ಯಾರ್‍ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಬೆಂಗಳೂರು (ಮೇ.19): ಯಾರ್‍ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಬೆಂಗಳೂರು ಸುತ್ತಮುತ್ತ 20 ಸಾವಿರ ಎಕರೆ ಯಾರ ಹೆಸರಿನಲ್ಲಿದೆ ಎಂದು ಪರೀಕ್ಷಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರಲ್ವಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದಂತೆ ಕೇಳುತ್ತಾರೆ. ಆದ್ದರಿಂದ ಯಾರ್‍ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ತಿರುಗೇಟು ನೀಡಿದರು.
ಸರ್ಕಾರ ಬ್ರೋಕರ್ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿಗಿಂತ ಬ್ರೋಕರ್ ಕೆಲಸವನ್ನು ಯಾರೂ ಮಾಡುವುದಿಲ್ಲ. ಬಿಡದಿ ಟೌನ್‌ಶಿಪ್ ಯೋಜನೆ ಕುಮಾರಸ್ವಾಮಿ ಅವರದ್ದು. ಈಗ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪು. ಯೋಜನೆಯಲ್ಲಿ ಏನೇ ತಪ್ಪಾಗಿದ್ದರೂ ಅದಕ್ಕೆ ಕುಮಾರಸ್ವಾಮಿಯೇ ಕಾರಣ. ಅವರ ಹತ್ತಿರ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ಟೀಕಿಸಿದರು.
ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಯೋಜನೆ ಕೈಗೆತ್ತಿಕೊಂಡಿದ್ದು, ಇದು ಜನಪರ ಯೋಜನೆ. ಶಿವಕುಮಾರ್ ಅವರು ರೈತರ ಮನವೊಲಿಸುತ್ತೇನೆ ಎಂದು ಹೇಳಿದ್ದಾರೆ. ರೈತರು ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂಬ ದುಃಖ ನಮಗೂ ಇದೆ. ಆದರೆ ಅಭಿವೃದ್ಧಿಗಾಗಿ ಯೋಜನೆ ಮಾಡಬೇಕಿದೆ. ಒಬ್ಬರಿಗೆ ತೊಂದರೆ ಆದರೆ ಹತ್ತು ಜನರಿಗೆ ಅನುಕೂಲವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ, ಜೆಡಿಎಸ್‌ನವರಿಗೆ ಮೊದಲು ಹೇಳಲಿ
ಮಿತವ್ಯಯದ ಬಗ್ಗೆ ಪ್ರಧಾನಿ ಮೋದಿ ಅವರು ಮೊದಲು ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಸ್ನೇಹಿತರಿಗೆ ಹೇಳಲಿ. ನಾವು ಸಮಯ, ಸಂದರ್ಭ ನೋಡಿಕೊಂಡು ಕೇಳುವ ಹಂತದಲ್ಲಿ ಕೇಳುತ್ತೇವೆ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದರು.ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಪ್ರಧಾನಿ ಸೂಚನೆ ಅನುಸರಿಸುವ ಸಂದರ್ಭದಲ್ಲಿ ಕೇಳುತ್ತೇವೆ. ಆದರೆ ಬಿಜೆಪಿ, ಜೆಡಿಎಸ್‌ನವರು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

