ಬರಗಾಲದ ಜೊತೆಗೆ ಮುಂಗಾರು ಕೂಡ ಬರುತ್ತಿದೆ. ಎರಡನ್ನು ಎದುರಿಸಲು ಸನ್ನದ್ಧರಾಗುವ ಜೊತೆಗೆ ಮಳೆಯಿಂದ ಹಾನಿ ಆದರೆ ನಿರ್ಲಕ್ಷಿಸಿದೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನಾಗಮಂಗಲ (ಮೇ.21): ಬರಗಾಲದ ಜೊತೆಗೆ ಮುಂಗಾರು ಕೂಡ ಬರುತ್ತಿದೆ. ಎರಡನ್ನು ಎದುರಿಸಲು ಸನ್ನದ್ಧರಾಗುವ ಜೊತೆಗೆ ಮಳೆಯಿಂದ ಹಾನಿ ಆದರೆ ನಿರ್ಲಕ್ಷಿಸಿದೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಹಲವೆಡೆ ಬರಗಾಲವಿದೆ. ಮತ್ತೆ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಬರಗಾಲದಿಂದ ರೈತರಿಗೆ ಸ್ವಲ್ಪ ನಷ್ಟವಾಗುತ್ತದೆ. ಅದೇ ಮಳೆಯಿಂದ ಹಾನಿಯಾದರೆ ಉಳುಮೆ, ಬಿತ್ತನೆ, ರಸಗೊಬ್ಬರ ಈ ಎಲ್ಲದಕ್ಕೂ ಖರ್ಚು ಮಾಡಿರುವುದರಿಂದ ಹೆಚ್ಚು ನಷ್ಟ ಉಂಟಾಗಲಿದೆ ಎಂದರು.

Add Asianetnews Kannada as a Preferred SourcegooglePreferred

ಮಳೆಯಿಂದಾಗುವ ಹಾನಿ ಬಗ್ಗೆ ಅಧಿಕಾರಿಗಳು ಜಾಗೃತರಾಗಬೇಕು. ಮಳೆಹಾನಿ ಪರಿಹಾರದಲ್ಲಿ ನಿರ್ಲಕ್ಷ್ಯವಾದರೆ ಯಾವುದೇ ಮುಲಾಜಿಗೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಳೆದ 3 ವರ್ಷಗಳಿಂದ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಪರಿಶ್ರಮದಿಂದ ಇಲಾಖಾವಾರು ಅನುದಾನ ಶೇ.100 ರಷ್ಟು ಸದ್ಬಳಕೆಯಾಗುತ್ತಿರುವುದಕ್ಕೆ ಅಭಿನಂದಿಸುತ್ತೇನೆ. ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಸಮಯದೊಳಗೆ ಟೆಂಡರ್ ಆಗಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು.

ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುಂಚೆ ತ್ವರಿತಗತಿಯಲ್ಲಿ ಮುಗಿಸಬೇಕು. ಶಿಥಿಲಾವಸ್ಥೆಯ ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳಿದ್ದರೆ ಶೀಘ್ರ ಮಾಹಿತಿ ಕೊಟ್ಟಲ್ಲಿ ದುರಸ್ತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು. ಕಳೆದ ವರ್ಷ 3.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆಯಾಗಿದೆ. ಈ ಬಾರಿ ಪ್ರಧಾನ ಮಂತ್ರಿ ಅವರೇ ರಸಗೊಬ್ಬರ ಕಡಿಮೆ ಬಳಸಿ ಎಂದು ಕರೆ ಕೊಟ್ಟಿದ್ದಾರೆ. ಯಾವ ಬೆಳೆಗೆ ಎಷ್ಟು ಅವಶ್ಯವಿದೆ ಅಷ್ಟು ಮಾತ್ರ ಬಳಕೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಅಕ್ರಮ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದರು.

