ಮತದಾರರ ಪಟ್ಟಿಯಲ್ಲಿ ಇದ್ದ ಹೆಸರು ತೆಗೆದು ಹಾಕಿ ಮತದಾನ ಹಕ್ಕು ಕಳೆದುಕೊಂಡರೆ ಅದಕ್ಕೆ ಏನು ಪರಿಹಾರ? ಅದಕ್ಕೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರು (ಮೇ.23): ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗ ಆದೇಶವನ್ನು ಪಾಲಿಸುತ್ತಿದೆ. ಆದರೆ ಎಸ್ಐಆರ್‌ನಲ್ಲಿ ಇರುವ ವಿಷಯಗಳ ಬಗ್ಗೆ ಹೇಗೆ ಹೋರಾಡಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಏನು ಪ್ರಯೋಗ ಮಾಡುತ್ತಾರೆ ಎಂದು ಗೊತ್ತಿಲ್ಲ. ಮತದಾರರ ಪಟ್ಟಿಯಲ್ಲಿ ಇದ್ದ ಹೆಸರು ತೆಗೆದು ಹಾಕಿ ಮತದಾನ ಹಕ್ಕು ಕಳೆದುಕೊಂಡರೆ ಅದಕ್ಕೆ ಏನು ಪರಿಹಾರ? ಅದಕ್ಕೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಲದಲ್ಲಿ ಸಾಫ್ಟ್‌ವೇರ್ ಉಪಯೋಗ ಮಾಡಿದ್ದರು. ಯಾವ ಯಾವ ಮತಗಳನ್ನು ತೆಗೆಯಬೇಕು ಎಂದು ಆ ಸಾಫ್ಟ್‌ವೇರ್ ನಿರ್ಧಾರ ಮಾಡಿತು. ಆ ರೀತಿ ಇಲ್ಲಿ ಅವಕಾಶ ಸಿಗಬಾರದು. ಅಲ್ಲದೆ ಎಐ ಫಾರ್ಮುಲಾ ಬಳಕೆ ಮಾಡಿದ್ದರು. ಕರ್ನಾಟಕದಲ್ಲಿ ಏನು ತೆಗೆದುಕೊಂಡು ಬರುತ್ತಾರೆ ಎಂದು ಗೊತ್ತಿಲ್ಲ. ಚುನಾವಣಾ ಆಯೋಗಕ್ಕೆ ಸುಪ್ರೀಂ ಪವರ್ ಕೊಟ್ಟಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕೋರ್ಟ್‌ನಲ್ಲಿಯೂ ಪ್ರಶ್ನೆ ಮಾಡುವಂತಿಲ್ಲವಂತೆ. ಆ ಕಾನೂನು ತೆಗೆದುಕೊಂಡು ಬಂದಿದ್ದಾರೆ. ನಮ್ಮ ಪತ್ರಿಕಾ ಸ್ವಾತಂತ್ರ್ಯ 157 ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕಿಂತ ನಾವು ಹಿಂದೆ ಬಿದ್ದಿದ್ದೇವೆ ಎಂದು ಹೇಳಿದರು.

ಚುನಾವಣೆ ಗೆಲ್ಲಲು ಇಡಿ, ಐಟಿ ಬಳಕೆ

ಪಶ್ಚಿಮ‌ ಬಂಗಾಲ ಚುನಾವಣೆಯಲ್ಲಿ ಚುನಾವಣಾ ಆಯೋಗ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ. ವಿರೋಧ ಪಕ್ಷಗಳಿಗೆ ಅವರ ಮೇಲೆ ವಿಶ್ವಾಸ, ನಂಬಿಕೆ ಇಲ್ಲ. ದೇಶದಲ್ಲಿ ಚುನಾವಣಾ ಆಯೋಗದ ಬಗ್ಗೆ ಯಾರು‌ ಸಹ ಸಂಶಯ ಪಡ್ತಾ ಇರಲಿಲ್ಲ. ನಿಷಕ್ಷಪಾತ, ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿದ್ದರು. ಇವತ್ತು ಆ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು. ಪಂಜಾಬ್ ಚುನಾವಣೆ ಬರುತ್ತಿದ್ದು, ಹಾಗಾಗಿ ಇಡಿ, ಐಟಿ ಅಲ್ಲಿಗೆ ಹೋಗಿದ್ದಾರೆ. ಪಂಜಾಬ್ ಚುನಾವಣೆ ಮುಗಿಯುತ್ತಿದ್ದಂತೆ ಇವರೆಲ್ಲ ಕರ್ನಾಟಕಕ್ಕೆ ಬರ್ತಾರೆ. ಇಡಿ, ಐಟಿ ಬಂದು ಬಿಜೆಪಿಗೆ ಸಹಾಯ ಮಾಡ್ತಾರೆ. ಬಿಜೆಪಿಯವರು ಇಂತಹ ಎಲ್ಲ ಸಂಸ್ಥೆಗಳನ್ನು ಚುನಾವಣೆ ಗೆಲ್ಲುವುದಕ್ಕೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯಕ್ಕೆ ಸಿಇಟಿ ಬಿಟ್ಟು ಬಿಡಿ

