ಕಂಬಳದ ದಾಖಲೆ ವೀರ ವಿಶ್ವನಾಥ್ ಹೊಟ್ಟೆ ಪಾಡಿಗೆ ಮಾಡೋದು ಕೂಲಿ
ಕಂಬಳದಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇರುವ 23ರ ಈ ಯುವಕ ಹೊಟ್ಟೆ ಪಾಡಿಗಾಗಿ ನೆಚ್ಚಿಕೊಂಡಿರುವುದು ಕೂಲಿ ಕೆಲಸವನ್ನು!
ವರದಿ : ಸುಭಾಶ್ಚಂದ್ರ ಎಸ್.ವಾಗ್ಳೆ
ಉಡುಪಿ (ಫೆ.14): ಕರಾವಳಿಯ ಕಂಬಳ ಕ್ರೀಡೆಯಲ್ಲಿ ಕಳೆದ ವಾರವಷ್ಟೇ ಕೇವಲ 9.15 ಸೆಕೆಂಡ್ ವೇಗದಲ್ಲಿ 100 ಮೀ. (11.46 ಸೆಕೆಂಡ್‌ಗೆ 125 ಮೀ.) ಅತ್ಯಂತ ವೇಗವಾಗಿ ಓಡುವ ಮೂಲಕ ಹೊಸ ದಾಖಲೆ ಬರೆದ ಬೈಂದೂರು ತಾಲೂಕಿನ ವಿಶ್ವನಾಥ ದೇವಾಡಿಗ ಈ ವರ್ಷದ ಸೆನ್ಸೆಷನಲ್ ಹೆಸರು. ಕಂಬಳದಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇರುವ 23ರ ಈ ಯುವಕ ಹೊಟ್ಟೆ ಪಾಡಿಗಾಗಿ ನೆಚ್ಚಿಕೊಂಡಿರುವುದು ಕೂಲಿ ಕೆಲಸವನ್ನು!
ಕಳೆದ ಭಾನುವಾರ ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳದಲ್ಲಿ ಕೋಣಗಳನ್ನು ಓಡಿಸಿ ಕಾರ್ಕಳದ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತರಾಗಿರುವ ಶ್ರೀನಿವಾಸ ಗೌಡ ಅವರ ದಾಖಲೆಯನ್ನೂ (9.55 ಸೆಕೆಂಡಲ್ಲಿ 100 ಮೀ.) ಮುರಿದಿದ್ದರು. ಇಂತಿಪ್ಪ ವಿಶ್ವನಾಥ ದೇವಾಡಿಗನನ್ನು ಇಂದು ಜಗತ್ತೇ ನಿಬ್ಬೆರಗಾಗಿ ನೋಡುತ್ತಿದ್ದರೆ, ಕಂಬಳದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟಎಂಬ ಅರಿವಿರುವ ಈ ದಾಖಲೆವೀರ ಮಾತ್ರ ಬೇರೆಯವರ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
9.15 ಸೆಕೆಂಡಲ್ಲಿ 100 ಮೀ.: ಕಂಬಳದಲ್ಲಿ ಬೈಂದೂರು ವಿಶ್ವನಾಥ್ ಹೊಸ ದಾಖಲೆ! .
