ಕರಾವಳಿಯಲ್ಲಿ ಮಳೆ ಇಳಿಮುಖ; ಮೀನುಗಾರಿಕಾ ರಸ್ತೆ ನೀರುಪಾಲು
ಮಂಗಳೂರಿನಲ್ಲಿ ಭೀಕರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಸಂಕಷ್ಟಕ್ಕೊಳಗಾದರು. ಮೀನಕ್ಕಳಿಯಲ್ಲಿ ಮೀನುಗಾರಿಕೆ ರಸ್ತೆ ಮಹಾಮಳೆಗೆ ಕೊಚ್ಚಿಹೋಗಿದೆ. ಗುರುವಾರದಿಂದ ಮಳೆ ಸ್ವಲ್ಪ ತಗ್ಗಿರುವುದು ಜನರು ನಿಟ್ಟುಸಿರುಬಿಡುವಂತಾಗಿದೆ.
ಮಂಗಳೂರು,(ಜು.15) ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಗುರುವಾರದಿಂದ ಮಳೆ ಇಳಿಮುಖವಾಗಿದೆ. ಆದರೆ ಸಮುದ್ರದ ಅಲೆ ಅಪ್ಪಳಿಸಿ ಸುರತ್ಕಲ್ ತೀರ ಪ್ರದೇಶದ ಮೀನಕಳಿಯಲ್ಲಿ ಮೀನುಗಾರಿಕಾ ರಸ್ತೆ ಮಳೆಗೆ ಹಾನಿಯಾಗಿದ್ದು ವಾಹನಗಳು ಓಡಾಡದಷ್ಟು ರಸ್ತೆ ಕೊಚ್ಚಿಹೋಗಿ ಸಮುದ್ರ ಪಾಲಾಗಿದೆ.
ದ.ಕ.ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ವೇಳೆಗೆ ಮಳೆ ಕಾಣಿಸಿದೆ. ಅಲ್ಲಿವರೆಗೆ ಮೋಡ, ಬಿಸಿಲಿನ ವಾತಾವರಣ ಇತ್ತು. ಹಗಲು ಹೊತ್ತು ಗ್ರಾಮೀಣ ಭಾಗದಲ್ಲಿ ಸಾಧಾರಣ ಮಳೆ (Rain) ಬಂದಿದೆ. ಹವಾಮಾನ ಇಲಾಖೆ (IMD) ಪ್ರಕಾರ ಕರಾವಳಿಯಲ್ಲಿ ಗುರುವಾರ ಆರೆಂಜ್ ಅಲರ್ಚ್ (Orange alert) ಭಾರಿ ಮಳೆ (Heavy rainfall) ಬರಬೇಕಿತ್ತು. ಆದರೆ ಅಪರಾಹ್ನ ತುಂತುರು ಮಳೆ, ಸಂಜೆ ಮತ್ತೆ ಬಿಸಿಲು ಮುಂದುವರಿದಿದೆ. ಜು.15ರಂದು ಕೂಡ ಕರಾವಳಿಯಲ್ಲಿ ಆರೆಂಜ್ ಅಲರ್ಚ್ ಘೋಷಿಸಲಾಗಿದೆ.
ಇದನ್ನೂ ಓದಿ: ಅಸಹಾಯಕ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್: ಇಂದು ಗೃಹಪ್ರವೇಶ
ಈ ಭಾಗದಲ್ಲಿ ಮಳೆ ಕಡಿಮೆಯಾಗಿದ್ದರೂ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಕಾರಣ ಜೀವ ನದಿಗಳು ತುಂಬಿ ತುಳುಕುತ್ತಿವೆ. ನೇತ್ರಾವತಿ, ಕುಮಾರಾಧಾರ, ಫಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿವೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿ ನೀರಿನ ಮಟ್ಟಏರಿಕೆ ಕಂಡಿದ್ದು ಸದ್ಯ 28.60 ಮೀಟರ್ ಇದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 6.8 ಮೀಟರ್‌ನಲ್ಲಿ ಹರಿಯುತ್ತಿದೆ.
ಬೆಳ್ತಂಗಡಿ ಗರಿಷ್ಠ ಮಳೆ:
ಗುರುವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 103.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಂಟ್ವಾಳ 65.3 ಮಿ.ಮೀ, ಮಂಗಳೂರು 57.0 ಮಿ.ಮೀ, ಪುತ್ತೂರು 63.2 ಮಿ.ಮೀ, ಸುಳ್ಯ 62.7 ಮಿ.ಮೀ, ಮೂಡುಬಿದಿರೆ 91.3 ಮಿ.ಮೀ, ಕಡಬ 92.4 ಮಿ.ಮೀ. ಮಳೆಯಾಗಿದೆ. ದಿನದ ಸರಾಸರಿ ಮಳೆ 80 ಮಿ.ಮೀ. ಮಳೆ ವರದಿಯಾಗಿದೆ.
ಇದನ್ನೂ ಓದಿ: ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!
ಕಾಂಕ್ರಿಟ್ ರಸ್ತೆ ಮತ್ತೆ ಸಮುದ್ರ ಪಾಲು:
ಉಳ್ಳಾಲ, ಸೋಮೇಶ್ವರ, ಬಟ್ಟಪಾಡಿ, ಬೈಕಂಪಾಡಿ, ಸಸಿಹಿತ್ಲು ಸೇರಿದಂತೆ ಕಡ ತೀರದಲ್ಲಿ ಕಡಲಬ್ಬರ ತುಸು ಜೋರಾಗಿಯೇ ಇದೆ. ಬೈಕಂಪಾಡಿಯ ಮೀನಕಳಿಯದಲ್ಲಿ ಕಡಲ ಭೋರ್ಗರೆತಕ್ಕೆ ಕಾಂಕ್ರಿಟ್ ರಸ್ತೆ ಮತ್ತೆ ಸಮುದ್ರ ಪಾಲಾಗಿದೆ. ಇಲ್ಲಿ ಎರಡು ದಿನಗಳ ಹಿಂದೆಯಷ್ಟೆಇದೇ ಕಾಂಕ್ರಿಟ್ ರಸ್ತೆಯ ಒಂದು ಭಾಗ ಸಮುದ್ರ ಪಾಲಾಗಿತ್ತು. ಈಗ ಮತ್ತಷ್ಟುಭಾಗ ನೀರು ಪಾಲಾಗಿದೆ. ಇದರಿಂದ ಪಣಂಬೂರು-ಸಸಿಹಿತ್ಲು ನಡುವಿನ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಅಲ್ಲದೆ ಎರಡು ಮನೆಗಳು ಕೂಡ ಕಡಲ ತೀರದಲ್ಲಿ ಧಾರಾಶಾಹಿಯಾಗಿದೆ.
ಭಾರಿ ಗಾಳಿಗೆ ಕಾರುಗಳು ಜಖಂ:
ಗುರುವಾರ ಮಳೆ ಕಡಿಮೆಯಾಗಿದ್ದರೂ ಮಂಗಳೂರು ನಗರದಲ್ಲಿ ಮಧ್ಯಾಹ್ನ ಏಕಾಏಕಿಯಾಗಿ ಕಾಣಿಸಿಕೊಂಡ ಭಾರಿ ಗಾಳಿಯಿಂದಾಗಿ ಹಲವೆಡೆ ಹಾನಿ ಉಂಟಾಗಿದೆ. ನಗರದ ಕೆ.ಎಸ್.ರಾವ್ ರಸ್ತೆಯ ಗಣೇಶ್ ಮಹಲ್ ಬಳಿ ಭಾರಿ ಗಾಳಿಯಿಂದಾಗಿ ತಗಡು ಶೀಟ್‌ಗಳು ಹಾರಿ ಪಾರ್ಕ್ ಮಾಡಲಾಗಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಆರು ಕಾರುಗಳಿಗೆ ಹಾನಿ ಉಂಟಾಗಿದೆ. ಸ್ಥಳದಲ್ಲಿದ್ದ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಾರನ್ನು ನಿಲ್ಲಿಸಿ ಮಧ್ಯಾಹ್ನ ಸ್ಥಳೀಯ ಹೊಟೇಲ್‌ಗೆ ತೆರಳಿದ್ದಾಗ ಈ ಘಟನೆ ನಡೆದಿದೆ.