ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!
* ಕರಾವಳಿಯಲ್ಲಿ ಇನ್ನು ಎರಡು ದಿನ ಆರೆಂಜ್ ಅಲರ್ಟ್, ಭಾರಿ ಮಳೆ ನಿರೀಕ್ಷೆ
* ರಸ್ತೆ ಕೊಚ್ಚಿಕೊಂಡು ಹೋದ ಬೆನ್ನಲ್ಲೇ ಹತ್ತಾರು ಮನೆಗಳಿಗೆ ಅಪಾಯ
* ಸುಳ್ಯದಲ್ಲಿ ಗರಿಷ್ಠ ಮಳೆ
ಮಂಗಳೂರು(ಜು.13): ಮಂಗಳೂರಿನಲ್ಲಿ ಮಳೆ ಇಳಿಮುಖವಾಗಿ ಬಿಸಿಲು ಆಗಮಿಸಿದರೂ ಸಮುದ್ರದ ಅಬ್ಬರ ಕಡಿಮೆಯಾಗಿಲ್ಲ. ಮಂಗಳೂರು ಹೊರವಲಯದ ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ ಅಬ್ಬರಕ್ಕೆ ಕಾಂಕ್ರಿಟ್ ರಸ್ತೆಯೇ ಸಮುದ್ರ ಪಾಲಾಗಿದೆ. ಭಾರಿ ಗಾತ್ರದ ಅಲೆಗಳು ರಸ್ತೆಯನ್ನೇ ಕೊಚ್ಚಿಕೊಂಡು ಹೋಗಿವೆ. ರಸ್ತೆ ಕೊಚ್ಚಿಕೊಂಡು ಹೋದ ಬೆನ್ನಲ್ಲೇ ಹತ್ತಾರು ಮನೆಗಳಿಗೆ ಅಪಾಯ ಉಂಟಾಗಿದ್ದು, ಅಲೆಗಳು ಬಡಿದು ಸಮುದ್ರ ಪಾಲಾಗುವ ಆತಂಕದಲ್ಲಿ ಮನೆಗಳು ಇವೆ. ಮನೆ ಮಂದಿ ಹೊರಗೆ ನಿಂತು ಆತಂಕದಿಂದ ನೋಡುತ್ತಿದ್ದಾರೆ. ಪ್ರತಿ ಗಂಟೆಯೂ ಅಲೆಗಳ ಹೊಡೆತಕ್ಕೆ ಸಿಲುಕಿ ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿದೆ.
ಸಮುದ್ರ ತೀರದಲ್ಲಿ ವಾಸವಿರುವ 300ಕ್ಕೂ ಅಧಿಕ ಉತ್ತರ ಕರ್ನಾಟಕ ಕಾರ್ಮಿಕರ ಕುಟುಂಬಗಳು ಸಮುದ್ರ ಅಲೆಗಳ ಅಪ್ಪಳಿಸುವಿಕೆಯಿಂದ ಸಂಕಷ್ಟಕ್ಕೆ ಒಳಗಾಗಿವೆ. ಮನೆಯಲ್ಲಿನ ಸಾಮಾಗ್ರಿಗಳನ್ನು ಗಂಟು ಮೂಟೆ ಕಟ್ಟಿಕೊಂಡು ಅಕ್ಕಪಕ್ಕದ ಮನೆಗಳಿಗೆ ಕಾರ್ಮಿಕರು ತೆರಳಿದ್ದಾರೆ. ಇನ್ನೂ ಕೆಲವು ಮಂದಿ ಎಲ್ಲಿಗೆ ಹೋಗುವುದು ಎಂದು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತ ಮೀನಕಳಿಯದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಅಲ್ಲಿಗೆ ತೆರಳುವಂತೆ ಕಾರ್ಮಿಕರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
Karnataka Rain: ಮಳೆ ಅನಾಹುತಕ್ಕೆ ಮೂವರು ಬಲಿ
ಸಮುದ್ರ ಬದಿಯ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಸಮುದ್ರ ಅಲೆಗಳು ಬಡಿಯುತ್ತಿದ್ದು, ಇದರಿಂದಾಗಿ ಸುಮಾರು 10ಕ್ಕೂ ಅಧಿಕ ವಿದ್ಯುತ್ ಕಂಬಗಳು ಧಾರಾಶಾಹಿಯಾಗುವ ಅಪಾಯದಲ್ಲಿವೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
2 ದಿನ ಆರೆಂಜ್ ಅಲರ್ಟ್:
ಕರಾವಳಿಯಲ್ಲಿ ಕಳೆದ ಒಂದು ವಾರದ ಮಳೆಯ ಅಬ್ಬರ ಮಂಗಳವಾರಕ್ಕೆ ಇಳಿಮುಖವಾಗಿದೆ. ಆರೆಂಜ್ ಅಲರ್ಟ್ ಹೊರತೂ ದ.ಕ.ಜಿಲ್ಲೆಯಲ್ಲಿ ಹಗಲು ಹೊತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇದನ್ನು ಬಿಟ್ಟರೆ ಇಡೀ ದಿನ ಮೋಡ, ಬಿಸಿಲು ಕಂಡುಬಂದಿದೆ. ಸಂಜೆಯಾಗುತ್ತಿದ್ದಂತೆ ತುಸು ಮಳೆ ವಾತಾವರಣ ಉಂಟಾಗಿದೆ.
ಚಿಕ್ಕಮಗಳೂರು ನೆರೆ ಪ್ರದೇಶಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಪರಿಶೀಲನೆ
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜು.13 ಮತ್ತು 14ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದೆ. ಕರಾವಳಿಯಲ್ಲಿ ಸುಮಾರು 3.5 ಮೀಟರ್‌ನಿಂದ 4.0 ಮೀಟರ್ ಎತ್ತರದಲ್ಲಿ ಸಮುದ್ರದಲ್ಲಿ ಅಲೆ ಅಪ್ಪಳಿಸಲಿದ್ದು, ಪ್ರತಿ ಗಂಟೆಗೆ 40ರಿಂದ 50 ಕಿ.ಮೀ., ಕೆಲವೊಮ್ಮೆ 60 ಕಿ.ಮೀ. ವೇಗ ವರೆಗೂ ಕಡಲಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಹೇಳಲಾಗಿದೆ.
ಸುಳ್ಯ ಗರಿಷ್ಠ ಮಳೆ:
ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ 60.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 62 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿ 51.1 ಮಿ.ಮೀ, ಬಂಟ್ವಾಳ 23.1 ಮಿ.ಮೀ, ಮಂಗಳೂರು 14 ಮಿ.ಮೀ, ಪುತ್ತೂರು 41 ಮಿ.ಮೀ, ಸುಳ್ಯ 60.4 ಮಿ.ಮೀ, ಮೂಡುಬಿದಿರೆ 43.1 ಮಿ.ಮೀ. ಹಾಗೂ ಕಡಬ 58 ಮಿ.ಮೀ. ಮಳೆ ವರದಿಯಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.7 ಮೀಟರ್, ಬಂಟ್ವಾಳದಲ್ಲಿ ನೇತ್ರಾವತಿ ನದಿ 6.8 ಮೀಟರ್‌ನಲ್ಲಿ ಎತ್ತರದಲ್ಲಿ ಹರಿಯುತ್ತಿದೆ.