Asianet Suvarna News Asianet Suvarna News

ಐಎಎಸ್‌ ಜೋಡಿಗೆ ಮ್ಯಾರೇಜ್ ಗಿಫ್ಟ್‌ ಕೊಟ್ಟ ಸರ್ಕಾರ!

ಕಾಫಿ ನಾಡಿಗೆ ಐಎಎಸ್ ಜೋಡಿ/ ‘ಮ್ಯಾರೇಜ್ ಗಿಫ್ಟ್’ ಕೊಟ್ಟ ಸರ್ಕಾರ!/  ನೆರೆ ಜಿಲ್ಲೆಗೆ ಡಾ.ಬಗಾದಿ ಗೌತಮ್, ಎಸ್.ಅಶ್ವತಿ ದಂಪತಿ ವರ್ಗಾವಣೆ/ ಮದುವೆಯಾದ ವಾರಕ್ಕೆ ದಾವಣಗೆರೆಯಿಂದ ಚಿಕ್ಕಮಗಳೂರು/ ಮದುವೆ ಖುಷಿಯ ಜೊತೆಗೆ ಲೋಕಸಭೆ ಚುನಾವಣೆ ಕಾರ್ಯಕ್ಕೂ ಸಿದ್ಧ

Married IAS couple Transferred to coffee land Chikmagaluru
Author
Bengaluru, First Published Feb 22, 2019, 10:18 PM IST

ನಾಗರಾಜ ಎಸ್.ಬಡದಾಳ್
ದಾವಣಗೆರೆ [ಫೆ.22] ಪ್ರೇಮಿಗಳ ದಿನಾಚರಣೆಯಂದೇ ದಾಂಪತ್ಯಕ್ಕೆ ಜೀವನಕ್ಕೆ ಅಡಿ ಇಟ್ಟ ಉತ್ಸಾಹಿ, ಜನಾನುರಾಗಿ ಐಎಎಸ್ ನವ ಜೋಡಿಯಾದ ಎಸ್.ಅಶ್ವತಿ, ಡಾ.ಬಗಾದಿ ಗೌತಮ್‌ರ
ನ್ನು ‘ನವ ದಂಪತಿಗಳ ಸ್ವರ್ಗ’ವೆಂದೇ ಕರೆಯಲ್ಪಡುವ ಮಲೆನಾಡಿನ ನೆಲೆ, ಪ್ರಕೃತಿ ಸೌಂದರ್ಯದ ಗಣಿಯಾದ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಿದ್ದು ಮೈತ್ರಿ ಸರ್ಕಾರವು ಮದುವೆ ಉಡುಗೊರೆ ನೀಡಿದೆ. 

ಸಾಮಾನ್ಯವಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ಪರಸ್ಪರರನ್ನು ವರಿಸುವುದು ಸಹಜ. ಅದೇ ರೀತಿ ದಾವಣಗೆರೆ ಜಿಪಂ ಸಿಇಓ ಆಗಿ ಕಳೆದ 2 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಅಶ್ವತಿ ಸೆಲುರಾಜು ಹಾಗೂ ಕಳೆದ 4 ತಿಂಗಳಿನಿಂದಲೂ ಜಿಲ್ಲಾಧಿಕಾರಿಯಾಗಿದ್ದ ಡಾ.ಬಗಾದಿ ಗೌತಮ್ ಪ್ರೇಮಿಗಳ ದಿನವಾದ ಕಳೆದ ದಿ.14ರಂದಷ್ಟೇ ಕೇರಳದ ಕಲ್ಲಿಕೋಟೆಯ ಕೋಚಿಕೋಡ್‌ನ ಟ್ಯಾಗೂರ್ ಹಾಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದರು. 

