Asianet Suvarna News Asianet Suvarna News

'ಬಳ್ಳಾರಿ ಸ್ಮಾರ್ಟ್‌ ಸಿಟಿಗೆ ಸೇರಿಸುವಂತೆ ಕೇಂದ್ರಕ್ಕೆ ಕೋರಿಕೆ'

ಬಳ್ಳಾರಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಪ್ಪತ್ತು-ಮೂವತ್ತು ವರ್ಷಗಳಷ್ಟು ಹಳೆಯದಾಗಿದೆ| 5 ಸಾವಿರಕ್ಕೂ ಹೆಚ್ಚು ವ್ಯಾಪಾರ(ಉದ್ದಿಮೆ) ಪರವಾನಗಿ, ಇದರಿಂದ 73 ಲಕ್ಷಕ್ಕೂ ಹೆಚ್ಚು ಸಂಗ್ರಹ| ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತು ನಗರದಾದ್ಯಂತ ಜಾಗೃತಿ|

Minister Bhairati Basavaraj talks Over Ballari Smart city
Author
Bengaluru, First Published May 13, 2020, 9:08 AM IST

ಬಳ್ಳಾರಿ(ಮೇ.13): ನಗರ ದಿನೇ ದಿನೆ ಬೆಳೆಯುತ್ತಿದ್ದು, ಈ ನಗರವನ್ನು ಸ್ಮಾರ್ಟ್‌ ಸಿಟಿಗೆ ಸೇರಿಸುವಂತೆ ಕೋರಿ ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಭೈರತಿ ಬಸವರಾಜ್‌ ತಿಳಿಸಿದ್ದಾರೆ. 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಳ್ಳಾರಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಪ್ಪತ್ತು-ಮೂವತ್ತು ವರ್ಷಗಳಷ್ಟುಹಳೆಯದಾಗಿದೆ. ಅದನ್ನು ಹೊಸದಾಗಿ ಮಾಡುವ ನಿಟ್ಟಿನಲ್ಲಿ ಶಾಸಕರು ಸಭೆಯಲ್ಲಿ ಕೋರಿದ ಹಿನ್ನೆಲೆಯಲ್ಲಿ ಸಚಿವ ಭೈರತಿ ಬಸವರಾಜು ಅವರು ಇದರ ವರದಿಯನ್ನು ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ

ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಸಭೆಗೆ ಮಾಹಿತಿ ನೀಡಿ 5 ಸಾವಿರಕ್ಕೂ ಹೆಚ್ಚು ವ್ಯಾಪಾರ(ಉದ್ದಿಮೆ) ಪರವಾನಗಿ ನೀಡಲಾಗಿದ್ದು, ಇದರಿಂದ 73 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಿದೆ. ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತು ನಗರದಾದ್ಯಂತ ಜಾಗೃತಿ ಮೂಡಿಸಲಾಗಿದೆ. ಇದು ವರೆಗೆ ಉಲ್ಲಂಘಿಸಿದಕ್ಕಾಗಿ  1 ಲಕ್ಷ ದಂಡ ವಿಧಿಸಲಾಗಿದೆ ಎಂದರು.

ಅನ್ಯರಾಜ್ಯಗಳಿಂದ ಬಳ್ಳಾರಿ ಜಿಲ್ಲೆಗೆ 1093 ಜನರು ಬಂದಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಸಚಿವ ಭೈರತಿ ಬಸವರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರ ಗಮನಕ್ಕೆ ತಂದರು.

6.5 ಕೋಟಿಯನ್ನು ಕೋವಿಡ್‌ ಆಸ್ಪತ್ರೆಗಾಗಿ ಇದುವರೆಗೆ ಖರ್ಚು ಮಾಡಲಾಗಿದ್ದು, ಇದು ವರೆಗೆ 16 ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 4 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಸಾವಿರ ಜನರ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 3691 ಜನರ ವರದಿ ನೆಗೆಟಿವ್‌ ಬಂದಿದ್ದು, ಉಳಿದ ವರದಿಗಳು ಬರಬೇಕಿದೆ. 1 ಲಕ್ಷ ರೇಶನ್‌ ಕಿಟ್‌ಗಳನ್ನು ದಾನಿಗಳ ನೆರವಿನಿಂದ ಇದುವರೆಗೆ ವಿತರಿಸಲಾಗಿದೆ ಎಂದು ವಿವರಿಸಿದರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿ. ಗೋನಾಳ್‌ ಗ್ರಾಮದ ಬಳಿ 102 ಎಕರೆ ಪ್ರದೇಶದಲ್ಲಿ 700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಕೊಳಗಲ್ಲು ಬಳಿ 21 ಎಕರೆಯಲ್ಲಿ 14.28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಈಗಾಗಲೇ ನಾನು ಒಪ್ಪಿಗೆ ನೀಡಿದ್ದು, ಶೀಘ್ರ ಸಚಿವ ಸಂಪುಟದ ಮುಂದೆ ಬರಲಿದ್ದು, ಅನುಮೋದನೆ ದೊರಕಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು.
ಸಂಸದರಾದ ವೈ. ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಬಿ. ನಾಗೇಂದ್ರ, ಸೋಮಶೇಖರ ರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ,ಎಸ್ಪಿ ಸಿ.ಕೆ. ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮದ್ಯದಂಗಡಿ ಬಂದ್‌ಗೆ ಸೂಚನೆ

ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳಿಗೆ ತೀವ್ರ ಕಟ್ಟೆಚ್ಚರ ವಹಿಸಿದಾಗಿಯೂ ಆಂಧ್ರಪ್ರದೇಶದಿಂದ ಜನರು ನುಸುಳಿಕೊಂಡು ಬಂದು ಮದ್ಯ ತೆಗೆದುಕೊಂಡು ಹೋಗುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಡಿಭಾಗದ ಮದ್ಯದ ಅಂಗಡಿಗಳನ್ನು ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರಿಗೆ ಅರಣ್ಯ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಸೂಚನೆ ನೀಡಿದರು.

ಆಂಧ್ರದಲ್ಲಿ ಕೊರೋನಾ ಪ್ರಕರಣಗಳು ತೀವ್ರ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಆ ಕಡೆಯಿಂದ ಜನರು ನುಸುಳದಂತೆ ತೀವ್ರ ಹದ್ದುಬಸ್ತು ಮಾಡಿದಾಗಿಯೂ ಜನರು ಬರುತ್ತಿರುವುದು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಲಾಕ್‌ಡೌನ್‌ ಮುಗಿಯುವವರೆಗೆ ಬಂದ್‌ ಮಾಡಿ ಎಂದರು.

ಶಾಸಕ ಸೋಮಲಿಂಗಪ್ಪ, ಜಿ. ಸೋಮಶೇಖರ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ. ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
 

Follow Us:
Download App:
  • android
  • ios