ಇರಾನ್-ಇಸ್ರೇಲ್ ಯುದ್ಧ ಸಂಘರ್ಷದಿಂದಾಗಿ ಕಲಬುರಗಿಯ ಆಳಂದ ಪಟ್ಟಣದಲ್ಲಿ ತೀವ್ರ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದೆ. ಸಿಲಿಂಡರ್‌ಗಾಗಿ ಜನರು ರಾತ್ರಿಯಿಡೀ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದು, ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲಬುರಗಿ (ಮಾ.29): ಇರಾನ್, ಇಸ್ರೇಲ್ ಅಮೆರಿಕ ನಡುವಿನ ಯುದ್ಧಸಂಘರ್ಷ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಭಾರತಕ್ಕೂ ಇದರ ಪರಿಣಾಮ ತೀವ್ರವಾಗಿ ತಟ್ಟಿದ್ದು ಎಲ್‌ಪಿಜಿ ಗ್ಯಾಸ್ ಗ್ಯಾಸ್ ಕೊರತೆಯಿಂದಾಗಿ ಜನರು ಬೀದಿಗೆ ಬರುವಂತಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಜನ ಸಾಮಾನ್ಯರ ಬದುಕು ಬರ್ಬದ್ ಆಗಿದೆ. ಮನೆಯಲ್ಲಿ ಅಡುಗೆ ಮಾಡೋಣವೆಂದರೆ ಸಿಲಿಂಡರ್ ಖಾಲಿ, ಸೌದೆಯೂ ಸಿಗುತ್ತಿಲ್ಲ, ಸೌದೆಗಾಗಿ ಪ್ರತ್ಯೇಕ ಒಲೆಯೂ ಇಲ್ಲದೆ ಜನರ ಪರದಾಟ ಹೇಳತೀರದಾಗಿದೆ. ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಭಾರಿ ವ್ಯತ್ಯಯದಿಂದಾಗಿ ಪಟ್ಟಣದಲ್ಲಿ ಕುಡಿಯುವ ನೀರಿನಂತೆ ಗ್ಯಾಸ್‌ಗಾಗಿ ಅಕ್ಷರಶಃ ಹಾಹಾಕಾರ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳ್ಳಂಬೆಳಗ್ಗೆ ಅಲ್ಲ, ರಾತ್ರಿಯಿಂದಲೇ ರಸ್ತೆಯ ಮೇಲೆ ಸಿಲಿಂಡರ್ ಸಾಲು!

ಆಳಂದ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಈಗ ಸಿಲಿಂಡರ್ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಜನ ಬೆಳ್ಳಂಬೆಳಗ್ಗೆ ಎದ್ದು ಬಂದರೂ ಗ್ಯಾಸ್ ಸಿಗುವುದು ಗ್ಯಾರಂಟಿ ಇಲ್ಲ ಎಂದು ರಾತ್ರಿಯೇ ರಸ್ತೆ ಮೇಲೆ ಸರತಿ ಸಾಲಿಗೆ ಗ್ಯಾಸ್ ಸಿಲಿಂಡರ್ ಇಟ್ಟು ಅದರ ಪಕ್ಕದಲ್ಲೇ ಹಾಸಿಗೆ ಹಾಸಿ ಮಲಗಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಸಿಲಿಂಡರ್ ಸಿಗದೇ ಹೋದರೆ ಒಲೆ ಉರಿಯಲ್ಲ ಎಂಬ ಆತಂಕದಲ್ಲಿ ಜನರು ನಡುರಸ್ತೆಯಲ್ಲೇ ನಿದ್ದೆಗೆಟ್ಟು ಪಾಳಿ ಹಚ್ಚಿರುವ ದೃಶ್ಯ ಮನಕಲಕುವಂತಿದೆ.

ಸಿಲಿಂಡರ್ ಬದಲು ಬಕೆಟ್, ಕೊಡಗಳನ್ನಿಟ್ಟ ಮಹಿಳೆಯರು

ಸಿಲಿಂಡರ್ ಲಾರಿ ಬರುವ ಸುಳಿವು ಸಿಗುತ್ತಿದ್ದಂತೆಯೇ ಮಹಿಳೆಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಒಬ್ಬೊಬ್ಬರು ತಮ್ಮ ಸರದಿ ತಪ್ಪಬಾರದೆಂದು ಸಿಲಿಂಡರ್ ಜೊತೆಗೆ ನೀರು ತುಂಬುವ ಕೊಡಗಳು ಮತ್ತು ಬಕೇಟ್‌ಗಳನ್ನು ಇಟ್ಟು ಸಾಲನ್ನು ಕಾಯ್ದಿರಿಸುತ್ತಿದ್ದಾರೆ. ಪಟ್ಟಣದ ಸುಲ್ತಾನ್‌ಪುರ ಏರಿಯಾ, ಏಕಾಂತರಾಮಯ್ಯ ಮಂದಿರ ಹಾಗೂ ಮಹಾದೇವ ಮಂದಿರದ ಬಳಿ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲು ಕಂಡುಬರುತ್ತಿದೆ.

ಸಾಮಾನ್ಯರ ಪರದಾಟಕ್ಕೆ ಮುಕ್ತಿ ಯಾವಾಗ?

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಯುದ್ಧದ ಬೆಳವಣಿಗೆಗಳು ಅನಿಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ. ಪೂರೈಕೆಯಲ್ಲಿ ಉಂಟಾಗಿರುವ ಈ ವ್ಯತ್ಯಯದಿಂದಾಗಿ ಆಳಂದದ ಜನ ಹೈರಾಣಾಗಿದ್ದಾರೆ. ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಪಟ್ಟಣದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ದಟ್ಟವಾಗಿದೆ.