ಶಿವಮೊಗ್ಗ(ಏ.13): ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಬಡ ಹಾಗೂ ನಿರಾಶ್ರಿತರ ಹಸಿವು ತಣಿಸಲು ನಗರದಲ್ಲಿ ಡಿ.ಕೆ.ಶಿವಕುಮಾರ್‌ ಕ್ಯಾಂಟೀನ್‌ ಮೂಲಕ ಉಚಿತವಾಗಿ ಬೆಳಗ್ಗಿನ ಉಪಹಾರ, ಕುಡಿಯುವ ನೀರು ವಿತರಣೆ ಮಾಡಬೇಕೆಂಬ ಚಿಂತನೆ ಇದೆ ಎಂದು ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ತಿಳಿಸಿದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಿಕ್ಷುಕರಿಗೆ, ನಿರಾಶ್ರಿತರಿಗೆ, ದಿನಗೂಲಿ ನೌಕರರಿಗೆ ಮತ್ತು ಲಾಕ್‌ಡೌನ್‌ ಬಗ್ಗೆ ಅರಿವಿಲ್ಲದವರಿಗೆ ತಿಂಡಿ, ಊಟ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡು ಕೆಲವು ಸಂಘ ಸಂಸ್ಥೆಗಳು, ನಾಗರಿಕರು ಸೇವಾ ಮನೋಭಾವದಿಂದ ಪ್ರತಿದಿನ ಉಚಿತವಾಗಿ ನಿರಾಶ್ರಿತರಿಗೆ, ಭಿಕ್ಷುಕರಿಗೆ, ತೊಂದರೆಗೆ ಸಿಲುಕಿರುವವರಿಗೆ ಆಹಾರ, ನೀರು ಒದಗಿಸಲು ಮುಂದಾಗಿದ್ದರು. ಆದರೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿ ಯಾವುದೇ ಸಂಘ ಸಂಸ್ಥೆಗಳು ಭಿಕ್ಷುಕರಿಗಾಗಲೀ, ದಾರಿಹೋಕರಿಗಾಗಲೀ ಆಹಾರ ವಿತರಿಸಬಾರದು ಎಂಬ ಆದೇಶ ಹೊರಡಿಸಿದ್ದು, ಇದರಿಂದಾಗಿ ನಿರಾಶ್ರಿತರಿಗೆ ಬಡ ಜನತೆಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.

ಕೋವಿಡ್‌-19 ವಿರುದ್ಧ ಹೋರಾಟ: ಕೊರೋನಾ ವಾರಿಯ​ರ್ಸ್‌ಗೆ 1 ಲೀ. ಪೆಟ್ರೋಲ್‌ ಉಚಿತ

ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಜೊತೆಯಲ್ಲಿರುವ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ಆಹಾರ ಕೊಡುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ರೋಗಿಗಳಿಗೆ ಮಾತ್ರ ಉಚಿತವಾಗಿ ಆಹಾರ ನೀಡಲಾಗುತ್ತದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವವರಿಗೂ ಆಹಾರ ದೊರಕದೆ ಸಮಸ್ಯೆ ಎದುರಾಗಿದೆ. ಹೀಗಾಗಿ, ಇಂಥವರನ್ನು ಗುರುತಿಸಿ ಸಂಘಟನೆಯಿಂದ ಬೆಳಗಿನ ಉಪಹಾರ ಮತ್ತು ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಜಿಲ್ಲಾಡಳಿತ ಮತ್ತು ನಗರಪಾಲಿಕೆ ವಿಧಿಸುವ ನಿಬಂಧನೆಗಳನ್ನು ಪಾಲಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ನಮ್ಮ ಸಂಘಟನೆಯು ನಿರಾಶ್ರಿತರಿಗೆ ಒಂದೇ ಸ್ಥಳದಲ್ಲಿ ಉಚಿತವಾಗಿ ಬೆಳಗ್ಗೆ 7ರಿಂದ 11ಗಂಟೆವರೆಗೆ ಉಪಹಾರ ಮತ್ತು ನೀರನ್ನು ವಿತರಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಅನುಮತಿ ದೊರತರೆ ಪ್ರತಿದಿನ ಉಚಿತವಾಗಿ ಉಪಹಾರ ಹಾಗೂ ನೀರನ್ನು ಪೂರೈಕೆ ಮಾಡಲಾಗುವುದು. ಕಾಂಗ್ರೆಸ್‌ ಪಕ್ಷದ ಕಚೇರಿ ಅಥವಾ ನಗರದ ಪ್ರಮುಖ ಸ್ಥಳದಲ್ಲಿ ಈ ಒಂದು ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶ ನಮ್ಮದು ಎಂದು ಹೇಳಿದರು.

ಹಣ್ಣು ಬೆಳೆಗಾರರಿಗೆ ಸಮಸ್ಯೆ:

ಎಲ್ಲೆಡೆ ಲಾಕ್‌ಡೌನ್‌ ಆದೇಶದಿಂದಾಗಿ ಹಣ್ಣು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟಾವಿಗೆ ಬಂದಿರುವ ಅನಾನಸ್‌, ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜ, ಸಪೋಟ ಸೇರಿ ಇನ್ನಿತರ ಬೆಳೆಗಳ ಸಾಗಾಟ ವಾಹನವಿಲ್ಲದೆ ರೈತರು ಪರದಾಡುತ್ತಿದ್ದು, ಸಾಲಸೋಲ ಮಾಡಿ ಬೆಳೆದ ಬೆಳೆ ಇದೀಗ ಕೈಗೆ ಬಾರದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಹಳಷ್ಟು ಎಚ್ಚರಿಕೆ ವಹಿಸಿದ್ದರೂ ಕೆಲವರು ಅಡ್ಡದಾರಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಅಧಿಕಾಗಳಿಗೆ ತಪ್ಪು ಮಾಹಿತಿ ನೀಡಿ ಹಾಲಿನ ವಾಹನ, ತರಕಾರಿ ವಾಹನ ಮುಂತಾದವುಗಳಲ್ಲಿ ಕೆಲವರು ಅಕ್ರಮವಾಗಿ ಜಿಲ್ಲೆಗೆ ಪ್ರವೇಶ ಪಡೆದಿದ್ದಾರೆ. ಸಹೀಗಾಗಿ, ಶಿವಮೊಗ್ಗ ಜಿಲ್ಲೆಯ ಗಡಿಭಾಗದ ಪ್ರತಿಯೊಂದು ಚೆಕ್‌ಪೋಸ್ಟ್‌ಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು, ಅನವಶ್ಯಕವಾಗಿ ಜಿಲ್ಲೆಯಲ್ಲಿ ಇರುವುದು ಕಂಡುಬಂದರೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಾಲಿಕೆ ವಿಪಕ್ಷ ನಾಯಕ ಎಚ್‌.ಸಿ.ಯೋಗೇಶ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಪ್ರವೀಣ್‌ಕುಮಾರ್‌, ಕಿರಣ್‌, ನಿತಿನ್‌, ರಾಘವೇಂದ್ರ, ಅಣ್ಣಪ್ಪ, ಕವಿತಾ ಇದ್ದರು.