ಸ್ವಂತ ಜಮೀನಿದ್ದರೂ ಕೂಲಿ ಅನಿವಾರ್ಯ: ವಿಶ್ವನಾಥ್ ಅವರು ಬೈಂದೂರಿನ ನಾಯ್ಕನಕಟ್ಟೆಗ್ರಾಮದ ನರಿಗುಡಿ ಎಂಬಲ್ಲಿ ಮಣ್ಣಿನ ಗೋಡೆಯ ಹಂಚಿನ ಮಾಡಿನ ಸಣ್ಣ ಮನೆಯಲ್ಲಿ, ವಯಸ್ಸಾದ ತಂದೆತಾಯಿ, ಅಣ್ಣ ಮತ್ತು ಇಬ್ಬರು ತಂಗಿಯರೊಂದಿಗೆ ವಾಸವಾಗಿದ್ದಾರೆ. ತಂದೆಯ ಎರಡೆಕರೆ ಭೂಮಿಯಲ್ಲಿ ಅಣ್ಣ ತಮ್ಮ ಸೇರಿ ಭತ್ತ, ಕಡಲೆಕಾಯಿ ಬೆಳೆಯುತ್ತಾರೆ. ಇದರಿಂದ ಮನೆಗೆ ಬೇಕಾದಷ್ಟುಅಕ್ಕಿಯೇನೋ ದೊರೆಯುತ್ತದೆ. ಆದರೆ ಉಳಿದ ಖರ್ಚಿಗೆ ತಾವಿಬ್ಬರೂ ಹೊರಗೆ ಕೂಲಿ ಕೆಲಸ ಮಾಡುತ್ತಾರೆ. ಆ ಕೆಲಸ ಈ ಕೆಲಸ ಅಂತೇನಿಲ್ಲ, ಗದ್ದೆಯಲ್ಲಿ ಉಳುವುದು, ಮಣ್ಣು ಅಗೆಯುವುದು, ಹೊರುವುದು ಹೀಗೆ ಕೂಲಿ ಸಿಗುವ ಎಲ್ಲ ಕೆಲಸಗಳನ್ನೂ ಮಾಡುತ್ತೇವೆ ಎನ್ನುತ್ತಾರೆ ವಿಶ್ವನಾಥ.
ಬಡತನದಿಂದಾಗಿ ಹೈಸ್ಕೂಲು ಶಿಕ್ಷಣ ಕೂಡ ಪೂರ್ಣಗೊಳಿಸಲಾಗದ ವಿಶ್ವನಾಥ ಅವರಿಗೆ ತನ್ನ ತಂಗಿಯರಿಗೆ ಒಳ್ಳೆಯ ಶಿಕ್ಷಣ ಕೊಡಿಸುವ, ಒಳ್ಳೆಯ ಕಡೆಗೆ ಮದುವೆ ಮಾಡುವ ಕನಸಿದೆ. ಕಂಬಳ-ಕೂಲಿ ನಡುವೆ ಅಣ್ಣನ ಜೊತೆಸೇರಿ ಮನೆಯನ್ನು ಗಟ್ಟಿಗೊಳಿಸುವ, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆಹೊತ್ತುಕೊಂಡಿದ್ದಾರೆ.
18ನೇ ವಯಸ್ಸಿಗೇ ಕಂಬಳಕ್ಕೆ: ಹಿಂದೆ ಮನೆಯಲ್ಲಿ ತಂದೆ ಸಾಕುತ್ತಿದ್ದ ಕೋಣಗಳನ್ನೇ ತನ್ನ 15ನೇ ವಯಸ್ಸಲ್ಲಿ ತಮಾಷೆಗಾಗಿ ಮನೆಯ ಗದ್ದೆಗಳಲ್ಲಿ ಓಡಿಸುತಿದ್ದ ವಿಶ್ವನಾಥ, 18ನೇ ವಯಸ್ಸಿನಲ್ಲಿಯೇ ಕಂಬಳದ ಗದ್ದೆಗಳಲ್ಲಿ ಕೋಣಗಳನ್ನು ಓಡಿಸಲಾರಂಭಿಸಿದರು. ಈಗ 30ಕ್ಕೂ ಹೆಚ್ಚು ಪದಕಗಳನ್ನು ಕೋಣಗಳ ಮಾಲಿಕರಿಗೆ ಗೆದ್ದು ಕೊಟ್ಟಿದ್ದಾರೆ.
ಕಂಬಳ: ಕಳೆದ ವರ್ಷದ ತಮ್ಮದೇ ದಾಖಲೆ ಮುರಿದ ಶ್ರೀನಿವಾಸ ಗೌಡ ...
