ಶಿಗ್ಗಾಂವಿ(ನ.20):ರಾಜ್ಯ ಸರ್ಕಾರವ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಉದ್ದೇಶದಿಂದ ನೀಡಿರುವ ಅಕ್ಕಿಯನ್ನು ಅಡುಗೆ ಸಿಬ್ಬಂದಿ ಶಾಲೆಯಿಂದ ಕದ್ದು ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮಸ್ಥರು ಹಿಡಿದ ಘಟನೆ ತಾಲೂಕಿನ ದುಂಡಶಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ದುಂಡಶಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ನ. 8 ರಂದು ಶಾಲೆಯಿಂದ ಸುಮಾರು 20 ಕೆಜಿಗೂ ಹೆಚ್ಚು ಅಕ್ಕಿಯನ್ನು ಕಳ್ಳ​ತನ ಮಾಡಿ​ಕೊಂಡು ದ್ವಿ ಚಕ್ರ ವಾಹನದ ಮೇಲೆ ತೆಗೆದುಕೊಂಡು ಹೋಗುವಾಗ ಗ್ರಾಮಸ್ಥರು ಹಿಡಿದಿದ್ದು ಅದರ ಪೋಟೊವನ್ನು ತೆಗೆಯಲಾಗಿದೆ. ನಂತರದ ದಿನದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್‌ಡಿಎಂಸಿ ಸಮಿತಿಯವರು ಸಭೆ ಸೇರಿ ಶಾಲೆಯ ಎರಡು ಜನ ಅಡುಗೆದಾರರಿಂದ ಬಿಳಿ ಹಾಳೆಯ ಮೇಲೆ ಕ್ಷಮಾ​ಪ​ಣೆಯ ಪತ್ರ ಬರೆ​ದು​ಕೊಡುವಂತೆ ಸಭೆ​ಯಲ್ಲಿ ತೀರ್ಮಾ​ನಿಸಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿ​ಸಿ​ಕೊ​ಳ್ಳ​ಲಾ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳ್ಳ​ತನ ಮಾಡಿ​ರುವ ಕುರಿತು ತಪ್ಪೊಪ್ಪಿಗೆಯನ್ನು ಅಡುಗೆದಾರರಾದ ಸುರೇಖಾ ರಾಮಪ್ಪ ಗುಡಗೇರಿ ಹಾಗೂ ಲಕ್ಷ್ಮವ್ವ ಹೆ ಲಮಾಣಿ ಅವರ ಸಹಿಯನ್ನು ಖಾಲಿ ಇರುವ ಬಿಳಿಯ ಕಾಗದದ ಮೇಲೆ ಪಡೆದುಕೊಳ್ಳಲಾಗಿದ್ದು, ಮಾಡಿದ ತಪ್ಪು ಏನು ಎಂಬುದು ಬರೆ​ಯಿ​ಸಿ​ಕೊ​ಳ್ಳದೇ ಬಿಳಿ ಹಾಳೆಯ ಮೇಲೆ ಕೇವಲ ಸಹಿ ಪಡೆ​ದು​ಕೊ​ಳ್ಳ​ಲಾ​ಗಿದ್ದು, ಈ ಪ್ರತಿ​ಯನ್ನು ಹಾಗೂ ಅಗಿ​ರುವ ಘಟನೆ ಕುರಿತು ಅಧಿ​ಕಾ​ರಿ​ಗ​ಳಿಗೆ ತಿಳಿ​ಸದೇ ಮುಖ್ಯ ಶಿಕ್ಷಕಿಯರು ಸಹಿ ಪತ್ರ​ವನ್ನು ತಮ್ಮ ಪೈಲ್‌ನಲ್ಲಿ ಇಟ್ಟುಕೊಂಡಿದ್ದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಂತೂ ಇಂತೂ ಅಕ್ಕಿ ಕಳ್ಳ​ರನ್ನು ಹಿಡಿದಿದ್ದು ಆಯಿತು ಅದರ ಕ್ಷಮಾಪಣೆಯೂ ಆಯಿತು. ಆದರೆ, ಇದರ ಕುರಿತು ಮುಖ್ಯ ಶಿಕ್ಷಕರು ಮೇಲಧಿಕಾರಿಗಳಿಗೆ ಆಗಲಿ, ಬಿಸಿಊಟ ಯೋಜನಾಧಿಕಾರಿಗಳಿಗಾಗಲಿ ಯಾವುದೇ ವರದಿ ನೀಡಿಲ್ಲ. ಈ ಕುರಿತು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿ​ದ್ದಾ​ರೆ.