ದಾವಣಗೆರೆ: ಐಎಎಸ್‌ ಜೋಡಿಯ ಪ್ರೇಮ್ ಕಹಾನಿ

ಸಿಇಓ ಅಶ್ವತಿ ಸ್ವಚ್ಛ ಭಾರತ ಮಿಷನ್‌ನಡಿ ಮನೆಗೊಂದು ಶೌಚಾಲಯ, ಶೌಚಾಲಯ ಕಟ್ಟಿಕೊಂಡ ಕುಟುಂಬದ ಗರ್ಭಿಣಿಯರಿಗೆ ಸೀಮಂತ, ಶೌಚಾಲಯ ಕಟ್ಟಿಕೊಳ್ಳ ಲು ಹಿಂದೇಟು ಹಾಕಿದವರ ಮನೆ ಮುಂದೆ ತಾವೇ ಸಲಾಕೆ ಹಿಡಿದು ಗುಂಡಿ ತೋಡುವ ಮೂಲಕ ಅರಿವು ಮೂಡಿಸಿದ್ದು, ಉದ್ಯೋಗ ಖಾತರಿ ಮೂಲಕ ಜಗಳೂರು, ಹರಪನಹಳ್ಳಿ ತಾಲೂಕಿನ ಕೂಲಿ ಕಾರ್ಮಿಕರು ಗುಳೇ ಹೋಗುವುದನ್ನು ತಡೆಯುವ ಮೂಲಕ ಮನೆ ಮಾತಾಗಿದ್ದರು. 

ಜಿಲ್ಲಾಧಿಕಾರಿಯಾಗಿ ಕೇವಲ 4 ತಿಂಗಳಷ್ಟೇ ಇಲ್ಲಿದ್ದ ಡಾ.ಬಗಾದಿ ಗೌತಮ್ ದಕ್ಷ, ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಯಿಂದ ಜನ ಸಾಮಾನ್ಯರು, ಜನ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗೆ ಪ್ರೀತಿ ಪಾತ್ರರಾಗಿದ್ದರು. ಆದರೆ, ಅಶ್ವತಿ-ಡಾ.ಗೌತಮ್ 4 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಇಲ್ಲಿಗೆ ಬಂದು 4  ತಿಂಗಳಾದರೂ ಯಾರಿಗೂ ಇಬ್ಬರ ಪ್ರೀತಿ ವಿಚಾರ ಗೊತ್ತಿರಲಿಲ್ಲ. ಆದರೆ, ಕಳೆದ ಫೆ.1ರಂದಷ್ಟೇ ಇಬ್ಬರೂ ಮದುವೆ ಅಧಿಕಾರಿಗಳನ್ನು ಆಹ್ವಾನಿಸಿದಾಗಲೇ ಬಗಾದಿ-ಅಶ್ವತಿ ಪ್ರೇಮ ಪ್ರಕರಣ ಗೊತ್ತಾಗಿತ್ತು. 

ಕೇರಳದ ಕಲ್ಲಿಕೋಟೆಯಲ್ಲಿ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಡಾ.ಬಗಾದಿ ಗೌತಮ್-ಎಸ್.ಅಶ್ವತಿ ಅವರ ವಿವಾಹ ಆರತಕ್ಷತೆ ಆಂಧ್ರದ ವಿಶಾಖಪಟ್ಟಣಂನಲ್ಲಿ ವರನ ಸ್ವಗೃಹದಲ್ಲಿ ನಡೆದಿತ್ತು. ನವ ಜೋಡಿಗಳಿಗೆ ಹಾರೈಸಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ, ಜಗಳೂರು ಶಾಸಕ ಎಸ್. ವಿ.ರಾಮಚಂದ್ರ ಇತರರು ಅಲ್ಲಿಗೆ ತೆರಳಿದ್ದರು. ಫೆಬ್ರುವರಿ ಅಂತ್ಯದಲ್ಲಿ ಮದುವೆಯಾಗಬೇಕಿದ್ದ ಜೋಡಿ ಲೋಕಸಭೆ ಚುನಾವಣೆ ಸಮೀಪಿಸುವ ಹಿನ್ನೆಲೆಯಲ್ಲಿ ಫೆ.14
ಕ್ಕೆ ಮದುವೆಯಾಗಿತ್ತು. 

