ಮಂಗಳೂರು(ಜ.25): ದಶಕಗಳ ಕಾಲ ಕುಂಟುತ್ತಾ ಸಾಗಿದ ಮಂಗಳೂರಿನ ಬಹುನಿರೀಕ್ಷಿತ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಕೊನೆಗೂ ಜನವರಿ ಅಂತ್ಯದೊಳಗೆ ಮುಕ್ತಾಯಗೊಳ್ಳುವುದು ಖಚಿತವಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಅಂತಿಮ ಹಂತದ ಎಚ್ಚರಿಕೆ ನೀಡಿದ ಫಲವಾಗಿ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಯನ್ನು ಜನವರಿ ಆರಂಭದಿಂದಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಮುಕ್ತಾಯದ ರೇಖೆ ಹಾಕಿಕೊಂಡಿತ್ತು.

ಇದರಿಂದಾಗಿ ಗುತ್ತಿಗೆ ಸಂಸ್ಥೆ ನವಯುಗ ಕಂಪನಿ ಕಾಮಗಾರಿಯನ್ನು ಅಂತಿಮಘಟ್ಟಕ್ಕೆ ತಲುಪಿಸಿದೆ. ಈಗ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇಲ್ಸೇತುವೆ ಸಂಪರ್ಕಿಸುವ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಇಲಾಖೆ ಹಿರಿಯ ಅಧಿಕಾರಿಗಳ ಪ್ರಕಾರ ಜನವರಿ 28 ಅಥವಾ 29ರಂದು ಈ ಸೇತುವೆ ಪ್ರಯಾಣಿಕರ ವಾಹನಗಳ ಓಡಾಟಕ್ಕೆ ತೆರೆದುಕೊಳ್ಳಲಿದೆ.

ಪಂಪ್‌ವೆಲ್‌ ಫ್ಲೈಓವರ್‌ ವಿರುದ್ಧ ‘ಒಂಭತ್ತು ಕೆರೆ’ ಅಸ್ತ್ರ ಪ್ರಯೋಗ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಉಭಯ ಕಡೆಗಳಿಂದಲೂ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸುವ ಕುರಿತು ಸಂಸದರಿಗೆ ಹಾಗೂ ಜಿಲ್ಲಾಡಳಿತಕ್ಕೆ ಭರವಸೆ ನೀಡಿದ್ದರು.

ಕಳೆದ ಡಿಸೆಂಬರ್‌ 31ರಂದು ಸಂಸದ ನಳಿನ್‌ಕುಮಾರ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಯವರಿಗೆ ನೀಡಿರುವುದು ಫಲ ನೀಡಿದೆ.

ಕಾಮಗಾರಿಯೇ ಮುಗಿಯದ ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ..?

ಎನ್‌ಎಚ್‌ಎಐ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಮಂಗಳೂರು ತಹಸೀಲ್ದಾರರು ಇರುವ ನಾಲ್ಕು ಮಂದಿಯ ಸಮಿತಿ ಕಾಮಗಾರಿಯ ದೈನಂದಿನ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಸದಸ್ಯರ ಜೊತೆ ಜಿಲ್ಲಾಧಿಕಾರಿಗಳು ಪ್ರತಿದಿನ ಸಭೆ ನಡೆಸುತ್ತಾರೆ. ಸಭೆಯ ಬಳಿಕ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ಅಗತ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ:

ನವಯುಗ ಸಂಸ್ಥೆಗೆ ಕಾಮಗಾರಿಗೆ ಹೆಚ್ಚುವರಿಯಾಗಿ 15 ಕೋಟಿ ರು. ಮೊತ್ತವನ್ನು ಕೇಂದ್ರ ಹೆದ್ದಾರಿ ಇಲಾಖೆ ಬ್ಯಾಂಕ್‌ನಿಂದ ಸಾಲವಾಗಿ ತೆಗೆಸಿಕೊಟ್ಟಿತ್ತು. ಆದರೂ ಕಾಮಗಾರಿ ನಿರೀಕ್ಷಿತ ರೀತಿಯಲ್ಲಿ ವೇಗ ಪಡೆದುಕೊಂಡಿರಲಿಲ್ಲ. ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿ ಸರ್ಕಾರದ ಕೋಟ್ಯಂತರ ರು. ವ್ಯಯಿಸಿ ಮೋಸ ಮಾಡಲಾಗಿದೆ. ಸಾರ್ವಜನಿಕರ ದಿಕ್ಕು ತಪ್ಪಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಮತ್ತು ನವಯುಗ ಸಂಸ್ಥೆಯ ನಿರ್ದೇಶಕರ ವಿರುದ್ಧ ನಾಗರಿಕರೊಬ್ಬರ ದೂರಿನಂತೆ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಈ ಬಾರಿ ಡೆಡ್‌ಲೈನ್‌ನೊಳಗೆ ಕಾಮಗಾರಿ ಮುಗಿಯದಿದ್ದರೆ ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿಕೊಂಡಿತ್ತು.

ರಾತ್ರಿ ವೇಳೆ ಅನಧಿಕೃತ ಸಂಚಾರ!

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಪೂರ್ಣ ಕಾಮಗಾರಿ ಮುಗಿಯುವ ಮೊದಲೇ ಗುರುವಾರ ರಾತ್ರಿ ವೇಳೆ ಈ ಮೇಲ್ಸೇತುವೆಯಲ್ಲಿ ವಾಹನಗಳು ಸಂಚರಿಸಿವೆ ಎಂದು ಹೇಳಲಾಗಿದೆ. ಪ್ರಸ್ತುತ ಸಂಪರ್ಕ ರಸ್ತೆಗೆ ಡಾಂಬರೀಕರಣ ನಡೆಯುತ್ತಿದೆ. ತಡೆಗೋಡೆಗಳಿಗೆ ಬಣ್ಣ ಬಳಿಯುವ ಕೆಲಸವೂ ಸಾಗಿದೆ. ಈ ಮಧ್ಯೆ ರಾತ್ರಿ ವೇಳೆಗೆ ಅಡೆತಡೆಯನ್ನು ಬೇಧಿಸಿ ಕೆಲವು ವಾಹನಗಳು ಅಪೂರ್ಣಗೊಂಡ ಹೊಸ ಮೇಲ್ಸೇತುವೆಯಲ್ಲಿ ಸಂಚರಿಸಿವೆ ಎಂದು ದೂರಲಾಗಿದೆ.