ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರು. ವೆಚ್ಚದ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ (ಏ.22): ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರು. ವೆಚ್ಚದ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಹೈಟೆಕ್ ಹಾರ್ವೆಸ್ಟರ್ ಕಟಾವು ಯಂತ್ರೋಪಕರಣ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಕಾರ್ಮಿಕರ ಕೊರತೆ ಸರಿದೂಗಿಸಿ ಸಾವಿರಾರು ರುಪಾಯಿ ಹಣ ಉಳಿಸಿ ಹಾಗೂ ಇಳುವರಿ ವೃದ್ಧಿಸುವ ಸದುದ್ದೇಶದಿಂದ ಹೈಟೆಕ್ ಯಂತ್ರೋಪಕರಣ ವಿತರಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.

Add Asianetnews Kannada as a Preferred SourcegooglePreferred

ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು, ಭತ್ತ, ರಾಗಿ, ನವಣೆ ಸೇರಿದಂತೆ ಇತರೆ ಬೆಳೆಗಳ ಕಟಾವಿಗಾಗಿ ಹೈಟೆಕ್ ಹಾರ್ವೆಸ್ಟರ್ ಯಂತ್ರಗಳನ್ನು ಶೇ. 50ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಇಂದು 13 ಹಾರ್ವೆಸ್ಟರ್ ಯಂತ್ರಗಳು ಹಾಗೂ ಮುಂದಿನ ದಿನಗಳಲ್ಲಿ 7 ಯಂತ್ರಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 400 ಕಟಾವು ಯಂತ್ರೋಪಕರಣ ವಿತರಣೆ ಮಾಡಲಾಗಿದ್ದು, ಇದರಿಂದ ಕಬ್ಬು, ಭತ್ತ, ರಾಗಿ ಸೇರಿದಂತೆ ಇತರೆ ಬೆಳೆಗಳ ಕಟಾವಿಗೆ ಅನುಕೂಲವಾಗಿದ್ದು, ಗುಂಪು ಆಧಾರಿತ ಹಾಗೂ ಎಸ್ಸಿ, ಎಸ್ಟಿ ಜನಾಂಗದವರಿಗೆ ಶೇ.50ರಷ್ಟು, ಸಾಮಾನ್ಯ ವರ್ಗದವರಿಗೆ ಶೇ.40ರಷ್ಟು ಸಬ್ಸಿಡಿ ದೊರೆಯಲಿದೆ ಎಂದರು.

ಜಿಲ್ಲೆಯ ಯುವಜನರಲ್ಲಿ ಕೃಷಿ ಬಗ್ಗೆ ತಾತ್ಸಾರ ಮನೋಭಾವವಿದೆ. ಇದನ್ನು ಬಿಟ್ಟು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದ ರಾಯಚೂರು, ಬೆಳಗಾವಿ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗಳ ರೈತರ ಕೃಷಿ ಪ್ರೀತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಿಂದೆ 12 ಲಕ್ಷ ರೈತರು ಕೃಷಿ ವಿಮೆ ಮಾಡಿಸುತ್ತಿದ್ದರು. ಆದರೆ, ಕೃಷಿಕರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ 28 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಇದುವರೆಗೆ 6 ಲಕ್ಷ ಕೋಟಿ ರು. ಬೆಳೆ ಪರಿಹಾರ ನೀಡಲಾಗಿದೆ. ಬೆಳೆ ನಾಶಕ್ಕೆ ಎಫ್‌ಐಡಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದರು.

ಹೊಸ ಕೃಷಿ ವಿಶ್ವವಿದ್ಯಾಲಯ ಆರಂಭ

ರಾಜ್ಯದಲ್ಲಿ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೃಷಿ ಪ್ರಧಾನ ಜಿಲ್ಲೆ ಮಂಡ್ಯದಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದರ ಪರಿಣಾಮ ರೈತರಿಗೆ ಹೊಸ ತಳಿಗಳ ಅನ್ವೇಷಣೆ, ತಂತ್ರಜ್ಞಾನ ಆಧಾರಿತ ಕೃಷಿ ಅಳವಡಿಕೆಗೆ ಕ್ರಮ ಸೇರಿದಂತೆ ರೈತರ ಶಾಶ್ವತ ಅಭಿವೃದ್ಧಿಗೆ ಅವಕಾಶ ದೊರೆಯಲಿದ್ದು, ಇದು ನಮ್ಮ ಸರ್ಕಾರದ ಬದ್ಧತೆ ಎಂದರು. ರೈತ ಫಲಾನುಭವಿಗಳಿಗೆ ಹೈಟೆಕ್ ಮಾದರಿಯ 10 ಕಟಾವು ಯಂತ್ರೋಪಕರಣಗಳನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರು ವಿತರಿಸಿದರು.