ಮಂಗಳೂರು(ಫೆ.08): ಕೊರೋನಾ ವೈರಸ್‌ ಭೀತಿಯಿಂದ ಚೀನಾದ ಹಾಂಗ್‌ಕಾಂಗ್‌ ಪ್ರವಾಸಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಂಪಲದ ಯುವಕನ ಸೋಮವಾರ ನಿಶ್ಚಯಗೊಂಡ ಮದುವೆ ರದ್ದುಗೊಂಡಿದೆ.

"

ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ

ಉಳ್ಳಾಲದ ಕುಂಪಲ ನಿವಾಸಿ ದಿ.ಮಾಧವ ಬಂಗೇರ ಹಾಗೂ ಶಾರದಾ ದಂಪತಿ ಪುತ್ರ ಗೌರವ್‌ ಎಂಬುವರ ವಿವಾಹ ಫೆ.10ರಂದು ಮಂಗಳೂರಿನ ಬೆಂದೂರ್‌ವೆಲ್‌ ಸೇಂಟ್‌ ಸೆಬಾಸ್ಟಿಯನ್‌ ಪ್ಲಾಟಿನಂ ಜುಬಿಲಿ ಆಡಿಟೋರಿಯಂನಲ್ಲಿ ನಡೆಯಬೇಕಿತ್ತು. ಚೀನಾದ ಹಾಂಗ್‌ಕಾಂಗ್‌ನ ಸ್ಟಾರ್‌ ಕ್ರೂಜ್‌ ಪ್ರವಾಸಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೌರವ್‌, ಮೂರು ದಿನಗಳಿಂದ ಹಾಂಗ್‌ಕಾಂಗ್‌ನ ಹಡಗಿನಲ್ಲಿಯೇ ಉಳಿದುಕೊಂಡಿರುವುದರಿಂದ ಮದುವೆ ಸಮಯಕ್ಕೆ ತಲುಪಲು ಅಸಾಧ್ಯವಾಗಿದೆ. ಫೆ.6ರಂದು ಗೌರವ್‌ ಊರಿಗೆ ತಲುಪಬೇಕಿತ್ತು.

ಕೊರೋನಾ: ಭಾರತದ 2ನೇ ಕೇಸ್‌ ಪತ್ತೆ!

ಜ.16ಕ್ಕೆ 1,600 ಪ್ರಯಾಣಿಕರಿದ್ದ ಪ್ರವಾಸಿ ಹಡಗು, ಚೀನಾದ ಹಾಂಗ್‌ಕಾಂಗ್‌ನಿಂದ ಹೊರಟಿತ್ತು. 20 ದಿನ ಮಲೇಷಿಯಾ, ಸಿಂಗಾಪುರ ಸಹಿತ ವಿವಿಧ ದೇಶಗಳಿಗೆ ತಿರುಗಿ ಫೆ.4ರಂದು ಮತ್ತೆ ಹಾಂಗ್‌ಕಾಂಗ್‌ ತಲುಪಿತ್ತು. ಆದರೆ ಕೊರೊನಾ ವೈರಸ್‌ ಭೀತಿಯಿಂದಾಗಿ ಅಲ್ಲಿನ ಭದ್ರತಾ ಪಡೆ ಪ್ರಯಾಣಿಕರನ್ನು ಹಡಗಿನಲ್ಲಿಯೇ ಮೂರು ದಿನಗಳಿಂದ ಉಳಿಸಿಕೊಂಡಿದ್ದಾರೆ.

ಕರಾವಳಿಗೆ ಕೊರೋನಾ ಭೀತಿ, ಉಡುಪಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆ

ಈ ಹಿಂದೆ ಕೊರೊನಾ ವೈರಸ್‌ ಚೀನಾ ವ್ಯಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿ ಹಡಗನ್ನು ತೈವಾನ್‌ನಲ್ಲಿ ತುರ್ತಾಗಿ ಇಳಿಸುವಂತೆ ಸೂಚಿಸಲಾಯಿತಾದರೂ, ಬಳಿಕ ಅಲ್ಲಿನ ಆಡಳಿತ ನಿರ್ಬಂಧಿಸಿತ್ತು. ಈಗ ಹಡಗಿನಿಂದ ಪ್ರಯಾಣಿಕರು ಇಳಿಯದಂತೆ ಮಾಡಿರುವುದರಿಂದ ಮನೆ ಮಂದಿ ಆತಂಕಿತರಾಗಿದ್ದಾರೆ. ಹಡಗಿನಲ್ಲಿರುವವರು ಹಾಗೂ ತಾವು ಸುರಕ್ಷಿತರಾಗಿರುವುದಾಗಿ ಗೌರವ್‌ ಮನೆ ಮಂದಿಗೆ ತಿಳಿಸಿದ್ದಾರೆ.