ಮಂಗಳೂರು(ಫೆ.05): ದೇಶದ 13 ಬೃಹತ್‌ ಬಂದರುಗಳಲ್ಲಿ ಒಂದಾಗಿರುವ, ರಾಜ್ಯದ ಅತಿದೊಡ್ಡ ಬಂದರು ಎನ್ನುವ ಹೆಗ್ಗಳಿಕೆಯ ನವ ಮಂಗಳೂರು ಬಂದರಿನಲ್ಲೂ ಇದೀಗ ಕೊರೋನಾ ಕಟ್ಟೆಚ್ಚರ ವಹಿಸಲಾಗಿದೆ.

ಕೊರೋನಾ ವೈರಸ್‌ ವಿಶ್ವವ್ಯಾಪಿ ತೀವ್ರ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಎನ್‌ಎಂಪಿಟಿಯಲ್ಲಿ ಸೋಂಕಿನ ಎಂಟ್ರಿ ಆಗದಂತೆ ನಿಗಾ ವಹಿಸಲಾಗಿದೆ. ಕೇಂದ್ರ ಬಂದರು ಸಚಿವಾಲಯವು ತನ್ನ ಅಧೀನದ ಎಲ್ಲ ಬಂದರುಗಳಿಗೆ ಕೊರೋನಾ ವೈರಸ್‌ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಕಾಲಕಾಲಕ್ಕೆ ಈ ಕುರಿತು ವರದಿ ಸಲ್ಲಿಸುವಂತೆಯೂ ಆದೇಶಿಸಿದೆ. ಅದರಂತೆ ಕಳೆದೊಂದು ವಾರದಿಂದ ಎನ್‌ಎಂಪಿಟಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

ಪ್ರತಿ ಪ್ರವಾಸಿಗೂ ಸ್ಕ್ರೀನಿಂಗ್‌:

ಎನ್‌ಎಂಪಿಟಿಗೆ ಪ್ರತಿವರ್ಷ ಸುಮಾರು 25- 40 ಸಾವಿರದಷ್ಟು ವಿದೇಶಿ ಪ್ರವಾಸಿಗರು ಐಷಾರಾಮಿ ಹಡಗುಗಳಲ್ಲಿ ಆಗಮಿಸಿ ಕರಾವಳಿಯಲ್ಲಿ ವಿಹರಿಸುತ್ತಾರೆ. ಬಂದರು ಸಚಿವಾಲಯದ ಸೂಚನೆ ಬಳಿಕ ಮೊದಲ ಪ್ರವಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಬಂದಿಳಿದಿದ್ದು, 1800 ಪ್ರವಾಸಿಗರು ಹಾಗೂ 786 ಸಿಬ್ಬಂದಿ ಇದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಎಲ್ಲರಿಗೂ ಕೊರೋನಾ ಸೋಂಕು ತಡೆಗಟ್ಟುವ ಎನ್‌-95 ಮಾಸ್ಕ್‌ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಎಂಪಿಟಿ ಸಿಬ್ಬಂದಿಯೂ ಮುಖಕ್ಕೆ ಮಾಸ್ಕ್‌ ಧರಿಸಿದ್ದರು. ಈ ಕಾರ್ಯಕ್ಕಾಗಿಯೇ ಹೆಚ್ಚುವರಿ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 2 ಬೆಡ್‌ಗಳು, 2 ಆ್ಯಂಬುಲೆನ್ಸ್‌, ನಿಗಾ ಕೊಠಡಿಯನ್ನೂ ವ್ಯವಸ್ಥೆ ಮಾಡಲಾಗಿದೆ.

ಹೆಲ್ಪ್‌ಲೈನ್‌:

ಎನ್‌ಎಂಪಿಟಿಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೆಲ್ಪ್‌ಲೈನ್‌ ಸಂಖ್ಯೆಗಳನ್ನು ಎನ್‌ಎಂಪಿಟಿಯಲ್ಲಿ ಅಳವಡಿಸಲಾಗಿದೆ. ತಪಾಸಣೆ ವೇಳೆ ಯಾರಲ್ಲಾದರೂ ಕರೋನಾ ಸೋಂಕಿನ ಲಕ್ಷಣ ಕಂಡುಬಂದರೆ ಅಂಥವರನ್ನು ತಕ್ಷಣ ಇತರ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಪ್ರತ್ಯೇಕಗೊಳಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಎನ್‌ಎಂಪಿಟಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಇನ್ನೂ 11 ಹಡಗುಗಳ ನಿರೀಕ್ಷೆ:

