು. ಪ್ರತಿ ಮೂರು ತಿಂಗಳಿಗೊಂದು ಸಲ ಜಿಲ್ಲೆಗೆ ನಾನು ಬರಲು ಸಿದ್ಧವಿದ್ದು ತಾವುಗಳು ನನನ್ನು ಕರೆಸಿಕೊಂಡು ಚರ್ಚಿಸಿ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಬೇಕು ಎಂದು ಹೇಳಿದರು.

ನೀರು ಕೊಡುವುದು ಪುಣ್ಯದ ಕಾರ್ಯ:

ಸಾರ್ವಜನಿಕರಿಗೆ ಶುದ್ಧ ಕುಡಿವ ನೀರನ್ನು ಕೊಡುವುದು ಪುಣ್ಯದ ಕಾರ್ಯವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಕುಡಿವ ನೀರನ್ನು ಒದಗಿಸುವುದಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ಬೇಸಿಗೆಗೆ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು, ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಜಲಧಾರೆ, ಜಲ ಮೀಷನ್‌ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಬಹುಗ್ರಾಮ ಕುಡಿವ ನೀರಿನ ಯೋಜನೆ ಕಾಮಗಾರಿಗಳ ಅನುಷ್ಠಾನ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿ ಜನರಿಗೆ ಕುಡಿವ ನೀರನ್ನು ಒದಗಿಸಬೇಕು ಎಂದು ತಾಕೀತು ಮಾಡಿದರು.

'ಗೋಮಾತೆ ಶಾಪದಿಂದ ಚಾಮುಂಡೇಶ್ವರಿಯಲ್ಲಿ ಸೋತ್ರೂ ಸಿದ್ದುಗೆ ಬುದ್ಧಿ ಬಂದಿಲ್ಲ'

ಜಿಲ್ಲೆಯನ್ನು ಜಲಧಾರೆ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳಗಳ ಸಂಪರ್ಕ ಕಲ್ಪಿಸಿ ನೀರು ಪೂರೈಸುವುದಕ್ಕೆ 1,700 ಕೋಟಿ ಮೊತ್ತದ ಯೋಜನೆ ಅನುಷ್ಠಾನಕ್ಕಾಗಿ ನಬಾರ್ಡ್‌ ಈಗಾಗಲೇ ಅರ್ಧದಷ್ಟ ಸಾಲ ನೀಡಲು ಒಪ್ಪಿಗೆ ನೀಡಿದೆ. ಇನ್ನುಳಿದ ಅರ್ಧ ಪಾಲನ್ನು ಕೇಂದ್ರದ ಜಲಜೀವನ್‌ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನದಿಯ ನೀರನ್ನು ನಳ ಸಂಪರ್ಕದ ಮೂಲಕ ಮನೆ ಮನೆಗೂ ನೀಡಿ, ಆ ಮೂಲಕ ಪ್ರತಿಯೊಬ್ಬರಿಗೂ ಶುದ್ದ ಕುಡಿಯವ ನೀರು ಪೂರೈಸುವ ಈ ಯೋಜನೆಯಡಿ ರಾಯಚೂರು ಜಿಲ್ಲೆಯೂ ಒಂದಾಗಿದೆ, ಅದಕ್ಕಾಗಿ ನಾರಾಯಣಪೂರ ಜಲಶಯದಿಂದ ನೀರನ್ನು ತರಲು ಅನುಮತಿಯೂ ಲಭಿಸಿದ್ದು, ಅಂದಾಜು 1,918 ರೂ.ಗಳು ವೆಚ್ಚವಾಗಲಿದೆ, ಈ ದೆಶೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮತ್ತು ಸಂಸದರೊಂದಿಗೆ ಪರಾಮರ್ಶೆ ನಡೆಸಿದ್ದು, ಆದಷ್ಟುಬೇಗನೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಜಲ ಜೀವನ ಮಿಷನ್‌ ಯೋಜನೆಯಡಿ ಮನೆ-ಮನೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 225 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ, ಜಿಲ್ಲೆಯ 313 ಗ್ರಾಮಗಳ ಪೈಕಿ 307 ಗ್ರಾಮಗಳ ಸಮಗ್ರ ಯೋಜನ ವರದಿ (ಡಿಪಿಆರ್‌) ಸಿದ್ದಗೊಂಡಿದೆ, ಅವುಗಳಲ್ಲಿ 286 ಕಾಮಗಾರಿಗಳಿಗೆ ಟೆಂಡರ್‌ ಪೂರ್ಣಗೊಂಡಿದ್ದು, 213 ಕಾಮಗಾರಿ ಪ್ರಾರಂಭಗೊಂಡಿದ್ದು, ಅವುಗಳನ್ನು ಮಾ.26ರೊಳಗೆ ಪೂರ್ಣಗೊಳಿಸಬೇಕು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು, ಗ್ರಾಮೀಣ ಜನರ ಕುಡಿಯುವ ನೀರು ಸೌಲಭ್ಯಕ್ಕಾಗಿ ಬಹುಗ್ರಾಮ ಯೋಜನೆಯನ್ನು ಸಮಪರ್ಕವಾಗಿ ಜಾರಿಗೊಳಿಸಲು ವಿಫಲರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ, ಶಾಸಕರಾದ ಡಾ.ಶಿವರಾಜ ಪಾಟೀಲ್‌, ಬಸನಗೌಡ ದದ್ದಲ್‌, ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ ನಾಡಗೌಡ, ಪಂಚಾಯತ್‌ ರಾಜ್‌ ಇಲಾಖೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಸೇರಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕುಮಾರಸ್ವಾಮಿ ಸಿಎಂ ಆಗಲು ಕಾರಣ ಯಾರು? ದೇವೇಗೌಡ್ರು ಬಿಚ್ಚಿಟ್ರು ರಹಸ್ಯ