ಮುಂಗಾರಿಗೆ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಮೊದಲು ಜಮೀನು ಇಲ್ಲದವರು ರಸಗೊಬ್ಬರ ಪಡೆಯುತ್ತಿದ್ದರು. ಆದರೆ, ಈ ಬಾರಿ ಎಫ್‌ಐಡಿ ಸಂಖ್ಯೆ ಆಧಾರದ ಮೇಲೆ ರಸಗೊಬ್ಬರ ನೀಡಲಾಗುವುದು. ಜಮೀನು ಇಲ್ಲದವರು ರಸಗೊಬ್ಬರ ಪಡೆಯಲು ಸಾಧ್ಯವಿಲ್ಲ ಎಂದರು. ಸೆಸ್ಕಾಂ ಇಲಾಖೆ ಬಗ್ಗೆ ಈಗಲೂ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ಕಳೆದ 3 ವರ್ಷದಲ್ಲಿ ಇಲಾಖೆಯಲ್ಲಿ ಏನೆಲ್ಲಾ ಕೆಲಸಗಳಾಗಿವೆ ಎಂಬುದರ ಕುರಿತು ಸಮಗ್ರ ವರದಿ ನೀಡಬೇಕು. ನಿರಂತರ ಜ್ಯೋತಿ ಯೋಜನೆಯಡಿ ಲೋಪವಿರುವ ಕಾಮಗಾರಿ ಸರಿಪಡಿಸಬೇಕು ಎಂದು ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ನಿರ್ಮಾಣಕ್ಕೆ ಟೆಂಡರ್

ಬೆಳ್ಳೂರು ಮತ್ತು ನಾಗಮಂಗಲ ವಿಭಾಗದ ಸೆಸ್ಕಾಂ ಎಇಇ ಕಚೇರಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಮತ್ತಷ್ಟು ಹೊಸ ವಿದ್ಯುತ್ ವಿತರಣಾ ಕೇಂದ್ರ ತರಲಾಗುವುದು. ತಾಲೂಕಿನ ಅಂಚೆಚಿಟ್ಟನಹಳ್ಳಿ ಹಾಗೂ ಬುರುಡುಗುಂಟೆ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದೆ ಎಂದರು. ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಿಡಿಪಿಒ ಇಲಾಖೆ ಮೇಲ್ವಿಚಾರಕರು ಪ್ರತಿ ಮನೆಗಳಿಗೆ ಖುದ್ದು ಭೇಟಿಕೊಟ್ಟು ಸೌಲಭ್ಯ ಪಡೆಯುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಗ್ರಾಮವಾರು ವರದಿ ಸಿದ್ಧಪಡಿಸಬೇಕು.

ಲೋಪವಾದರೆ ಸಿಡಿಪಿಒ ಅವರನ್ನು ಹೊಣೆ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು. ಹೇಮಾವತಿಯಿಂದ ಕೆರೆ- ಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿತ್ತು. ಆದರೆ, ಕೆ.ಆರ್.ಪೇಟೆ ಮತ್ತು ಪಾಂಡವಪುರದಲ್ಲಿ ಕೆಲವು ತೊಂದರೆಗಳಾಗಿ ತಾಲೂಕಿಗೆ ನಿರೀಕ್ಷೆಯಷ್ಟು ನೀರು ಬರಲಿಲ್ಲ. ಸೂಳೆಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವ ಕೆಲಸವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದಿಂದ 204 ಕಿ.ಮೀ.ದೂರವಿರುವ ನಾಗಮಂಗಲ ತಾಲೂಕಿಗೆ ನೀರು ತರುವುದು ಒಂದು ದೊಡ್ಡ ಸಾಹಸ.

ಮುಂದಿನ ಎರಡು ದಿನಗಳ ಕಾಲ ನೀರು ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು. ಜೆಜೆಎಂಗೆ ಸಂಬಂಧಿಸಿದ 15 ಸಾವಿರ ಕೋಟಿ ರು.ಗಳ ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಜನರಿಗೆ ತೊಂದರೆಯಾಗದಂತೆ ಕುಡಿವ ನೀರಿನ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚು ಅನುದಾನ ಬಳಕೆ ಮಾಡುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಬೇಕು. ಯಾವುದೇ ಕಾಮಗಾರಿಗಳಲ್ಲಿ ವಿಳಂಬ ಮಾಡದೇ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದರು.