ಮೂಲ್ಕಿ (ಫೆ.08) : ಕಂಬಳದ ಉಸೇನ್‌ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಅವರು ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ಭಾನುವಾರ ತಮ್ಮ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. 

ಆದರೆ ಶನಿವಾರ ಇದೇ ಕಂಬಳದಲ್ಲಿ ಯುವ ಓಟಗಾರ ವಿಶ್ವನಾಥ ದೇವಾಡಿಗ ಬೈಂದೂರು ಅವರ ನಿರ್ಮಿಸಿದ ಅತೀವೇಗದ ದಾಖಲೆ(9.15 ಸೆ.)ಯನ್ನು ಮುರಿಯುವುದಕ್ಕೆ ಸಾಧ್ಯವಾಗಲಿಲ್ಲ. 

ಕಳೆದ ವರ್ಷ ಶ್ರೀನಿವಾಸ ಗೌಡರು ಇದೇ ಐಕಳದಲ್ಲಿ 142.50 ಮೀಟರ್‌ ದೂರವನ್ನು 13.62 ಸೆಕೆಂಡ್‌ಗಳಲ್ಲಿ (100 ಮೀಟರಿಗಿಳಿಸಿದರೆ 9.55 ಸೆಕೆಂಡ್‌) ಓಡಿ ದಾಖಲೆ ನಿರ್ಮಿಸಿದ್ದರಿಂದ, ಈ ಬಾರಿಯೂ ಅವರ ಮೇಲೆ ಬೆಟ್ಟದಟ್ಟು ನಿರೀಕ್ಷೆ ಇತ್ತು. 

ಕಂಬಳ ಓಟದಲ್ಲಿ ಬಿದ್ದ 'ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡ

ಅದರಂತೆ ಈ ಬಾರಿ ನೇಗಿಲು ಹಿರಿಯ ವಿಭಾಗದ ಸೆಮಿಫೈನಲ್‌ 125 ಮೀ. ದೂರವನ್ನು ಕೇವಲ 11.64 ಸೆಕೆಂಡ್‌ (100 ಮೀಟರಿಗಿಳಿಸಿದರೆ 9.31 ಸೆಕೆಂಡ್‌)ಗಳಲ್ಲಿ ಕೋಣಗಳನ್ನು ಗುರಿಮುಟ್ಟಿಸಿ, ತನ್ನ ದಾಖಲೆಯನ್ನು ಸುಧಾರಿಸಿದರು.