ಬಿಜೆಪಿ-ಜೆಡಿಎಸ್‌ ಒಂದಾಗಿದ್ದೀರಿ, ನಿಮಗೆ ಹೊಟ್ಟೆನೋವು

ರಾಯಚೂರಿನ ಜಿಪಂ ಸಭಾಂಗಣದಲ್ಲಿ ನಡೆದ ಆರ್‌ಡಿಪಿಆರ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಕಾಂಗ್ರೆಸ್‌ನ ಗ್ರಾಮೀಣ ಶಾಸಕ ಬಸವನೌಡ ದದ್ದಲ್‌ ಅವರು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಒಂದಾಗಿದ್ದೀರಿ ಎಂದು ಹೇಳಿ ಸಚಿವ ಈಶ್ವರಪ್ಪ ಅವರ ಕಾಲೆಳೆಯುವ ಪ್ರಯತ್ನ ನಡೆಸಿದರು ಇದಕ್ಕೆ ಉತ್ತರಿಸಿದ ಈಶ್ವರಪ್ಪ ಅದಕ್ಕೆಯೇ ನಿಮಗೆ ಹೊಟ್ಟೆಯುರಿ ಎಂದರು.

ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ, ಕಾಂಗ್ರೆಸ್‌ ಶಾಸಕ ಬಸನಗೌಡ ದದ್ದಲ್‌ ಅವರು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿಲ್ಲವೆಂದು ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಫೋನ್‌ ಮಾಡಿ ತಿಳಿಸುವುದಲ್ಲ ನಾವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ ಅವುಗಳನ್ನು ಸಹ ಅವರಿಗೆ ಮುಟ್ಟಿಸಬೇಕು ಎಂದು ಈಶ್ವರಪ್ಪ ಸಭೆಯಲ್ಲಿ ಹೇಳಿದರು ಹಾಗ ದದ್ದಲ್‌ ನೀವು- ಅವರು (ಬಿಜೆಪಿ-ಜೆಡಿಎಸ್‌) ಒಂದಾಗಿದ್ದೀರಿ ಎನ್ನುತ್ತಿದ್ದಂತೆ ಅದಕ್ಕಾಗಿಯೇ ನಿಮಗೆ (ಕಾಂಗ್ರೆಸ್‌) ಹೊಟ್ಟೆಕಿಚ್ಚು ಎಂದು ಹೇಳುತ್ತಿದ್ದಂತೆಯೇ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ರಾಯರ ದರ್ಶನ ಪಡೆದ ಈಶ್ವರಪ್ಪ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಶುಕ್ರವಾರ ಭೇಟಿ ನೀಡಿದರು. ಸುಕ್ಷೇತ್ರದ ಮಂಚ್ಚಾಲಮ್ಮ ದೇವಿಗೆ ಪೂಜೆ ನೆರವೇರಿಸಿದ ಈಶ್ವರಪ್ಪ ಅವರು ಬಳಿಕ ಶ್ರೀಗುರುರಾಘವೇಂದ್ರ ರಾಯರ ಮೂಲ ಬೃಂದಾವನ ದರ್ಶನ ಪಡೆದರು. ನಂತರ ಪೀಠಾದಿಪತಿ ಸುಭುದೇಂದ್ರ ತಿರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಭೋಜನಾಲಯ ಉದ್ಘಾಟನೆ

ರಾಯಚೂರು ತಾಲೂಕಿನ ದೇವಸೂಗೂರು ಗ್ರಾಪಂ ವ್ಯಾಪ್ತಿಯಲ್ಲಿ ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ವಿದ್ಯಾರ್ಥಿಗಳ ಭೋಜನಾಲಯ ಮತ್ತು ಅಡುಗೆ ಕೋಣೆಯನ್ನು ಸಚಿವ ಕೆ.ಎಸ್‌ ಈಶ್ವರಪ್ಪ ಉದ್ಘಾಟಿಸಿದರು. ನರೇಗಾ ಯೋಜನೆಯಡಿ 14 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಭೋಜನಾಲಯ ಮತ್ತು 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಡುಗೆ ಕೋಣೆಯನ್ನು ಬಳಕೆಗೆ ಚಾಲನೆ ನೀಡಿದರು.
 

Follow Us:
Download App:
  • android
  • ios