ಬೆಂಗಳೂರು [ಮಾ.14]:  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೆ ರೈಲುಗಳ ಸಂಖ್ಯೆ ಮತ್ತು ಟ್ರಿಪ್‌ಗಳನ್ನು ಕಡಿತ ಮಾಡುವ ಚಿಂತನೆ ಹೊಂದಿದ್ದೇವೆ. ಆದರೆ, ಮೆಟ್ರೋ ಸೇವೆ ಮಾತ್ರ ಅಬಾಧಿತವಾಗಿರಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

"

ಕಳೆದೊಂದು ವಾರದಿಂದ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಸಾಕಷ್ಟುಕಡಿಮೆಯಾಗುತ್ತಿದೆ. ಈ ಹಿಂದೆ ಮೆಟ್ರೋದಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬುಧವಾರ ಕೇವಲ 2.70 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದರು ಎಂದು ಅವರು ಮಾಹಿತಿ ನೀಡಿದರು.

ಈಗ ಸರ್ಕಾರವೇ ಸಭೆ, ಸಮಾರಂಭಗಳನ್ನು ರದ್ದು ಮಾಡಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ವಾರದ ಕೊನೆಯ ದಿನವಾದ ಶನಿವಾರ, ಭಾನುವಾರ ಪ್ರಯಾಣಿಕರ ಸಂಖ್ಯೆ ಹೇಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು ಮೆಟ್ರೋ ರೈಲುಗಳ ಸಂಖ್ಯೆ ಮತ್ತು ಟ್ರಿಪ್‌ಗಳನ್ನು ಕಡಿತ ಮಾಡಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ...

ಸಾಮಾನ್ಯ ದಿನಗಳಲ್ಲಿ ಯಲಚೇನಹಳ್ಳಿ- ನಾಗಸಂದ್ರ ಮೆಟ್ರೋ ಮಾರ್ಗದಲ್ಲಿ 1.90 ಲಕ್ಷಕ್ಕಿಂತ ಅಧಿಕ ಹಾಗೂ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ 2.20 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಮೆಟ್ರೋ ಸೇವೆ ಅಬಾಧಿತ:

ನಮ್ಮ ಮೆಟ್ರೋ ರೈಲುಗಳು ಮುಂಜಾನೆ 5ರಿಂದ ರಾತ್ರಿ 12ರವರೆಗೆ ಸಾಮಾನ್ಯದಂತೆ ಸಂಚರಿಸಲಿವೆ. ಯಲಚೇನಹಳ್ಳಿ- ನಾಗಸಂದ್ರ(ಹಸಿರು ಮಾರ್ಗ)- ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ(ನೇರಳೆ ಮಾರ್ಗ) ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ನಡೆಸಲಿದೆ.

ಕೊರೋನಾ ಸೋಂಕಿನ ಕುರಿತು ಮೆಟ್ರೋ ನಿಲ್ದಾಣಗಳಲ್ಲಿ ಸಾಕಷ್ಟುಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಮೆಟ್ರೋ ಸಿಬ್ಬಂದಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಸಾಯನಿಕ ದ್ರಾವಣ ಬಳಸಿ ಮೆಟ್ರೋ ರೈಲಿನ ಒಳಾಂಗಣ, ಮೆಟ್ರೋ ನಿಲ್ದಾಣಗಳನ್ನು ಸ್ಚಚ್ಛ ಮಾಡುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ರೈಲುಗಳ ಸಂಚಾರ ಹೆಚ್ಚಿಸಬೇಕೇ ಅಥವಾ ಕಡಿಮೆ ಮಾಡಬೇಕೇ ಎಂಬುದನ್ನು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ನಿರ್ಧಾರವನ್ನು ನಿಗಮ ಕೈಗೊಳ್ಳಲಿದೆ.

-ರವಿ ಪ್ರಕಾಶ್‌, ಹಿರಿಯ ವ್ಯವಸ್ಥಾಪಕ, ಬಿಎಂಆರ್‌ಸಿಎಲ್‌.