ಬೆಂಗಳೂರು[ಮಾ.23]: ಸಾಂಕ್ರಾಮಿಕ ಮಹಾಮಾರಿ ಕೊರೋನಾ ಹರಡುವುದನ್ನು ತಡೆಯಲು ನಮ್ಮ ಮೆಟ್ರೋ ಸೇವೆಯನ್ನು ಮಾ.31ರವರೆಗೂ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ಬಿಎಂಆರ್‌ಸಿಎಲ್‌ ಶನಿವಾರವಷ್ಟೇ ಕೇವಲ ತುರ್ತು ಸಂದರ್ಭದಲ್ಲಿ ಪ್ರಯಾಣಿಸುವವರು ಹಾಗೂ ಸರ್ಕಾರಿ ಅಧಿಕಾರಿಗಳಿಗಾಗಿ ಮಾತ್ರ ಮೆಟ್ರೋ ಸಂಚಾರ ನಡೆಸುವುದಾಗಿ ತಿಳಿಸಿತ್ತು. ಆದರೆ, ಇದೀಗ ಸಂಪೂರ್ಣವಾಗಿ ಮೆಟ್ರೋ ಸಂಚಾರ ರದ್ದು ಮಾಡುವ ತೀರ್ಮಾನ ಕೈಗೊಂಡಿದೆ.

ಮಾ.22ರಂದು ನಮ್ಮ ಮೆಟ್ರೋ ಬಂದ್: ಉಳಿದ ದಿನಗಳಲ್ಲಿ ಮಕ್ಕಳು, ಹಿರಿಯ ನಾಗರಿಕರಿಗೆ ನಿರ್ಬಂಧ!

ಬಿಎಂಆರ್‌ಸಿಎಲ್‌ ಸರ್ಕಾರಿ ಕಚೇರಿಗಳಿಗೆ ಬರುವ ಅಧಿಕಾರಿಗಳ, ವೈದ್ಯಕೀಯ ಸಿಬ್ಬಂದಿ ಪೊಲೀಸ್‌ ಸೇರಿದಂತೆ ಇತರೆ ಭದ್ರತಾ ಸಿಬ್ಬಂದಿ ತಮ್ಮ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ನೀಡುವುದಾಗಿ ತಿಳಿಸಿತ್ತು.

ಈ ಸಿಬ್ಬಂದಿಗಾಗಿ ಬೆಳಗ್ಗೆ 8ರಿಂದ 10ರವರೆಗೆ ಮತ್ತು ಸಂಜೆ 4ರಿಂದ 5ರವರೆಗೆ ಪ್ರತಿ 5 ನಿಮಿಷಕ್ಕೊಂದು ರೈಲು ಓಡಿಸಲಾಗುವುದು. ಅಲ್ಲದೆ, ಪ್ರತಿ ರೈಲಿನಲ್ಲಿ ಕೇವಲ 150 ಸಿಬ್ಬಂದಿ ಮಾತ್ರ ಸಂಚರಿಸಬೇಕು. ಎಲ್ಲ ಪ್ರಯಾಣಿಕರು ಆಸನಗಳಲ್ಲಿ ಕುಳಿತಿರಬೇಕು ಯಾವುದೇ ಸಿಬ್ಬಂದಿ ನಿಂತು ಪ್ರಯಾಣ ಮಾಡಬಾರದು ಎಂದು ಹೇಳಿತ್ತು. ಇದೀಗ ಮೆಟ್ರೋ ಎಲ್ಲ ರೀತಿಯ ಸಂಚಾರಗಳನ್ನು ಮಾ.31ರವರೆಗೆ ಸ್ಥಗಿತಗೊಸುವುದಾಗಿ ಘೋಷಿಸಿದೆ. ಜೊತೆಗೆ, ಮೆಟ್ರೋ ನಿಲ್ದಾಣದಲ್ಲಿನ ಸಾರ್ವಜನಿಕ ವಾಹನಗಳ ಪಾರ್ಕಿಂಗ್‌, ವಾಣಿಜ್ಯ ಮಳಿಗೆಗಳು ವಹಿವಾಟನ್ನು ಸಂಪೂರ್ಣ ನಿಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ ಮೆಟ್ರೋದಲ್ಲಿ ಪ್ರತಿ ದಿನ ಸಾವಿರಾರು ಜನ ಸಂಚರಿಸುತ್ತಿದ್ದು, ಒಬ್ಬರಿಗೊಬ್ಬರು ಹತ್ತಿರದಲ್ಲಿ ನಿಂತು ಪ್ರಯಾಣಿಸುತ್ತಿದ್ದರು. ಈ ಬೆಳವಣಿಯಿಂದ ಪ್ರಯಾಣಿಕರ ಸೋಂಕು ಉಂಟಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಎಲ್ಲ ರೀತಿಯ ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಲ್ಲಿ ಮೆಟ್ರೋ ರೈಲು ಸಂಖ್ಯೆ ಇಳಿಕೆ : ಟ್ರಿಪ್ ಗಳು ಇಳಿಕೆ

ಮೆಟ್ರೋ ಸಂಚಾರ ಮಾರ್ಗಗಳಲ್ಲಿ ವಿದ್ಯುತ್‌ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವುದಕ್ಕಾಗಿ ಬೆಳಗ್ಗೆ ಮತ್ತು ಸಂಜೆ ವೇಳೆ ಖಾಲಿ ರೈಲುಗಳನ್ನು ಸಂಚರಿಸುವುದಾಗಿ ಮೆಟ್ರೋ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶ್ವಂತ್‌ ಚೌಹಾಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.