ಮಂಗಳೂರು (ಸೆ.01):  ಮಂಗಳೂರಿನಲ್ಲಿ ಕಳೆದ ವರ್ಷ ಡಿ.19ರಂದು ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಪೊಲೀಸ್‌ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟಪ್ರಕರಣದ ಕುರಿತ ಮ್ಯಾಜಿಸ್ಟೇರಿಯಲ್‌ ತನಿಖೆ ಮಂಗಳವಾರ ಅಂತ್ಯಗೊಂಡಿದೆ. ಸರ್ಕಾರಕ್ಕೆ ಈ ಕುರಿತ ತನಿಖಾ ವರದಿ ಸಲ್ಲಿಸಲು ಸೆ.20 ಅಂತಿಮ ದಿನವಾಗಿದ್ದು, ಅಷ್ಟರೊಳಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ.

ಮ್ಯಾಜಿಸ್ಪ್ರೇಟ್‌ ತನಿಖಾಧಿಕಾರಿಯಾಗಿರುವ ಉಡುಪಿಯ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಂಗಳವಾರ ನಗರದ ಎಸಿ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆಸಿದ್ದು, 45 ಜನಸಾಮಾನ್ಯರು, 13 ಪೊಲೀಸ್‌ ಸಿಬ್ಬಂದಿ, ಆಗಿನ ದ.ಕ. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಆಗಿನ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಅವರು ವಿಡಿಯೊ ಕಾನ್ಫರೆಸ್ಸ್‌ ಮೂಲಕ ಘಟನೆಯ ಬಗ್ಗೆ ತನ್ನ ಹೇಳಿಕೆಯನ್ನು ನೀಡಿದ್ದಾರೆ.

ಇದಲ್ಲದೆ, ಎಫ್‌ಎಸ್‌ಎಲ್‌ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದ ಮೂವರು ವೈದ್ಯರು ಸಹ ವಿಚಾರಣೆಯ ಭಾಗವಾಗಿ ಮ್ಯಾಜಿಸ್ಪ್ರೇಟ್‌ ಎದುರು ಹಾಜರಾದರು. ಪೊಲೀಸ್‌ ಸಿಬ್ಬಂದಿ ಮತ್ತು ಸಾರ್ವಜನಿಕರು ಘಟನೆಯ ದಾಖಲೆಗಳು, ವಿಡಿಯೋ ತುಣುಕುಗಳನ್ನು ಸಲ್ಲಿಸಿದ್ದಾರೆ. ಪೊಲೀಸ್‌ ಆಯುಕ್ತರ ಪರವಾಗಿ ಎಸಿಪಿ ಬೆಳ್ಳಿಯಪ್ಪ ಇನ್ನೂ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತನಿಖಾಧಿಕಾರಿ ಜಗದೀಶ್‌ ಸುದ್ದಿಗಾರರಿಗೆ ತಿಳಿಸಿದರು.

ಕೇರಳ ಉದ್ಧಟತನಕ್ಕೆ ಹೈಕೋರ್ಟ್‌ ಬ್ರೇಕ್; 4 ಗಡಿ ರಸ್ತೆಗಳನ್ನು ತೆರೆಯಲು ಆದೇಶ.

ಸೆ.20ರೊಳಗೆ ವರದಿ: ಪ್ರಕರಣದ ಕುರಿತ ತನಿಖಾ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಸೆಪ್ಟೆಂಬರ್‌ 20ರವರೆಗೆ ಒಂದು ತಿಂಗಳ ಸಮಯವನ್ನು ವಿಸ್ತರಿಸಿದೆ. ಸರ್ಕಾರ ನಿಗದಿಪಡಿಸಿದ ಕಾಲಾವಧಿಯಲ್ಲಿ ವರದಿಯನ್ನು ಸಲ್ಲಿಸಲು ನಾನು ಪ್ರಯತ್ನಿಸುತ್ತೇನೆ. ಅಧಿಕಾರಿಗಳು ಮತ್ತು ಜನರು ನೀಡಿದ ಎಲ್ಲ ದಾಖಲೆಗಳು, ಹೇಳಿಕೆಗಳು ಮತ್ತು ವಿಡಿಯೋ ತುಣುಕುಗಳನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಬೇಕಿದೆ ಎಂದರು. ಈ ಅಂತಿಮ ವಿಚಾರಣೆಯ ನಂತರ ಈ ಘಟನೆಯ ಕುರಿತು ಯಾವುದೇ ದಾಖಲೆಗಳು ಮತ್ತು ವಿಡಿಯೋ ತುಣುಕುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುವುದಿಲ್ಲ ಎಂದು ಜಗದೀಶ್‌ ಸ್ಪಷ್ಟಪಡಿಸಿದ್ದಾರೆ.

416 ಮಂದಿ ವಿಚಾರಣೆ

ಗೋಲಿಬಾರ್‌ಗೆ ಸಂಬಂಧಿಸಿದಂತೆ ಇದುವರೆಗೆ 416 ಮಂದಿ ವಿಚಾರಣೆಗೆ ಹಾಜರಾಗಿದ್ದು, ಸಾಕ್ಷ್ಯ ಸಂಗ್ರಹ ಮಾಡಲಾಗಿದೆ.

ಕಳೆದ ವರ್ಷ ಡಿ.19ರಂದು ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ಬಂದರು ಪ್ರದೇಶದಲ್ಲಿ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪ್ರತಿಭಟನೆಯ ಸಮಯದಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಿಂದ ನೌಶೀನ್‌ ಮತ್ತು ಜಲೀಲ್‌ ಎಂಬಿಬ್ಬರು ಸಾವಿಗೀಡಾಗಿದ್ದರು. ಇದಕ್ಕೆ ತೀವ್ರ ಆಕ್ಷೇಪ ಕೇಳಿಬಂದಾಗ ಸರ್ಕಾರವು ಮ್ಯಾಜಿಸ್ಟೇರಿಯಲ್‌ ವಿಚಾರಣೆಗೆ ಆದೇಶಿಸಿ ಅದರ ತನಿಖಾಧಿಕಾರಿಯನನಾಗಿ ಉಡುಪಿ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿತ್ತು.

ಗಡಿ ನಿರ್ಬಂಧ: ಕೇರಳ ಸರ್ಕಾರದ ವಿರುದ್ಧ ಟ್ವಿಟರ್ ವಾರ್..

ಮ್ಯಾಜಿಸ್ಟೇರಿಯಲ್‌ ತನಿಖೆಯ ಮೊದಲ ವಿಚಾರಣೆ ಜನವರಿ 7ರಂದು ನಡೆದಿದ್ದು, ನಂತರದ ದಿನಗಳಲ್ಲಿ ಹಲವು ಬಾರಿ ವಿಚಾರಣೆ ನಡೆದಿದೆ. ಈ ನಡುವೆ ಕೊರೋನಾ ಲಾಕ್‌ಡೌನ್‌ನಿಂದಾಗಿ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ತನಿಖಾ ವರದಿ ಸಲ್ಲಿಸಲು ಸರ್ಕಾರವೂ ಗಡುವನ್ನು ವಿಸ್ತರಿಸಿತ್ತು.