ಅಥಣಿ(ನ.23): ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಅಂತಾ ಓರ್ವ ಮಹಾಪುರುಷ ಹೇಳುತ್ತಾರೆ. ಆದ್ರೆ ನಿಮ್ಮ ಅಪ್ಪ ಮತ್ತು ಮಗನನ್ನು ಗೆಲ್ಲಿಸೋಕೆ ನಿಮಗೆ ಆಗಲಿಲ್ಲ. ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ್-ನಿಖಿಲ್ ಗೆಲ್ಲಲೇ ಇಲ್ಲ. ಅವರನ್ನೇ ಗೆಲ್ಲಿಸೋಕೆ ಆಗದೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸ್ತೇನಿ ಅಂತಿಯಲ್ಲ ನಿಂಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಕೆ. ಎಸ್. ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇನ್ನೊಬ್ಬ‌ ಮಹಾಪುರುಷ ಈ ಚುನಾವಣೆ ಬಳಿಕ ಸರ್ಕಾರ ಬೀಳುತ್ತೆ ಅಂತಾ ಹೇಳಿತ್ತಿದ್ದಾರೆ. ಯಾಕೋ ಅವರ ಹೆಸರು ಹೇಳೋಕೆ ಬಾಯಿಯೇ ಬರುತ್ತಿಲ್ಲ, ಆಗ ಸಿಎಂ ಆದಾಗ ಸೊಕ್ಕಿನಿಂದ ಮುಂದೆ ನಾನೇ ಸಿಎಂ ಅಂತಾ ಹೇಳಿದ್ರು, ಕಾಂಗ್ರೆಸ್ ಸರ್ಕಾರ ಕೆಡವಿ 78 ಸ್ಥಾನಕ್ಕೆ ತಂದ ಸಿಎಂ ಆಗಿದ್ದರು. ಕುಮಾರಸ್ವಾಮಿ ಅವರಪ್ಪನ ಆಣೆಗೂ ಸಿಎಂ ಆಗೊಲ್ಲ ಅಂದಿದ್ದ ಅವರು, ಆದ್ರೆ ಬದಲಾದ ಕಾಲಘಟ್ಟದಲ್ಲಿ ಇವರೇ ಅವರ ಪಾದದಡಿ ಕುಳಿತು ಸಿಎಂ ಮಾಡಿದ್ದರು ಎಂದು ನೇರವಾಗಿ ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೇವೆಗೌಡ, ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟೂ ಬರೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ದರು. ಆದ್ರೆ ಪಾಪ ಅವರಿಗೆ ಒಂದೊಂದೇ ನಾಮಾ ಬಿತ್ತು. ಸಿದ್ದರಾಮಯ್ಯ ಯಾವುದು ಆಗುತ್ತೆ ಅಂತಾರೋ ಅದು ಆಗೋದಿಲ್ಲ, ಯಾವುದು ಆಗೋಲ್ಲ ಅಂತಾರೆ ಅದು ಆಗುತ್ತದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ-ಲಕ್ಷ್ಮಣ ಸವದಿ ರಾಮ-ಲಕ್ಷ್ಮಣ ಇದ್ದಂತೆ. ಅವರೊಂದಿಗೆ ನಾವೆಲ್ಲ ಸೈನಿಕರು ಇದ್ದ ಹಾಗೆ ಎಂದಿದ್ದಾರೆ. 

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿರಲು ಲಾಯಕ್ ಇಲ್ಲ ಅಂತಾ ಅವರದೇ ಪಕ್ಷದವರೇ ಹೇಳಿದ್ದಾರೆ. ರಾಮ-ಲಕ್ಣ್ಮಣ(ಯಡಿಯೂರಪ್ಪ-ಲಕ್ಷ್ಮಣ ಸವದಿ) ಯುದ್ಧಕ್ಕೆ ಹೋರಟ್ರೆ ನಾವೆಲ್ಲ ಸೈನಿಕರ ರೀತಿಯಲ್ಲಿ ನುಗ್ಗಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. 

ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಅಥಣಿಗೆ ಒಬ್ಬ ಡಿಸಿಎಂ, ಇನ್ನೊಬ್ಬ ಮಂತ್ರಿ, ಅಥಣಿಗೆ ಒಬ್ಬಿಬ್ಬರು ಮಂತ್ರಿಗಳಾಗಲಿದ್ದಾರೆ. ಶಿವಮೊಗ್ಗ ಜಿಲ್ಲೆ ವಿಚಾರದಲ್ಲಿ ನನಗೆ ಹೊಟ್ಟೆ ಉರಿ‌ ಇದೆ ಎಂದು ಇದೇ ವೇಳೆ ಈಶ್ವರಪ್ಪ ಹೇಳಿದ್ದಾರೆ.  

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.