ನಾನು ಅಂದು ಶಿಗ್ಗಾಂವಿಗೆ ತರಬೇತಿಗೆ ಹೋ​ಗಿದ್ದ ವೇಳೆಯಲ್ಲಿ ಅಕ್ಕಿ ಕಳ್ಳತನವಾಗಿದೆ. ಆದರೆ, ನಂತರದ ದಿನದಲ್ಲಿ ಎಸ್‌ಡಿಎಂಸಿ ಹಾಗೂ ಶಿಕ್ಷಕರ ನೇತೃ​ತ್ವ​ದಲ್ಲಿ ಸಭೆ ಸೇರಿ ಕಳ್ಳ​ತನ ಮಾಡಿದ್ದ ಅಡು​ಗೆ​ದಾ​ರ​ರಿಂದ ಬಿಳಿ ಕಾಗದದ ಮೇಲೆ ಕ್ಷಮಾಪಣೆ ಬರೆ​ದು​ಕೊಂಡು ಅವ​ರಿಂದ ಸಹಿ ಪಡೆ​ಯಾ​ಗಿದೆ. ಆದರೆ, ಈ ಕುರಿತು ಮೇಲಧಿಕಾರಿಗಳಿಗೆ ಯಾವುದೇ ವರದಿ ನೀಡಿ​ಲ್ಲ ಎಂದು ಮುಖ್ಯ ಶಿಕ್ಷಕಿ ಎಸ್‌.ಜಿ. ಅಂಗಡಿ ಅವರು ಹೇಳಿದ್ದಾರೆ. 

ಬಿಸಿಯೂಟದ ಯೋಜನೆಯ 20 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಲಾಗಿದೆ. ಆದರೆ, ಶಾಲೆಯಲ್ಲಿಯೇ ಸಭೆ ಮಾಡಿ ಅಡುಗೆದಾರರಿಗೆ ಸೂಚನೆ ನೀಡಲಾಗಿದೆ ಹಾಗೂ ಬಿಳಿ ಕಾಗದದ ಮೇಲೆ ಅಡುಗೆದಾರರ ಸಹಿ ಪಡೆ​ದು​ಕೊ​ಳ್ಳ​ಲಾ​ಗಿ​ದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ತಾ. ಲಮಾಣಿ ಅವರು ತಿಳಿಸಿದ್ದಾರೆ. 

ಸುಮಾರು 20 ಕೆಜಿಗೂ ಹೆಚ್ಚು ಅಕ್ಕಿ​ಯನ್ನು ಕಳ್ಳ​ತನ ಮಾಡಿ​ಕೊಂಡು ಹೋಗು​ತ್ತಿ​ರು​ವು​ದನ್ನು ಗಮ​ನಿಸಿ ತಕ್ಷ​ಣ​ವೇ ಸಿಆರ್‌ಪಿ ನಾಗರಾಜ ಲಮಾಣಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿ​ಸಿ​ದರೂ ಸಹ ಇಲ್ಲಿಯ ವರೆಗೂ ಕಳ್ಳ​ತನ ಮಾಡಿ​ದ​ವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿ​ರು​ವುದು ಖಂಡ​ನಾ​ರ್ಹ ಎಂದು ಗ್ರಾಮಸ್ಥ ರವಿ ಪರಶುರಾಮ ಲಮಾಣಿ ಅವರು ಹೇಳಿದ್ದಾರೆ.