ಈ ಪ್ರವಾಸಿ ಋುತುಮಾನದ ನವೆಂಬರ್‌ನಿಂದ ಇದುವರೆಗೆ ಒಟ್ಟು 12 ಪ್ರವಾಸಿ ಹಡಗುಗಳು 15 ಸಾವಿರಕ್ಕೂ ಹೆಚ್ಚು ವಿದೇಶಿಗರನ್ನು ಹೊತ್ತು ತಂದಿದ್ದವು. ಜನವರಿ ತಿಂಗಳಲ್ಲಿ 2 ಹಡಗುಗಳು ಬಂದಿವೆ. ಇನ್ನು ಮಾಚ್‌ರ್‍ವರೆಗೆ 11ಕ್ಕಿಂತಲೂ ಹೆಚ್ಚು ಹಡಗುಗಳು ಆಗಮಿಸುವ ನಿರೀಕ್ಷೆಯಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಲಿದ್ದಾರೆ. ಅವರೆಲ್ಲರ ತಪಾಸಣೆಗೆ ಎನ್‌ಎಂಪಿಟಿ ಸಿದ್ಧವಾಗಿದೆ.

ಕೊರೋನಾ ವೈರಸ್‌ನಿಂದ ಪಾರಾಗಲು ನಮ್ಮ ಬಳಿ ಇದೆ ಉಪಾಯ!

‘ಇದುವರೆಗೆ ಚೀನಾದಿಂದ ನೇರವಾಗಿ ಯಾವುದೇ ಪ್ರವಾಸಿ ಹಡಗು ಬಂದಿಲ್ಲ. ವಿದೇಶಗಳನ್ನು ಸುತ್ತುತ್ತಾ ಮಂಗಳೂರಿಗೆ ಬರುವುದರಿಂದ ಕರೋನಾ ಹರಡಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಪ್ರವಾಸಿ ಹಡಗುಗಳು ಮಾತ್ರವಲ್ಲದೆ, ಇತರ ಸರಕು ಹಡಗಿನಲ್ಲಿ ಬರುವವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ಎನ್‌ಎಂಪಿಟಿ ಅಧಿಕಾರಿ ತಿಳಿಸಿದ್ದಾರೆ.

2018ರ ನವೆಂಬರ್‌ನಿಂದ 2019ರ ಮಾಚ್‌ರ್‍ವರೆಗೆ ಒಟ್ಟು 26,532 ವಿದೇಶಿ ಪ್ರವಾಸಿಗರು ಮಂಗಳೂರಿಗೆ ಬಂದಿದ್ದರು. 2017-18ರಲ್ಲಿ 22 ಹಡಗುಗಳಲ್ಲಿ 24,258 ಪ್ರವಾಸಿಗರು ಬಂದಿದ್ದರೆ, 2016-17ರಲ್ಲಿ 30,246 ವಿದೇಶಿಗರು ಕರಾವಳಿಗೆ ಆಗಮಿಸಿದ್ದರು.

ಮೂವರು ಚೀನೀಯರು ಬಂದಿದ್ರು

ಮಂಗಳವಾರ ಎನ್‌ಎಂಪಿಟಿಗೆ ಬಂದ ವಿದೇಶಿ ಪ್ರವಾಸಿಗರಲ್ಲಿ ಮೂವರು ಚೀನೀಯರು ಇದ್ದರು. ಅವರನ್ನು ಹಡಗಿನಿಂದ ಇಳಿಯಲು ಅವಕಾಶ ನೀಡಿಲ್ಲ. ಹಡಗಿನ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ. ಈ ಹಡಗಿನಲ್ಲಿ ಡಿಸೆಂಬರ್‌ನಿಂದಲೇ ಈ ಪ್ರವಾಸಿಗರು ಜಗತ್ತು ಸುತ್ತುತ್ತಿದ್ದಾರೆ. ಕೊರೋನಾ ಸೋಂಕಿನ ಲಕ್ಷಣ ಅವರಲ್ಲಿ ಕಂಡುಬಾರದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಎಂಪಿಟಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

-ಸಂದೀಪ್‌ ವಾಗ್ಲೆ