ಮಂಗಳೂರು-ಬೆಂಗಳೂರು ರೈಲು ಹಳಿ ದ್ವಿಗುಣ ಅಗತ್ಯವಾಗಿದೆ. ಸಮೀಕ್ಷೆ ಮತ್ತು ಡಿಪಿಆರ್‌ ತಯಾರಿಕೆಗೆ ಈಗಾಗಲೇ ಅನುಮೋದನೆ ನೀಡಿದ್ದೇವೆ. ಸದ್ಯ ಡಿಪಿಆರ್‌ ತಯಾರಿ ಕೆಲಸ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಮಂಗಳೂರು: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಳಿ ದ್ವಿಗುಣ ಅಗತ್ಯವಾಗಿದೆ. ಸಮೀಕ್ಷೆ ಮತ್ತು ಡಿಪಿಆರ್ ತಯಾರಿಕೆಗೆ ಈಗಾಗಲೇ ಅನುಮೋದನೆ ನೀಡಿದ್ದೇವೆ. ಸದ್ಯ ಡಿಪಿಆರ್ ತಯಾರಿ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಅವರು ಗುರುವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಈ ಮಾರ್ಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಳಿ ದ್ವಿಗುಣ ಅತ್ಯಂತ ಸವಾಲಿನ ಕೆಲಸ. ಯೋಜನೆಯ ಮರುವಿನ್ಯಾದ ನಡೆಸಿ, ಸಮಸ್ಯೆಗಳು ಮರುಕಳುಹಿಸಿದಂತೆ ಯೋಜನೆ ರೂಪಿಸುತ್ತೇವೆ ಎಂದರು.

ಕೊಂಕಣ್ ರೈಲ್ವೆ ವಿಲೀನಕ್ಕೆ ಪ್ರಯತ್ನ:

ಕೊಂಕಣ್ ರೈಲ್ವೆ ವಿಲೀಣಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಸಂಬಂಧಿತ ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಅವರು ಒಪ್ಪಿಗೆ ನೀಡಿದರೆ ಮಾತ್ರ ಇದು ಸಾಧ್ಯವಾಗಲಿದೆ. ನಾಲ್ಕು ರಾಜ್ಯಗಳ ಸಿಎಂ ಜೊತೆ ಮನವಿ ಮಾಡಿದ್ದೇವೆ ಎಂದರು.

ಸಚಿವ ಎಂಬಿ ಪಾಟೀಲ್ ಅವರು ಕೇಂದ್ರ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವುದು ಸಂಪೂರ್ಣ ತಪ್ಪು. ನರೇಂದ್ರ ಮೋದಿ ಅಧಿಕಾರಿಕ್ಕೆ ಬಂದ ಬಳಿಕ ಕರ್ನಾಟಕಕ್ಕೆ ನ್ಯಾಯ ಸಿಗುತ್ತಿದೆ. ಕರ್ನಾಟಕದಲ್ಲಿ 75 ಸಾವಿರ ಕೋಟಿ ಮೌಲ್ಯದ ಯೋಜನೆಗಳು ನಡೆಯುತ್ತಿದೆ. ನಾವು ಕರ್ನಾಟಕಕ್ಕೆ ಬುಲೆಟ್ ರೈಲನ್ನು ತರುತ್ತಿದ್ದೇವೆ. ನಾವು ಕರ್ನಾಟಕಕ್ಕೆ ವಂದೇ ಭಾರತ್ ರೈಲನ್ನು ತಂದಿದ್ದೇವೆ. ಅನೇಕ ರೈಲು ನಿಲ್ದಾಣಗಳು ಅಭಿವೃದ್ಧಿ ಪಡಿಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಪಾಟೀಲ್ ಅವರು ತಿಳಿಸಲಿ ಎಂದರು.

ವಂದೇ ಭಾರತ್ ಕರಾವಳಿಗೆ ಕೊಡುಗೆ:

ಕರ್ನಾಟಕದ ಎರಡು ಪ್ರಮುಖ ಕೇಂದ್ರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚರಿಸಲಿದೆ. ಕರಾವಳಿ ಕರ್ನಾಟಕವನ್ನು ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುತ್ತದೆ. ನಾವು ಈ ಯೋಜನೆ ಆರಂಭಿಸಿದಾಗ ಅನೇಕ ಸವಾಲುಗಳಿದ್ದವು. ಘಾಟ್ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಯಿತು. ಎಲ್ಲವನ್ನೂ ಪೂರ್ಣಗೊಳಿಸಿ ಶುಕ್ರವಾರ ವಂದೇ ಭಾರತ್ ಸೇವೆ ಆರಂಭಿಸಲಿದೆ ಎಂದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು.

ಹಲವು ರೈಲ್ವೆ ಅಭಿವೃದ್ದಿಗೆ ಚಾಲನೆ

ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಗಳ ಸಚಿವ ಸಚಿವ ಅಶ್ವಿನಿ ವೈಷ್ಣವ್‌ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿರುವ ಮೊತ್ತ ಮೊದಲ ವಂದೇ ಭಾರತ್‌ ಹೈಸ್ಪೀಡ್‌ ರೈಲು ಸೇವೆಗೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದರ ಜತೆಗೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರವಾಸ ಕೈಗೊಂಡು ಇಲ್ಲಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ಕೂಡ ನಡೆಸಲಿದ್ದಾರೆ.

ಅಶ್ವಿನಿ ವೈಷ್ಣವ್ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆದ.ಕ. ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮೂರು ಮಹತ್ವದ ರೈಲ್ವೆ ಯೋಜನೆಗಳು ಲೋಕಾರ್ಪಣೆಗೊಳ್ಳಲಿವೆ. ಈ ಸಂದರ್ಭ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಈ ರೈಲು ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಮಹತ್ವದ ಮೈಲುಗಲ್ಲಾಗಿದ್ದು, ಪ್ರವಾಸೋದ್ಯಮ, ವಾಣಿಜ್ಯ ಮತ್ತು ದೈನಂದಿನ ಪ್ರಯಾಣಿಕರಿಗೆ ಹೊಸ ವೇಗ ನೀಡಲಿವೆ.