ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು ಕಾರ್ಮಿಕ ಸಮಸ್ಯೆಗಳು ರೈತನ ಬದುಕು ಸಂಕಷ್ಟಕ್ಕೆ ತಳ್ಳಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರು (ಮೇ.27): ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು ಕಾರ್ಮಿಕ ಸಮಸ್ಯೆಗಳು ರೈತನ ಬದುಕು ಸಂಕಷ್ಟಕ್ಕೆ ತಳ್ಳಿವೆ. ಕೃಷಿ ಕ್ಷೇತ್ರದ ಈ ಸವಾಲುಗಳಿಗೆ ಉತ್ತರ ಕೊಡುವ ಶಕ್ತಿ ಇಂದಿನ ತಂತ್ರಜ್ಞಾನ ಮತ್ತು ಕೃಷಿ ಸ್ಟಾರ್ಟ್‌ ಅಪ್‌ಗಳಲ್ಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಲಾಗಿದ್ದ ಅಗ್ರಿ ಸ್ಟಾರ್ಟ್ ಅಪ್ ಕಾನ್‌ಕ್ಲೇವ್‌ 2.0 ಉದ್ಘಾಟಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಸರ್ಕಾರ ಕೃಷಿಯನ್ನು ಕೇವಲ ಬದುಕಿನ ಮಾರ್ಗವಾಗಿ ನೋಡುವುದಿಲ್ಲ. ಅದನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್ ಕೃಷಿ, ಡ್ರೋನ್ ತಂತ್ರಜ್ಞಾನ, ಡೇಟಾ ಆಧಾರಿತ ಬೆಳೆ ನಿರ್ವಹಣೆ, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ವ್ಯವಸ್ಥೆಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ರೈತ ಉತ್ಪಾದಕರ ಸಂಘಗಳು (ಎಫ್‌ಪಿಒ), ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಯುವ ಉದ್ಯಮಿಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮೀಣ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯ. ರಾಜ್ಯದ ಕೃಷಿ ಇಲಾಖೆ ರೈತರ ಆದಾಯ ಹೆಚ್ಚಿಸುವುದು, ನವೀನ ತಂತ್ರಜ್ಞಾನವನ್ನು ಗ್ರಾಮ ಮಟ್ಟಕ್ಕೆ ತಲುಪಿಸುವುದು ಮತ್ತು ಯುವಕರಿಗೆ ಕೃಷಿ ಆಧಾರಿತ ಉದ್ಯಮಗಳಲ್ಲಿ ಅವಕಾಶ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಭವಿಷ್ಯದ ಕೃಷಿ

ಕೇಂದ್ರ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ (ಬಿಐಆರ್‌ಎಸಿ) ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್‌ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳ ಬಳಕೆ ಭವಿಷ್ಯದ ಕೃಷಿಯನ್ನು ರೂಪಿಸಲಿದೆ. ಹವಾಮಾನ ಬದಲಾವಣೆ, ನೀರಿನ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಗ್ರಿ ಸ್ಟಾರ್ಟ್‌ಅಪ್‌ಗಳು ರೈತರಿಗೆ ಹೊಸ ಪರಿಹಾರಗಳನ್ನು ನೀಡುತ್ತಿವೆ. ಕೃಷಿ ಪದವೀಧರರು, ಯುವ ಸಂಶೋಧಕರು, ಕೃಷಿಯನ್ನು ಕೈಗಾರಿಕಾ ದೃಷ್ಟಿಕೋನದಿಂದ ನೋಡಬೇಕು. ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ, ಕೃಷಿ ಪ್ರವಾಸೋದ್ಯಮ, ಸಾವಯವ ಉತ್ಪನ್ನಗಳ ಬ್ರ್ಯಾಂಡಿಂಗ್‌ ಹಾಗೂ ರಫ್ತು ಅವಕಾಶಗಳನ್ನು ಬಳಿಸಿಕೊಂಡು ಗ್ರಾಮೀಣ ಭಾಗದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು.