ಬೆಳಗಾವಿಯ 4500 ಕೋಟಿ ರೂ. 'ಶಿವಂ ಅಸೋಸಿಯೇಟ್ಸ್' ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ನನ್ನು ಬೆಳಗಾವಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು, ಆತನ ಪತ್ನಿ, ಪಾಲುದಾರ ಹಾಗೂ ಕರವೇ ಮುಖಂಡರನ್ನೂ ತನಿಖೆಗೆ ಒಳಪಡಿಸಲಾಗಿದೆ. ಹೂಡಿಕೆದಾರರ ಹಣದಿಂದ ಖರೀದಿಸಿದ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಬೆಳಗಾವಿ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಬಹುಕೋಟಿ 4500 ರೂ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ, ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ್‌ನನ್ನು ಬೆಂಗಳೂರಿನಲ್ಲಿ ಹಲವು ದಿನಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಸಿಐಡಿ ಪೊಲೀಸರು, ಸೋಮವಾರ ತಡರಾತ್ರಿ ಆತನನ್ನು ಬೆಳಗಾವಿಗೆ ಕರೆತಂದಿದ್ದಾರೆ. ಸದ್ಯ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಹಗರಣದ ಆಳ-ಅಗಲ ತಿಳಿಯಲು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಸ್ಟಡಿ ಅಂತ್ಯ: ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ

ಆರೋಪಿ ಶಿವಾನಂದ ನೀಲಣ್ಣವರ್‌ನನ್ನು ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿತ್ತು. ಈ ಕಸ್ಟಡಿ ಅವಧಿಯು ಮೇ 27ರ ಇಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತನಿಖಾ ಪ್ರಕ್ರಿಯೆಗಳನ್ನು ವೇಗಗೊಳಿಸಿರುವ ಅಧಿಕಾರಿಗಳು, ಕಸ್ಟಡಿ ಅವಧಿ ಮುಗಿಯುವುದಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಮಂಗಳವಾರವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಕರವೇ ಮುಖಂಡ, ಪತ್ನಿ ಹಾಗೂ ಪಾಲುದಾರನಿಗೆ ಸಿಐಡಿ ಡ್ರಿಲ್!

ಈ ಬೃಹತ್ ವಂಚನೆ ಹಗರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಪ್ರಕರಣದಲ್ಲಿ ನಂಟು ಹೊಂದಿರುವ ಶಂಕೆಯ ಮೇರೆಗೆ ಮೂವರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿತ್ತು.

ಶಿವಾನಂದ ನೀಲಣ್ಣವರ್ ಪತ್ನಿ, ಜೊತೆಗೆ ನಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಮತ್ತು ಶಿವಾನಂದನ ವ್ಯವಹಾರ ಪಾಲುದಾರ ಸುಭಾಷ್ ಅವರಿಗೆ ನೋಟಿಸ್ ನೀಡಲಾಗಿದೆ. ಸಿಐಡಿ ನೋಟಿಸ್‌ಗೆ ಬೆದರಿದ ಈ ಮೂವರೂ ಮಂಗಳವಾರ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾದರು. ಈ ವೇಳೆ ಅಧಿಕಾರಿಗಳು ಹೂಡಿಕೆದಾರರ ಹಣದ ವರ್ಗಾವಣೆ ಕುರಿತು ಗಂಟೆಗಳ ಕಾಲ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಹತ್ವದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಮರ್ಸಿಡಿಸ್ ಕಾರ್ ಉಡುಗೊರೆ ರಹಸ್ಯ:

ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಕರವೇ ಮುಖಂಡ ಆರ್. ಅಭಿಲಾಷ್ ಅವರಿಗೆ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರ್ ಸೇರಿದಂತೆ ಹಲವು ದುಬಾರಿ ಉಡುಗೊರೆಗಳು ಸಂದಾಯವಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅಭಿಲಾಷ್ ಅವರಿಗೆ ತೀವ್ರ ಕೌಂಟರ್ ಪ್ರಶ್ನೆಗಳನ್ನು ಹಾಕಿ, ಉಡುಗೊರೆಯ ಹಿಂದಿನ ಅಸಲಿ ನಿಗೂಢತೆಯನ್ನು ಕೆದಕುತ್ತಿದ್ದಾರೆ.

ಐಷಾರಾಮಿ ಕಾರುಗಳ ಜಪ್ತಿ ಪ್ರಕ್ರಿಯೆ ಆರಂಭ; ಡಿಜಿಟಲ್ ಸಾಕ್ಷ್ಯಗಳ ಬೇಟೆ

ಬಡ ಮತ್ತು ಮಧ್ಯಮ ವರ್ಗದ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ವಂಚಿಸಿ, ಆ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಸಿಐಡಿ ಮುಂದಾಗಿದೆ. ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿಕೊಂಡು ಖರೀದಿಸಲಾಗಿದೆ ಎನ್ನಲಾದ ಲ್ಯಾಂಡ್ ರೋವರ್ ಡಿಫೆಂಡರ್, ಮರ್ಸಿಡಿಸ್ ಬೆಂಜ್ ಮತ್ತು ಟೊಯೋಟಾ ವೆಲ್‌ಫೈರ್ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳ ಖರೀದಿ ದಾಖಲೆಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಸದ್ಯ ಈ ವಾಹನಗಳನ್ನು ಕಾನೂನುಬದ್ಧವಾಗಿ ಜಪ್ತಿ (ಸೀಜ್) ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.

ಹಣದ ಹರಿವಿನ ಪತ್ತೆ :

ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿರುವ ನೂರಾರು ಆಸ್ತಿ ಪತ್ರಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಸೈಬರ್ ತಜ್ಞರ ನೆರವಿನೊಂದಿಗೆ ಪರಿಶೀಲಿಸಲಾಗುತ್ತಿದೆ. ಸಂಸ್ಥೆಯ ಬ್ಯಾಂಕ್ ಖಾತೆಗಳ ನಿರ್ವಹಣೆ, ಕಪ್ಪು ಹಣದ ಹೂಡಿಕೆ ಜಾಲ, ವಿವಿಧ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ಹರಿದುಬಂದ ಹಣದ ಮೂಲ ಯಾವುದು? ಎಂಬುದರ ಸಂಪೂರ್ಣ ಚಿತ್ರಣವನ್ನು ಪಡೆಯಲು ಸಿಐಡಿ ತನಿಖಾ ತಂಡ ಜಾಲ ಬೀಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಪ್ರಭಾವಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.