ಗದಗ(ನ.01):  ನೆಲ-ಜಲ ವಿಷಯ ಬಂದಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ನಮ್ಮ ಪಾಲಿನ ಹಕ್ಕನ್ನು ಪಡೆಯಬೇಕಾದರೆ ನಾವು ಒಂದಾಗಿ ಹೋರಾಟ ಮಾಡಬೇಕು. ದಿನೇಶ್ ಗುಂಡೂರಾವ್ ಗೋವಾ ಪರವಾಗಿ ಇದ್ದಾರೆ ಎನ್ನುವದು ಅವರ ಹೇಳಿಕೆ ಮಾಧ್ಯಮದಲ್ಲಿ ಪ್ರಕಟವಾಗುವ ಮೂಲಕ ಗೊತ್ತಾಗಿದೆ ಎಂದು ಗೋವಾ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಕಿಡಿ ಕಾರಿದ್ದಾರೆ. 

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಹಿನ್ನಲೆಯಲ್ಲಿ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ದಿನೇಶ್‌ ಗುಂಡೂರಾವ್ ಸ್ಪಷ್ಟೀಕರಣ ಕೋಡಬೇಕಾಗುತ್ತದೆ. ಒಂದು ವೇಳೆ ಅವರು ಹಾಗೇ ಹೇಳಿದ್ದರೆ ಅದು ರಾಜ್ಯದ್ರೋಹದ ಕೆಲಸವಾಗುತ್ತದೆ ಎಂದು ಗುಂಡೂರಾವ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಮಹದಾಯಿ ವಿಚಾರದಲ್ಲಿ ಗೋವಾ ಪರ ದಿನೇಶ್‌ ಬೆಂಬಲ?: ಗುಂಡೂರಾವ್‌ ಪ್ರತಿಕ್ರಿಯೆ

ಗೋವಾ ರಾಜ್ಯದ ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್‌ ಅವರು, ಕಾಂಗ್ರೆಸ್‌ನವರ ಇತಿಹಾಸ ಪುಟವನ್ನು ತೆಗೆದು ನೋಡಬೇಕು. ಕಳಸಾ ಬಂಡೂರಿ ವಿಷಯದಲ್ಲಿ ಪ್ರಗತಿಯಾಗಿದ್ದು, ಬಿಜೆಪಿಯಿಂದ ಮಾತ್ರ, ಕಾಂಗ್ರೆಸ್‌ನಿಂದ ಅಲ್ಲ. ಕಳಸಾ ಬಂಡೂರಿ ವಿಷಯದಲ್ಲಿ ಕಾನೂನಾತ್ಮಕ ತೊಂದರೆ ಇದೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.