ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು. ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.

ಕೆ.ಆರ್.ಪೇಟೆ (ಮೇ.26): ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು. ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಂದಿದ್ದು ಎಂದು ಕೆಲವರು ಹೇಳುತ್ತಿದ್ದಾರೆ ಇದರ ಬಗ್ಗೆ ನನಗಾಗಲಿ ಆಥವಾ ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜುಗಾಗಲೀ ಯಾವುದೇ ಅಸೂಹೆಯಿಲ್ಲ ಎಂದರು.

Add Asianetnews Kannada as a Preferred SourcegooglePreferred

ಒಂದು ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಮುಂದೆ ಬಂದ ಮತ್ತೊಂದು ಸರ್ಕಾರ ಮುಂದುವರಿಸುತ್ತದೆ. ಅದರಂತೆ ಆಸ್ಪತ್ರೆ ಮುಂದುವರಿದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ನಮ್ಮ ನಮ್ಮ ಜವಾಬ್ದಾರಿ ಅರಿತು ಪೂರ್ಣಗೊಳಿಸಿ ಕ್ಷೇತ್ರದ ಜನರಿಗೆ ಸಮರ್ಪಿಸಿದ್ದೇವೆ ಎಂದರು.

ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಪ್ಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ತಾಯಿ ಮಗು ಆಸ್ಪತ್ರೆ ನಿರ್ಮಿಸಿ ಅಗತ್ಯ ವೈದ್ಯರ ನೇಮಕ ಮಾಡಿದೆ. ಬೆಂಗಳೂರು ಮಹಾನಗರದಲ್ಲಿ ಒಂದು ಹೆರಿಗೆ ಮಾಡಿಸಿಕೊಳ್ಳಲು ಕನಿಷ್ಠ 5 ರಿಂದ 6 ಲಕ್ಷ ರು. ಹಣ ಬೇಕು. ಮೈಸೂರು, ಹಾಸನ ಮುಂತಾದ ನಗರ ಪ್ರದೇಶಗಳಲ್ಲಿ ಹೆರಿಗೆ ಮಾಡಿಸಿಕೊಂಡರೆ ಕನಿಷ್ಠ 1 ರಿಂದ 2 ಲಕ್ಷ ರು. ಬೇಕು. ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಒಂದೇ ನಯಾಪೈಸೆ ಖರ್ಚಿಲ್ಲದೆ ಹೆರಿಗೆ ಮಾಡಲಾಗುತ್ತದೆ. ಇದರ ಪ್ರಯೋಜನ ಪಡೆಯುವಂತೆ ಸಚಿವರು ಮನವಿ ಮಾಡಿದರು.

ಆಸ್ಪತ್ರೆಗೆ ಹೊಸಹೊಳಲಿನ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಕುಂಟುಂಬಸ್ಥರು 6 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಆಸ್ಪತ್ರೆಗೆ ಮಾತ್ರವಲ್ಲದೆ ಶಾಲಾ ಕಾಲೇಜು ಮತ್ತಿತರ ಸಾರ್ವಜನಿಕ ಸಂಸ್ಥೆಗಳ ನಿರ್ಮಾಣಕ್ಕೂ ದುಂಡುಶೆಟ್ಟಿ ವಂಶಸ್ಥರು ಸುಮಾರು 50 ಎಕರೆಯಷ್ಟು ಭೂಮಿ ದಾನ ಮಾಡಿದ್ದಾರೆ. ಇಂತಹ ಮಹಾನ್ ದಾನಿಗಳ ಸೇವೆ ನಿತ್ಯ ಸ್ಮರಣೀಯ. ದಾನಿಗಳ ಕುಂಟುಂಬಕ್ಕೆ ಸೇರಿದ ವೆಂಕಟಕೃಷ್ಣ ಶೆಟ್ಟರನ್ನು ಸನ್ಮಾನಿಸಿದರು.

ಕೇಂದ್ರ ಸರ್ಕಾರ ರಾಜ್ಯದಲ್ಲೂ ಮತದಾರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ತಾಲೂಕಿನಲ್ಲಿ ಈಗಾಗಲೇ ಶೇ.95 ರಷ್ಟು ಮ್ಯಾಪಿಂಗ್ ಕಾರ್ಯ ಆಗಿದೆ. ಉಳಿದ ರಷ್ಟು ಆಗಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನಿಮಗೆ ಯಾವುದೇ ಸರ್ಕಾರದ ಸವಲತ್ತುಗಳು ದೊರಕುವುದಿಲ್ಲ. ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಸ್ವಯಂ ಪರಿಶೀಲನೆ ಮಾಡಿಕೊಳ್ಳುವಂತೆ ಎಚ್ಚರಿಸಿದರು.

ಸಚಿವರಲ್ಲಿ ಮನವಿ

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ದಾನಿಗಳ ಕುಟುಂಬಸ್ಥರನ್ನು ಶಾಶ್ವತವಾಗಿ ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವಂತೆ ಸರ್ಕರದ ಮಟ್ಟದಲ್ಲಿ ತೀರ್ಮಾನಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹುಟ್ಟೂರಿನ ಜನರ ಕಲ್ಯಾಣಕ್ಕಾಗಿ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದರು. ಅಂದು ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡರು ಕಾಮಗಾರಿ ಆರಂಭಿಸಿದ್ದರು. ಅದನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.

ನಮ್ಮ ಶಾಸ್ಪತ್ರೆಗೆ ಬರಬೇಕಾಗಿದ್ದ ಆರೋಗ್ಯ ಪರಿಕರಗಳು ಮತ್ತು ಯಂತ್ರೋಪಕರಣಗಳು ನೆರೆಯ ಕೆ.ಆರ್.ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಅವು ಅಲ್ಲಿ ಬಳಕೆಯಾಗುತ್ತಿದ್ದವು. ಇದನ್ನು ಮಾಜಿ ಸಚಿವರೇ ನನಗೆ ತಿಳಿಸಿ ಅವುಗಳನ್ನು ನಮ್ಮ ಆಸ್ಪತ್ರೆಗೆ ತರಿಸಿಕೊಳ್ಳುವಂತೆ ತಿಳಿಸಿದ್ದರು. ಈಗ ಅಲ್ಲಿ ಬಳಕೆಯಾಗಿ ಹಾಳಾಗಿರುವ ಯಂತ್ರೋಪಕರಣಗಳನ್ನು ಅಲ್ಲಿಯೇ ಬಿಟ್ಟು ಉಳಿದವುಗಳನ್ನು ಇಲ್ಲಿಗೆ ತರಲಾಗಿದೆ ಎಂದರು.

ಅಗತ್ಯ ವೈದ್ಯಕೀಯ ಸಿಬ್ಬಂದಿ, ಯಂತ್ರೋಪಕರಣಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂಧಿಗಳ ಕೊರತೆಯಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದೆ. ಅದನ್ನು ಬಳಕೆ ಮಾಡುವ ರೆಡಿಯಾಲಿಜಿಸ್ಟ್ ಇಲ್ಲ. ಸರ್ಕಾರ ಅಗತ್ಯ ಮೂಲ ಸೌಲಭ್ಯ, ಸಿಬ್ಬಂದಿಗಳನ್ನು ಒದಗಿಸಿಕೊಟ್ಟಾಗ ಮಾತ್ರ ಸರ್ಕಾರದ ಆಶಯ ಈಡೇರುತ್ತದೆ ಎಂದರು.