ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಐದು ಭಾಷೆಗಳಲ್ಲಿ ಹಾಡುತ್ತಾ ಕೇವಲ 35 ನಿಮಿಷಗಳಲ್ಲಿ ಬಕೆಟ್ ಟೊಪ್ಪಿ ತಯಾರಿಸಿದ ಮಂಗಳೂರಿನ ಮೆಲೋರಾ ರಿಶಾ ಡಿಸೋಜಾ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಯೂಟ್ಯೂಬ್‌ ಮೂಲಕ ಕ್ರೋಷೆ ಕಲಿತಿದ್ದ ಈ ಬಾಲಕಿ, ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾಳೆ.

ಮಂಗಳೂರು(ನ.28): ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಐದು ಭಾಷೆಗಳಲ್ಲಿ ಹಾಡು ಹೇಳುತ್ತಾ ಕೈಯಲ್ಲಿ ಕ್ರೋಷೆ ಹಿಡಿದು ಬಕೆಟ್ ಟೊಪ್ಪಿ ತಯಾರಿಸುವುದರೊಂದಿಗೆ ಬಾಲಕಿ ಮೆಲೋರಾ ರಿಶಾ ಡಿಸೋಜಾ(Melora Risha D'Souza) ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌(Golden Book of World Records)ಗೆ ಸೇರ್ಪಡೆ ಆಗಿದ್ದಾಳೆ. ನಗರದ ಸೇಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಮೆಲೋರಾ ರಿಶಾ ಡಿಸೋಜಾ ಗುರುವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲಿಷ್‌, ಕನ್ನಡ, ಹಿಂದಿ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಹಾಡು ಹಾಡುತ್ತಾ, ಸರಸರನೆ ಕ್ರೋಷೆ (ಪೋಣಿಸುವುದು) ಮಾಡಿ ಟೊಪ್ಪಿ ತಯಾರಿಸಿದಳು. ಈ ದಾಖಲೆಗೆ 40 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಬಾಲಕಿ 35 ನಿಮಿಷಗಳಲ್ಲೇ ಟೊಪ್ಪಿ ಸಿದ್ಧಪಡಿಸಿ, ಎಲ್ಲರ ಪ್ರಶಂಸೆಗೆ ಪಾತ್ರಳಾದಳು.

35 ನಿಮಿಷಗಳಲ್ಲೇ ಟೊಪ್ಪಿ ತಯಾರಿಸಿದ ಬಾಲಕಿ!

ನಿಗದಿತ ಸಮಯಕ್ಕಿಂತ ಐದು ನಿಮಿಷ ಪೂರ್ವದಲ್ಲೇ ಬಾಲಕಿ ಸಾಧನೆ ಮಾಡಿದ್ದಾಳೆ ಎಂದು ಘೋಷಿಸಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಶಿಯನ್ ವಿಭಾಗದ ಮುಖ್ಯಸ್ಥ ಮನೀಶ್ ವಿಶ್ನೋಯಿ ಆಕೆಗೆ ಪ್ರಮಾಣಪತ್ರ ಹಸ್ತಾಂತರಿಸಿದರು.

ಐದನೇ ತರಗತಿಯಲ್ಲೇ ಯುಟ್ಯೂಬ್ ನೋಡಿ ಕ್ರೋಷೆ ಕಲಿತಿದ್ದ ಬಾಲಕಿ

ಐದನೇ ತರಗತಿಯಲ್ಲಿದ್ದಾಗ ಯುಟ್ಯೂಬ್ ನೋಡಿ ಕ್ರೋಷೆ ಕಲಿತಿದ್ದೆ. ಹಲವರು ದಾಖಲೆ ನಿರ್ಮಿಸುತ್ತಿರುವುದನ್ನು ನೋಡಿ, ನನಗೂ ಇಂತಹುದೊಂದು ದಾಖಲೆ ಮಾಡುವ ಆಸೆಯಿತ್ತು ಎಂದು ಮೆಲೋರಾ ಹೇಳಿದಳು.

ಆಕೆಯ ತಂದೆ ಮೆಲ್ವಿನ್‌ ಮ್ಯಾಥ್ಯೂ ಡಿಸೋಜಾ, ತಾಯಿ ರೇಷ್ಮಾ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಕರ್ನಾಟಕ ಪ್ರಾಂತ್ಯದ ಸಹಾಯಕ ಪ್ರಾಂತಾಧಿಕಾರಿ ಸಿಸ್ಟರ್‌ ರೋಸ್‌ ಆಗ್ನೆಸ್‌, ಸೇಂಟ್ ಆಗ್ನೆಸ್‌ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ವಿನೋರಾ, ಆಗ್ನೆಸ್‌ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲೆ ಜೆನ್ನಿಫರ್‌ ಮೊರಾಸ್‌, ಕುಲಶೇಖರ ಕಾರ್ಡೆಲ್‌ ಚರ್ಚ್‌ನ ಧರ್ಮಗುರು ಫಾ. ಕ್ಲಿಫರ್ಡ್‌ ಫರ್ನಾಂಡಿಸ್‌, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿಸ್ ಪಿಂಟೊ, ಪಿಟಿಎ ಉಪಾಧ್ಯಕ್ಷ ಪ್ರದೀಪ್‌ ಮಿಸ್ಕಿತ್‌ ಭಾಗವಹಿಸಿದ್ದರು.