ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ಮುಂದಾಗಿದೆ. ಸೂಕ್ಷ್ಮ ಪ್ರದೇಶಗಳಿಂದ ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಅಪಾಯಕಾರಿ ನಾಯಿಗಳಿಗೆ ದಯಾಮರಣ ನೀಡುವುದು ಸೇರಿದೆ.
ಬೆಂಗಳೂರು (ಮೇ 22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ನಾಯಿ ಕಡಿತದ ಪ್ರಕರಣಗಳು ಸಾರ್ವಜನಿಕರಲ್ಲಿ ಭೀತಿ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಎಚ್ಚೆತ್ತುಕೊಂಡಿದ್ದು, ಬೀದಿ ನಾಯಿಗಳ ನಿಯಂತ್ರಣದ ಕುರಿತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಿದೆ. ಜಿಬಿಎ ಮುಖ್ಯಸ್ಥ ಮಹೇಶ್ವರ್ ರಾವ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶ:
ಇತ್ತೀಚಿನ ವರ್ಷಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಮಕ್ಕಳು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದ್ದ 'CITY HOUNDED BY STRAYS, KIDS PAYPRICE' ಎಂಬ ಸುಮೋಟೋ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾರ್ವಜನಿಕರ ಜೀವ ರಕ್ಷಣೆ ಮತ್ತು ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಗಳ ಪಾಲನೆಗೆ ಸೂಚಿಸಿದೆ. ಈ ಆದೇಶದ ಅನ್ವಯ ಜಿಬಿಎ ಈಗ ಕಾರ್ಯಾಚರಣೆಗೆ ಇಳಿಯುತ್ತಿದೆ.
ಯಾವೆಲ್ಲಾ ಸ್ಥಳಗಳಲ್ಲಿ ನಾಯಿಗಳ ಸ್ಥಳಾಂತರ?
ಜಿಬಿಎ ಮೊದಲ ಹಂತದಲ್ಲಿ ಅತಿ ಹೆಚ್ಚು ಜನರು ಸೇರುವ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿರುವ ನಾಯಿಗಳನ್ನು ಸ್ಥಳಾಂತರಿಸಲು ನಿರ್ಧರಿಸಿದೆ.
- ಶಿಕ್ಷಣ ಸಂಸ್ಥೆಗಳು (ಶಾಲೆ ಮತ್ತು ಕಾಲೇಜುಗಳು)
- ಆಸ್ಪತ್ರೆಗಳ ಆವರಣ
- ಕ್ರೀಡಾ ಸಂಕೀರ್ಣಗಳು
- ಬಸ್ ಮತ್ತು ರೈಲು ನಿಲ್ದಾಣಗಳು
ಮೇಲೆ ತಿಳಿಸಿದ ಸ್ಥಳಗಳಲ್ಲಿ ಗುಂಪುಗೂಡುವ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ನಿರ್ದಿಷ್ಟ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುವುದು. ಈ ನಿಟ್ಟಿನಲ್ಲಿ ಜಿಬಿಎ ವ್ಯಾಪ್ತಿಯಲ್ಲಿ 5 ಹೊಸ ಮತ್ತು ಸುಸಜ್ಜಿತ ಆಶ್ರಯ ತಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಅಪಾಯಕಾರಿ ನಾಯಿಗಳಿಗೆ 'ದಯಾಮರಣ':
ಈ ಆದೇಶದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಆಕ್ರಮಣಕಾರಿ ನಾಯಿಗಳ ನಿರ್ವಹಣೆ. ಒಂದು ವೇಳೆ ಯಾವುದೇ ನಾಯಿ ಗುಣಪಡಿಸಲಾಗದಷ್ಟು ಅನಾರೋಗ್ಯಕ್ಕೀಡಾಗಿದ್ದರೆ, ರೇಬೀಸ್ ರೋಗದಿಂದ ಬಳಲುತ್ತಿದ್ದರೆ ಅಥವಾ ಸಾರ್ವಜನಿಕರಿಗೆ ಅಪಾಯಕಾರಿ ಎನಿಸುವಷ್ಟು ಆಕ್ರಮಣಕಾರಿಯಾಗಿದ್ದರೆ, ಅಂತಹ ನಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಜ್ಞ ಪಶುವೈದ್ಯರಿಂದ ಸರಿಯಾದ ತಪಾಸಣೆ ಮತ್ತು ದೃಢೀಕರಣ ಪಡೆದ ನಂತರ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು ಪ್ರಾಣಿಜನನ ನಿಯಮಗಳು 2023 ರ ಅಡಿಯಲ್ಲಿ 'ದಯಾಮರಣ' (Euthanasia) ನೀಡಲು ಕೂಡ ಜಿಬಿಎ ಸಿದ್ಧತೆ ನಡೆಸಿದೆ.
ಸಾರ್ವಜನಿಕರಿಗೆ ಮನವಿ:
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸಾರ್ವಜನಿಕರಲ್ಲಿ ಒಂದು ವಿಶೇಷ ಮನವಿ ಮಾಡಿದ್ದಾರೆ. 'ಬೀದಿ ನಾಯಿಗಳ ವಿಷಯದಲ್ಲಿ ಯಾರೂ ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಅಥವಾ ನಾಯಿಗಳಿಗೆ ಹಿಂಸೆ ನೀಡಬೇಡಿ. ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಧಿಕಾರವು ಕ್ರಮ ಕೈಗೊಳ್ಳುತ್ತಿದೆ. ನಿಮ್ಮ ಭಾಗದಲ್ಲಿ ನಾಯಿಗಳ ಸಮಸ್ಯೆ ಹೆಚ್ಚಿದ್ದರೆ ಪ್ರಾಧಿಕಾರಕ್ಕೆ ಮಾಹಿತಿ ನೀಡಿ' ಎಂದು ತಿಳಿಸಿದ್ದಾರೆ.


