ಹನೂರಿನ ಆರ್‌.ಎಸ್‌.ದೊಡ್ಡಿ ಗ್ರಾಮದಿಂದ ಯಡರಹಳ್ಳಿ ದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಪ್ಪಾಗಿ ಮೈಲುಗಲ್ಲು ಹಾಕಲಾಗಿದೆ. ಈ ರಸ್ತೆಯಲ್ಲಿ ಓಡಾಡುವ ಜನ ತಪ್ಪಾದ ಮೈಲುಗಲ್ಲಿನಿಂದಾಗಿ ತೊಂದರೆಪಡುವಂತಾಗಿದೆ. ರಸ್ತೆಯಲ್ಲಿರುವ ಸೇತುವೆಗಳ ಬಳಿ ನಿರ್ಮಾಣವಾಗಿರುವ ಕಂದಕದಿಂದ ಸಂಚಾರ ದುಸ್ತರವಾಗಿದೆ

ಚಾಮರಾಜನಗರ(ಸೆ.09): ಹನೂರಿನ ಆರ್‌.ಎಸ್‌.ದೊಡ್ಡಿ ಗ್ರಾಮದಿಂದ ಯಡರಹಳ್ಳಿ ದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆಗಳ ಬಳಿ ನಿರ್ಮಾಣವಾಗಿರುವ ಕಂದಕದಿಂದ ಸಂಚಾರ ದುಸ್ತರವಾಗಿದೆ. ಅಷ್ಟೇ ಅಲ್ಲ, ತಪ್ಪಾಗಿ ಮೈಲುಗಲ್ಲು ಹಾಕಿರುವುದರಿಂದ ಪ್ರಯಾಣಿಕರು ಗೊಂದಲಕ್ಕೂ ಒಳಗಾಗುತ್ತಿದ್ದಾರೆ.

ಅವಧಿ ಮುಗಿದರೂ ಕಾಮಗಾರಿ ಮುಗಿದಿಲ್ಲ:

ಹನೂರು ಸಮೀಪದ ಆರ್‌.ಎಸ್‌.ದೊಡ್ಡಿಯಿಂದ ಯಡರಹಳ್ಳಿ ದೊಡ್ಡಿ ಗ್ರಾಮದವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಗ್ರಾಮೀಣ ರಸ್ತೆ ಅಭಿವೃದ್ಧಿಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5 ಕಿ.ಮೀ.ರಸ್ತೆ ಕಾಮಗಾರಿಯನ್ನು 2017ರ ಆಗಸ್ಟ್‌ನಲ್ಲಿ 2.85 ಕೋಟಿ ರು. ವೆಚ್ಚದಲ್ಲಿ ಪ್ರಾರಂಭಿಸಿದ್ದು, ಅವಧಿ ಮುಗಿದಿದ್ದರೂ ಕಾಮಗಾರಿ ಮುಗಿದಿಲ್ಲ.

ಅಪೂರ್ಣ ಕಾಮಗಾರಿಯಿಂದ ಜನರಿಗೆ ತೊಂದರೆ:

ಜಿಪಂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಈ ಮಾರ್ಗದಲ್ಲಿ ಬರುವ ಎರಡು ಸೇತುವೆಗಳ ಬಳಿ ಅಪೂರ್ಣ ಕಾಮಗಾರಿಯಿಂದ ಈ ಭಾಗದಲ್ಲಿ ಸಂಚರಿಸುವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಈ ಭಾಗದಲ್ಲಿ ಬರುವ ಗ್ರಾಮಗಳಾದ ರಾಯರ ದೊಡ್ಡಿ, ಹುಲ್ಲೇಪುರ ತೋಟದ ಮನೆಯಲ್ಲಿ ವಾಸಿಸುವ ಹಾಗೂ ಯಡರಹಳ್ಳಿ ದೊಡ್ಡಿ, ಹಲಗುಮೂಲೆ ಇನ್ನಿತರೆ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಮತ್ತೊಮ್ಮೆ ಪಕ್ಷ ಕಟ್ಟಿ ಅಧಿಕಾರಕ್ಕೆ ತರೋಣ : ಪ್ರಜ್ವಲ್ ರೇವಣ್ಣ

ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಮೈಲಿಗಲ್ಲಿನಲ್ಲಿ ಯಡರಹಳ್ಳಿ ದೊಡ್ಡಿಯಿಂದ ಆರ್‌.ಎಸ್‌.ದೊಡ್ಡಿ ಕಡೆಗೆ ಬರುವ ಮಾರ್ಗದಲ್ಲಿ ಅಳವಡಿಸಲಾಗಿರುವ ಮೈಲಿಗಲ್ಲಿನಲ್ಲಿ ಆರ್‌.ಎಸ್‌.ದೊಡ್ಡಿ ಎಂದು ಬರೆಯುವ ಬದಲಾಗಿ ಯಡರಹಳ್ಳಿ ದೊಡ್ಡಿ ಎಂದು ತಪ್ಪಾಗಿ ಬರೆದಿರುವುದರಿಂದ ಈ ರಸ್ತೆಯಲ್ಲಿ ಓಡಾಡುವ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾಲೇಜು, ಏಕಲವ್ಯ ಶಾಲೆ ಸೇರಿದಂತೆ ರಾಯರ ದೊಡ್ಡಿ ಮತ್ತು ಎಡರಹಳ್ಳಿ ದೊಡ್ಡಿ, ಚಿಂಚಳ್ಳಿ ಅಲಗುಮೂಲೆ ಇನ್ನಿತರೆ ಗ್ರಾಮಗಳಿಗೆ ಸಂಚರಿಸುವ ಗ್ರಾಮಸ್ಥರು ಪೇಚೆಗೆ ಸಿಲುಕುವಂತೆ ಮಾಡಿದೆ.

ಜಮೀನುಗಳಿಗೆ ಸಂಪರ್ಕ ಮಾರ್ಗವೇ ಇಲ್ಲ:

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಂಡಿರುವ ಕಾಮಗಾರಿಯಿಂದ ಈ ಭಾಗದಲ್ಲಿರುವ ಜಮೀನುಗಳ ರೈತರಿಗೆ ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿ ಅನುಕೂಲವಾಗಬೇಕಿತ್ತು. ಆದರೆ ಸೀಮಿತ ರೈತರ ಜಮೀನುಗಳಿಗೆ ಪೈಪ್‌ಗಳನ್ನು ಅಳವಡಿಸಿ ಜಮೀನಿಗೆ ಸಂಪರ್ಕ ನೀಡಲಾಗಿದೆ. ಈ ಭಾಗದಲ್ಲಿ ಹಲವಾರು ರೈತರು ಜಮೀನುಗಳಿಗೆ ಹೋಗಲು ರಸ್ತೆ ನಿರ್ಮಾಣ ಮಾಡದಿರುವುದರಿಂದ ಕಾಲುವೆ ದಾಟಿ ಹೋಗಲು ಸಾಧ್ಯವಾಗದೆ ಇಲ್ಲಿನ ರೈತರು ಜಮೀನುಗಳನ್ನು ಉಳುಮೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿ ಸಂಕಷ್ಟಕ್ಕಿಡಾಗಿದ್ದಾರೆ.

ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್‌ ?

ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟಹಿರಿಯ ಅಧಿಕಾರಿಗಳು ಕೂಡಲೇ ಗಮನಹರಿಸಿ ಮೈಲಿಗಲ್ಲಿನಲ್ಲಿರುವ ತಪ್ಪು ಮಾಹಿತಿಯನ್ನು ಸರಿಪಡಿಸುವುದರ ಜೊತೆಗೆ ರಾಯರ ದೊಡ್ಡಿಗೆ ಬರುವ ತಿರುವಿನಲ್ಲಿ ಉಂಟಾಗಿರವ ಕಂದಕ ಹಾಗೂ ಬರಹಳ್ಳದ ಸೇತುವೆ ಬಳಿ ಕಂದಕ ನಿರ್ಮಾಣವಾಗಿರುವುದನ್ನು ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊಸದಾಗಿ ಬಂದವರ ಪಡಿಪಾಟಲು:

ಆರ್‌.ಎಸ್‌.ದೊಡ್ಡಿ ಹಾಗೂ ಯಡರಹಳ್ಳಿ ಮಾರ್ಗದಲ್ಲಿ ಹೊಸದಾಗಿ ಸಂಚರಿಸುವ ಪ್ರಯಾಣಿಕರು ಮೈಲಿಗಲ್ಲಿನ ಯಡವಟ್ಟಿನಿಂದ ಪೇಚೆಗೆ ಸಿಲುಕುವುದಲ್ಲದೆ ದಾರಿ ತಪ್ಪಿ ಪಡಿಪಾಟಿಲು ಪಡುವಂತಾಗಿದೆ. ಮೈಲಿಗಲ್ಲಿನಲ್ಲಿ ತಪ್ಪಾದ ಮಾಹಿತಿ ಇರುವುದರಿಂದ ದಾರಿ ತಪ್ಪಿರುವ ಉದಾಹರಣೆಗಳು ಇವೆ. ಕಡಿಮೆ ಅಂತರದಲ್ಲಿ ಸಾಗುವ ಉದ್ದೇಶದಿಂದ ಈ ಮಾರ್ಗದಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಗ್ರಾಮಗಳಿಗೆ ತೆರಳುವ ಜನತೆ ಕೂಡ ಮೈಲಿಗಲ್ಲಿನ ತಪ್ಪು ಮಾಹಿತಿಯಿಂದ ಗೊಂದಲಕ್ಕೆ ಒಳಗಾಗುವಂತೆ ಆಗಿದೆ.

-ಜಿ.ದೇವರಾಜು ನಾಯ್ಡು