ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲೆಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅಕ್ರಮ ವಲಸೆ ಬಗ್ಗೆ ಚು. ಆಯೋಗಕ್ಕೆ ದೂರು
ಮಂಡ್ಯ (ಜು.22): ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಅಕ್ರಮವಾಗಿ ವಾಸವಾಗಿದ್ದಾರೆ. ಕೋಳಿ ಫಾರಂ, ಫೀಡ್ಸ್ ಕಾರ್ಖಾನೆ, ಕೈಗಾರಿಕಾ ಪ್ರದೇಶಗಳಲ್ಲಿ ಇವರು ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಅವರು ದೂರು ಸಲ್ಲಿಸಿದ್ದಾರೆ.
ಗಣಪತಿ ವಿಸರ್ಜನೆ ಗಲಾಟೆಗೆ ಬಾಂಗ್ಲಾ ಅಕ್ರಮ ವಲಸಿಗರೇ ಕಾರಣ?
ಬಾಂಗ್ಲಾದೇಶದ ವಲಸಿಗರು ನಾಗಮಂಗಲ ತಾಲೂಕಿನಲ್ಲಿ ನೆಲೆಸಿದ ನಂತರ ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮು ಘರ್ಷಣೆ ಹಾಗೂ ಮದ್ದೂರು ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆಗಳಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಈ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಪ್ರಸ್ತುತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈ ಸಮಯದಲ್ಲಿ ಬಾಂಗ್ಲಾದೇಶದ ವಲಸಿಗರ ಮೂಲ ದಾಖಲೆಗಳನ್ನು (ಜನನ ಪ್ರಮಾಣಪತ್ರ, ಶಾಲೆಗೆ ಸೇರಿದ ಮೂಲ ದಾಖಲಾತಿ), ಉತ್ತರ ಭಾರತದ ಹಲವಾರು ರಾಜ್ಯಗಳ ವಾಸಿಗಳೆಂದು ಬಂದಿರುವುದಕ್ಕೆ ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ತುರ್ತು ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.
ಅಕ್ರಮ ದಾಖಲೆಗಳ ಕುರಿತಂತೆ ಪರಿಶೀಲನೆ ನಡೆಸಿ ಬಾಂಗ್ಲಾ ವಲಸಿಗರೆಂದು ಕಂಡು ಬಂದರೆ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಏಜೆಂಟರು, ಕಾರ್ಖಾನೆ, ಕೂಲಿ ಕಾರ್ಮಿಕರಾಗಿ ನೇಮಿಸಿಕೊಂಡಿರುವ ಕೋಳಿ ಫಾರಂ, ಕೈಗಾರಿಕೆ ಘಟಕಗಳ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕರಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಯಗಟಿ ಗೇಟ್ ಬಳಿಯ ಒಂದು ಕೋಳಿ ಫಾರಂ ಘಟಕ ಹಾಗೂ ಹುಳ್ಳೇನಹಳ್ಳಿ ಗೇಟ್ ಬಳಿಯ ಎಸ್.ಎಂ.ಸ್ಟಾರ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್‌ನ ಒಂದು ಘಟಕ, ದೇವಲಾಪುರ ಗ್ರಾಮಕ್ಕೆ ಹೋಗುವ ರಸ್ತೆ ಬಳಿ ತಟ್ಟಹಳ್ಳಿ ಗ್ರಾಮ-ಎಚ್.ಎನ್.ಕಾವಲ್ ನಡುವೆ ಸ್ಟಾರ್ ಕಂಪನಿಯ ಕೋಳಿ ಫಾರಂ ಘಟಕ, ಮಂಡ್ಯ-ನಾಗಮಂಗಲ ರಸ್ತೆಯಿಂದ ಗದ್ದೆಭೂವನಹಳ್ಳಿ ರಸ್ತೆಯಲ್ಲಿ ಹತ್ತಾರು ಕೋಳಿ ಫಾರಂ ಹಾಗೂ ಕೈಗಾರಿಕಾ ಘಟಕಗಳಿದ್ದು, ಅವುಗಳ ಪೈಕಿ ಕೆಲವು ಘಟಕಗಳಿಗೆ ನಾಮಫಲಕವಿಲ್ಲ. ಇಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಪೈಕಿ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಇವರ ಮೂಲ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾಗಮಂಗಲ-ಮೈಸೂರು ರಸ್ತೆಯ ಎ.ಶ್ರೀರಾಮನಹಳ್ಳಿಯ ಬಳಿ 17 ಎಕರೆ ವ್ಯಾಪ್ತಿಯಲ್ಲಿ ಕೋಳಿಫಾರಂ ಘಟಕಗಳಿವೆ. ಇವೆಲ್ಲವೂ 600 ರಿಂದ 700 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿವೆ. ಇಲ್ಲಿರುವ ಫೀಡ್ಸ್, ಕೋಳಿ ಫಾರಂ ಹಾಗೂ ಇತರ ಘಟಕಗಳಲ್ಲಿ ಬಾಂಗ್ಲಾ ದೇಶದ ವಲಸಿಗರು ಉತ್ತರ ಭಾರತದ ಹಲವು ರಾಜ್ಯಗಳ ವಾಸಿಗಳಂತೆ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಏಜೆಂಟರ ಮೂಲಕ ಅಕ್ರಮವಾಗಿ ಸೃಷ್ಟಿಸಿಕೊಂಡು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಸ್ಟಾರ್ ಗ್ರೂಪ್ ಎಂಬ ಕಂಪನಿಯ ಮಾಲೀಕರು ಸಕಲೇಶಪುರ, ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳೂರು ಪೆಟ್ರೋಲಿಯಂ ಲಿಮಿಟೆಡ್‌ನ ಇಂಧನ ಪೂರೈಸುವ ಪೈಪ್‌ಲೈನ್‌ನಿಂದ ಇಂಧನ ಕದಿಯುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಕ್ರಿಮಿನಲ್ ಪ್ರಕರಣ ಕೂಡ ದಾಖಲಾಗಿತ್ತು. ಅದರ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಅವರು ತಿಳಿಸಿದ್ದಾರೆ.


