*  ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಲು ನಾನು ಕಾರಣನಲ್ಲ*  ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಆದ್ರೆ ಬದಲಾವಣೆಯಾಗುವ ಸಾಧ್ಯತೆ*  ರೆಡ್ಡಿ ಸಚಿವರಾಗಿದ್ದರೆ ನಿಜಕ್ಕೂ ಸಂತೋಷ ಪಡುತ್ತಿದ್ದೆ  

ಬಳ್ಳಾರಿ(ಆ.07):ಸೋಮಶೇಖರ ರೆಡ್ಡಿ ನನ್ನ ಸಹೋದರ ಇದ್ದಂತೆ. ನಾನು ಸಚಿವನಾದ್ರೂ ಸೋಮಶೇಖರ ರೆಡ್ಡಿಯೇ ಸಚಿವ ಆದಂತೆ. ಅವರಾದ್ರೂ ನಾನು ಆದಂತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಪ್ರತಿಕ್ರಿಯಿಸಿದರು.

ಕೋವಿಡ್‌ 3ನೇ ಅಲೆಯ ಸಿದ್ಧತೆ ಸೇರಿದಂತೆ ಜಿಲ್ಲೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಸಭೆ ನಡೆಸಲು ನಗರಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದರು.

ಬೊಮ್ಮಾಯಿ, ಯಡಿಯೂರಪ್ಪನವರ ಕೈಗೊಂಬೆನಾ? ಆನಂದ ಸಿಂಗ್‌ ಹೇಳಿದ್ದಿಷ್ಟು

ಶಾಸಕ ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಲು ನಾನು ಕಾರಣನಲ್ಲ. ನಾನು ಯಾವುದೇ ಕುತಂತ್ರ ಮಾಡಿಲ್ಲ. ನಾನಿನ್ನೂ ಕುತಂತ್ರ ಬುದ್ಧಿಯನ್ನು ಕಲಿತಿಲ್ಲ. ಈ ಹಿಂದೆ ಉಸ್ತುವಾರಿ ಇದ್ದವರಿಗೆ ಅದನ್ನೇ ಮುಂದುವರಿಸಲಾಗಿದೆ. ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಆದ್ರೆ ಬದಲಾವಣೆಯಾಗುವ ಸಾಧ್ಯತೆಗಳಿವೆ. ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ನೀಡಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಿಎಂ ಅವರು ಯೋಚಿಸುತ್ತಿದ್ದಾರೆ. ಅಷ್ಟಕ್ಕೂ ಜಿ.ಸೋಮಶೇಖರ ರೆಡ್ಡಿ ಬೇರೆ ಅಲ್ಲ; ನನ್ನ ಸಹೋದರನ ಸಮಾನ. ಅವರು ಸಚಿವರಾಗಿದ್ದರೆ ನಿಜಕ್ಕೂ ಸಂತೋಷ ಪಡುತ್ತಿದ್ದೆ. ಸಚಿವ ಸ್ಥಾನ ತಪ್ಪಿಸುವ ಕೆಲಸ ನಾನೆಂದೂ ಮಾಡುವುದಿಲ್ಲ. ಆ ರೀತಿಯ ಯೋಚನೆ ಸಹ ನಾನು ಮಾಡಲ್ಲ ಎಂದು ಸಚಿವ ಸಿಂಗ್‌ ಸ್ಪಷ್ಟಪಡಿಸಿದರು.