ಸೀನಿಯರ್ ವಿಭಾಗದಲ್ಲಿ ಸಿಕ್ಕಿದ ಮೊದಲ ಅವಕಾಶದಲ್ಲೇ ಬೋಳಗುತ್ತು ಸತೀಶ್ ಶೆಟ್ಟಿಮಾಲಿಕರಾಗಿರುವ ಧೋಣಿ-ಬೊಳ್ಳ ಎಂಬ ಚಾಂಪಿಯನ್ ಕೋಣಗಳನ್ನು ಓಡಿಸಿ ದಾಖಲೆ ಬರೆದಿದ್ದಾರೆ. ಈ ಖುಷಿಯಲ್ಲಿರುವ ವಿಶ್ವನಾಥ, ಅಷ್ಟೇ ನಮ್ರತೆಯಿಂದ ಅದರ ಪೂರ್ಣ ಶ್ರೇಯಸ್ಸನ್ನು ಆ ಕೋಣಗಳಿಗೆ ನೀಡುತ್ತಾರೆ.
ಮುಂದೇನು ಎಂದು ಕೇಳಿದರೆ, ‘ವಾಮಂಜೂರು, ಮೂಡುಬಿದಿರೆಯಲ್ಲಿ ಕಂಬಳ ಉಂಟು ಸಾರ್, ಮತ್ತೆ... ಹೊಟ್ಟೆಪಾಡಿಗೆ ಕೂಲಿ ಕೆಲಸ ಉಂಟು ಸಾರ್’ ಎನ್ನುತ್ತಾರೆ.
ಶ್ರೀನಿವಾಸ ಗೌಡ ಒಳ್ಳೆಯ ಗೆಳೆಯ
ಕಳೆದ ಬಾರಿಯ ಕಂಬಳದ ಸೀಸನ್‌ನಲ್ಲಿ 9.55 ಸೆಕೆಂಡುಗಳ ದಾಖಲೆ ಮಾಡಿದ ಶ್ರೀನಿವಾಸ ಗೌಡ, 9.51 ಸೆಕೆಂಡಗಳ ದಾಖಲೆ ಮಾಡಿದ ನಿಶಾಂತ್ ಶೆಟ್ಟಿಇಬ್ಬರೂ ವಿಶ್ವನಾಥ ಬೈಂದೂರು ಅವರ ಕಂಬಳದ ಗದ್ದೆಯ ಪ್ರತಿಸ್ಪರ್ಧಿಗಳಾಗಿದ್ದರೂ, ಹೊರಗೆ ಜೀವದ ಗೆಳೆಯರು. ದಾಖಲೆಗಳನ್ನು ಮಾಡಿದಾಗ ಪರಸ್ಪರ ಅಭಿನಂದಿಸಿ ಸಂತಸಪಟ್ಟುಕೊಳ್ಳುತ್ತಾರೆ.
ಒಳ್ಳೆ ವ್ಯಾಯಾಮ ಆಗ್ತದೆ...
ಕಂಬಳಕ್ಕಾಗಿ ವಿಶೇಷ ತಯಾರಿ ಅಂತೇನೂ ಮಾಡುವುದಿಲ್ಲ. ಪ್ರತಿನಿತ್ಯ ಕೂಲಿ ಮಾಡುತ್ತಿರುವುದರಿಂದ ಅದರಿಂದಲೇ ಸಾಕಷ್ಟುವ್ಯಾಯಾಮ ಸಿಗುತ್ತದೆ. ಹಳ್ಳಿಯಲ್ಲಿ ಗದ್ದೆಯಲ್ಲಿ ಉಳುವುದು, ಮಣ್ಣು ಅಗೆಯುವುದು, ಹೊರುವುದು, ಕಡಿಯುವುದು ಮರ ಹೀಗೆ ಯಾವ ಕೆಲಸ ಸಿಕ್ಕಿದರೂ ಮಾಡುತ್ತೇನೆ.
- ವಿಶ್ವನಾಥ ದೇವಾಡಿಗ, ಕಂಬಳ ಓಟಗಾರ