ದಕ್ಷ, ಪ್ರಾಮಾಣಿಕ, ಜನಾನುರಾಗಿ ವ್ಯಕ್ತಿತ್ವದ ಇಬ್ಬರೂ ಐಎಎಸ್ ಅಧಿಕಾರಿ ಜೋಡಿಗೆ ಒಂದೇ ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಓ ಆಗಿ ವರ್ಗಾವಣೆ ಮಾಡುವ ಮೂಲ ಕ ಸ್ವತಃ ರಾಜ್ಯ ಸರ್ಕಾರವೇ ನವ ಜೋಡಿಗೆ ಕೇಳದಿದ್ದರೂ ಒಂದೇ ಕಡೆ ವರ್ಗಾವಣೆ ಮಾಡುವ ಮೂಲಕ ಭರ್ಜರಿಯಾಗಿಯೇ ಮ್ಯಾರೇಜ್ ಗಿಫ್ಟ್ ನೀಡಿದೆ. ಆದರೆ, ಇಬ್ಬರೂ ತಮ್ಮ ವರ್ಗಾವಣೆಗೆ, ಇಂತಹದ್ದೇ ಜಿಲ್ಲೆಗೆ ವರ್ಗ ಮಾಡುವಂತೆ, ಇಬ್ಬರನ್ನೂ ಒಂದೇ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಕೇಳಿರಲಿಲ್ಲ. ಆದರೆ, ಮೈತ್ರಿ ಸರ್ಕಾರವು ನವ ಜೋಡಿಗೆ ಒಂದೇ ಕಡೆ ವರ್ಗಾಯಿಸುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದೆ. 

ಲೋಕಸಭೆ ಚುನಾವಣೆ ಸವಾಲು: ಇನ್ನು ಕೆಲವೇ ದಿನ ಕಳೆದರೇ ಲೋಕಸಭೆ ಚುನಾವಣೆ ಎದುರಾಗಲಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಓ ಆದವರು ಚುನಾವಣೆಯತ್ತ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ರಜೆ ಹಾಕುವುದಕ್ಕೂ ಹಿಂದೇಟು ಹಾಕುವ ಎಸ್.ಅಶ್ವತಿ, ಡಾ.ಬಗಾದಿ ಗೌತಮ್ ಚುನಾವಣೆ ಕರ್ತವ್ಯಕ್ಕೂ ತೊಂದರೆಯಾಗದಂತೆ ಸರ್ಕಾ
ರವೇ ನವ ಜೋಡಿಗೆ ಒಂದೇ ಕಡೆ ವರ್ಗಾವಣೆ ಮಾಡಿರುವುದು ಗಮನಾರ್ಹ. ಆಂಧ್ರ ಮೂಲದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೇರಳ ಮೂಲದ ಸಿಇಓ ಎಸ್.ಅಶ್ವತಿ ಪ್ರೇಮಾಂಕುರವಾಗಿದ್ದು ಬೆಂಗಳೂರಿನಲ್ಲಿ. ಅದು ಚಿಗುರೊಡೆದು, ದಾಂಪತ್ಯ ಜೀವನಕ್ಕೆ ಅಡಿ ಇಡಲು ಕಾರಣವಾಗಿದ್ದು ದಾವಣಗೆರೆ. ಇದೀಗ ನವ ಜೋಡಿ ಹೊಸ ಜೀವನಕ್ಕೆ ಮುನ್ನುಡಿ ಬರೆಯುವುದು ಚಿಕ್ಕಮಗಳೂರಿನಲ್ಲಿ ಎಂಬುದು ವಿಶೇಷ. 

ನವ ಐಎಎಸ್ ಜೋಡಿಯನ್ನು ಬೇರ್ಪಡಿಸದೇ ಒಂದೇ ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಸಿಇಓ ಆಗಿ ನೇಮಿಸುವ ಮೂಲಕ ಸರ್ಕಾರ ಮ್ಯಾರೇಜ್ ಗಿಫ್ಟ್ ನೀಡಿದೆ. ಇನ್ನು ಮದುವೆ ಸಂಭ್ರಮದಲ್ಲಿದ್ದ ನವ ಜೋಡಿ ಒಂದೇ ಜಿಲ್ಲೆಯ ಡಿಸಿ-ಸಿಇಓ ಆಗಿ ವರ್ಗಾವಣೆಯಾಗಿರುವುದು ಉಭಯ ಕುಟುಂಬಕ್ಕೂ ಖುಷಿ ತಂದಿದೆ. ಇನ್ನೇನು ಇಬ್ಬರೂ  ಅಧಿಕಾರಿಗಳು ಇನ್ನು 2-3 ದಿನದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ದಾವಣಗೆರೆಯಲ್ಲಿ ನೂತನ ಡಿಸಿ-ಸಿಇಓಗೆ ಅಧಿಕಾರ ಹಸ್ತಾಂತರಿಸಿ, ಚಿಕ್ಕಮಗಳೂರು ಡಿಸಿ-ಸಿಇಓ ಆಗಿ ಡಾ.ಬಗಾದಿ ಗೌತಮ, ಎಸ್.ಅಶ್ವತಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಚುನಾವಣೆ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲೂ ವೈರಲ್ 
ದಾವಣಗೆರೆ ಜಿಪಂ ಸಿಇಓ ಎಸ್.ಅಶ್ವತಿ ಕಳೆದ 2 ವರ್ಷದಲ್ಲಿ ಇಲ್ಲಿ ಕಾರ್ಯ ನಿರ್ವಹಿಸಿದಷ್ಟು ದಿನವೂ ತಾರಾ ಮೆರಗು ಪಡೆದವರು. ಜನ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ, ಜನ ಸಾಮಾನ್ಯರು, ಗ್ರಾಮೀಣರೊಂದಿಗೆ ಉತ್ತಮ ಒಡನಾಟ ಹೊಂದಿದವರು. ಸಾಕಷ್ಟು ಜನಪ್ರಿಯತೆ ಪಡೆದಿದ್ದ ಅಶ್ವತಿ ಅವದಿಯಲ್ಲಿ ಶೌಚಾಲಯ ನಿರ್ಮಾಣ ಕ್ರಾಂತಿಯಿಂದಾಗಿ ಎಲ್ಲೆಡೆ ಮನೆ ಮಾತಾದವರು. ಕುಂಬಳೂರಿನ ರೈತ ಆಂಜನೇಯ ಸ್ವತಃ ತನ್ನ ಬತ್ತದ ಗದ್ದೆಯಲ್ಲಿ ಸ್ವಚ್ಛ ಭಾರತ ಮಿಷನ್ ಚಿಹ್ನೆಯನ್ನು ವಿವಿಧ ತಳಿಯ ಬತ್ತ ಬೆಳೆದು, ಸಿಇಓ ಅಶ್ವತಿ ಕಾರ್ಯ ಮತ್ತಷ್ಟು ಪ್ರಚುರ ಪಡೆಯುವಂತೆ ಮಾಡಿದ್ದರು. ಇದು ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲೂ ಪ್ರಶಂಸೆಗೆ ಕಾರಣವಾಗಿತ್ತು. ಅದೇ ರೀತಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ 4 ತಿಂಗಳಷ್ಟೇ ಇಲ್ಲಿ ಕೆಲಸ ಮಾಡಿದರೂ ಜನಾನುರಾಗಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಈ ಇಬ್ಬರೂ ನವ ಜೋಡಿಗಳ ವರ್ಗಾವಣೆ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. 

ಸೋನಿಯಾ ನಾರಂಗ್ ನಂತರ ಅಶ್ವತಿ ಫೇಮಸ್!
ದಾವಣಗೆರೆ ಜಿಲ್ಲೆಯಲ್ಲಿ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಂಜಾಬ್ ಮೂಲದ ಸೋನಿಯಾ ನಾರಂಗ್ ನಂತರ ಇಷ್ಟೊಂದು ಜನಪ್ರಿಯತೆ ಪಡೆದ ಮಹಿಳಾ ಅಧಿಕಾರಿಯೆಂದರೆ ಅದು ಜಿಪಂ ಸಿಇಓ ಎಸ್.ಅಶ್ವತಿ ಮಾತ್ರ. ಕೇರಳ ಮೂಲದ ಅಶ್ವತಿ ತಮ್ಮ ಜನಾನುರಾಗಿ ವ್ಯಕ್ತಿತ್ವ, ಜನಪರ ಕಾಳಜಿ, ಅಭಿವೃದ್ಧಿ ಪರ ಚಿಂತನೆಯಿಂದಲೇ ಜನರ ಪ್ರಶಂಸೆಗೆ ಪಾತ್ರರಾದವರು. 

Follow Us:
Download App:
  • android
  • ios