ರಾಜ್ಯದಲ್ಲಿ ನೀಟ್ ಬದಲು ಸಿಇಟಿ ಜಾರಿ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಸಾಕಷ್ಟು ಬಾರಿ ಹಗರಣ ನಡೆದಿದೆ. ದೇಶದ ಮಕ್ಕಳ ಭವಿಷ್ಯದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ನಮ್ಮಲ್ಲಿ ಸಿಇಟಿ ಇದ್ದಾಗ ಈ ರೀತಿ‌ ತೊಂದರೆ ಆಗುತ್ತಿರಲಿಲ್ಲ. ನಮ್ಮ ರಾಜ್ಯದ ಮಕ್ಕಳ ಹಿತರಕ್ಷಣೆ ಕಾಯುವ ಎಲ್ಲ ಶಕ್ತಿ ನಮಗಿದೆ. ಸಿಇಟಿಯನ್ನು ರಾಜ್ಯಕ್ಕೆ ಬಿಟ್ಟು ಬಿಡಿ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ನಮ್ಮಲ್ಲಿ ಯಾವುದೇ ಗೊಂದಲ, ಚರ್ಚೆ ಇಲ್ಲ. ತುಮಕೂರಿನಲ್ಲಿ ಎಲ್ಲ ಒಟ್ಟಿಗೆ ಹೋಗಿ‌ ಸಮಾವೇಶ ಮಾಡಿದ್ದೇವೆ. ಮಾಧ್ಯಮದವರು ಕೇಳಿದಾಗ ಕೆಲವರು ಮಾತನಾಡುತ್ತಾರೆ. ಕೇಳಿದಾಗ ಏನೋ ಹೇಳಿ ಬಿಡ್ತಾರೆ. ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸದ್ದು ವಿಚಾರವಾಗಿ ಮಾತನಾಡಿದ ಸಚಿವರು, ದೇಶದಲ್ಲಿ ಅರಾಜಕತೆ ಎಷ್ಟಿದೆ ಅದರೆ ಕಾಕ್ರೋಚ್ ಜನತಾ ಪಾರ್ಟಿಗೆ ಸಬ್‌ಸ್ಕ್ರಿಪ್ಷನ್ ಬಿಜೆಪಿ ಪಕ್ಷದ ಸಬ್‌ಸ್ಕ್ರಿಪ್ಷನ್‌ಗಿಂತ ಹೆಚ್ಚಾಗಿದೆ. ಈ ಪಾರ್ಟಿಯ ಸಾಮಾಜಿಕ ಜಾಲತಾಣ‌ ಖಾತೆಯನ್ನು ನಿರ್ಬಂಧಿಸುವ ಕೆಲಸ ಆಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟುಹೋಗಿದೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಮೋದಿಯವರು ಭಾಷಣ ಬಿಗಿಯುತ್ತಿದ್ದರು. ಈಗ ದೇಶದ ರುಪಾಯಿ ಮೌಲ್ಯ ಅಮೆರಿಕ ಡಾಲರ್ ಜೊತೆಯಲ್ಲ, ಪಾಕಿಸ್ತಾನ, ಬಾಂಗ್ಲಾದೇಶದ ಕರೆನ್ಸಿ ಮೌಲ್ಯಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ‌. ದೇಶದ ಜಿಡಿಪಿ ಆರನೇ ಸ್ಥಾನಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರು.