ರಾಜ್ಯದಲ್ಲಿನ ತೀವ್ರ ಮಳೆ ಕೊರತೆಯಿಂದಾಗಿ ಗ್ರಾಮೀಣ ಭಾಗದ ನೀರಿನ ಮೂಲವಾದ ಕೆರೆಗಳು ಒಣಗುತ್ತಿವೆ. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ನಿರ್ವಹಣೆಯ 36 ಸಾವಿರ ಕೆರೆಗಳ ಪೈಕಿ 5862 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಗಿರೀಶ್‌ ಗರಗ

ಬೆಂಗಳೂರು (ಜು.22): ರಾಜ್ಯದಲ್ಲಿನ ತೀವ್ರ ಮಳೆ ಕೊರತೆಯ ಕಾರಣದಿಂದಾಗಿ ಜಲಾಶಯಗಳು ಮಾತ್ರವಲ್ಲದೆ ಗ್ರಾಮೀಣ ಭಾಗದ ನೀರಿನ ಮೂಲವಾದ ಕೆರೆಗಳೂ ಒಣಗುತ್ತಿವೆ. ರಾಜ್ಯದ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ನಿರ್ವಹಣೆಯ 36 ಸಾವಿರ ಕೆರೆಗಳ ಪೈಕಿ 5862 ಕೆರೆಗಳಲ್ಲಿ ಒಂದೇ ಒಂದು ಹನಿ ನೀರಿಲ್ಲ. ಅಲ್ಲದೆ, ಮಳೆ ಕೊರತೆಯಿಂದ ಈಗಾಗಲೇ 539 ಗ್ರಾಮ ಪಂಚಾಯಿತಿ ಮತ್ತು 17 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಸೂಪರ್‌ ಎಲ್‌ನಿನೋ ಪರಿಣಾಮ ಈ ವರ್ಷ ಮುಂಗಾರಿನ ತೀವ್ರ ಕೊರತೆ ಇದೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ.37ರಷ್ಟು ಕಡಿಮೆ ಮಳೆ ಸುರಿದಿದೆ. ಇದರ ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. ಜತೆಗೆ ಕೃಷಿಗೆ ನೀರಿನ ಪೂರೈಕೆ ಇನ್ನೂ ಆರಂಭಿಸಿಲ್ಲ. ಇದರಿಂದ ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಹೊಡೆತ ಬೀಳುವಂತಾಗಿದೆ.

ಇದರ ನಡುವೆಯೇ ಜಲಾಶಯಗಳನ್ನು ಹೊರತುಪಡಿಸಿ ಕೃಷಿ ಚಟುವಟಿಕೆಗೆ ದೊಡ್ಡ ಆಧಾರವಾಗಿದ್ದ ಕೆರೆಗಳಲ್ಲೂ ನೀರಿನ ಭಾರೀ ಕೊರತೆ ಸೃಷ್ಟಿಯಾಗಿದೆ. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗುತ್ತಿದ್ದರೂ ಬಹುತೇಕ ಕೆರೆಗಳು ಪೂರ್ತಿ ಭರ್ತಿಯಾಗಿಲ್ಲ. ಸರ್ಕಾರದ ಮಾಹಿತಿಯಂತೆಯೇ ರಾಜ್ಯದಲ್ಲಿನ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ನಿರ್ವಹಣೆಯ 36 ಸಾವಿರ ಕೆರೆಗಳಲ್ಲಿ ಕೇವಲ 584 ಕೆರೆಗಳು ಮಾತ್ರ ಶೇ. 100ರಷ್ಟು ಭರ್ತಿಯಾಗಿವೆ.

ಮಳೆ ಕೊರತೆ ಒಣಗಿದ 5862 ಕೆರೆಗಳು:

ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಬಹುತೇಕ ಎಲ್ಲ ಕೆರೆಗಳಲ್ಲೂ ಕನಿಷ್ಠ ಶೇ. 30ರಷ್ಟಾದರೂ ನೀರಿರುತ್ತಿತ್ತು. ಆದರೆ, ಜುಲೈ 18ರ ಮಾಹಿತಿಯಂತೆ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ನಿರ್ವಹಣೆಯ 36202 ಕೆರೆಗಳ ಪೈಕಿ 5862 ಕೆರೆಗಳಲ್ಲಿ ಒಂದು ಹನಿಯೂ ನೀರಿಲ್ಲದೆ, ಖಾಲಿಯಾಗಿವೆ. ಉಳಿದಂತೆ 13627 ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆ ನೀರು ಸಂಗ್ರಹವಿದೆ. 11170 ಕೆರೆಗಳಲ್ಲಿ ಶೇ. 31ರಿಂದ 50ರಷ್ಟು, 4959 ಕೆರೆಗಳಲ್ಲಿ ಶೇ. 51ರಿಂದ 99ರಷ್ಟು ನೀರು ತುಂಬಿದೆ. ಉಳಿದಂತೆ 584 ಕೆರೆಗಳು ಮಾತ್ರ ಪೂರ್ತಿ ತುಂಬಿವೆ. ಮಳೆ ಹೀಗೆ ಮುಂದುವರಿದರೆ ನೀರಿಲ್ಲದೆ ಒಣಗುವ ಕೆರೆಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

539 ಗ್ರಾಪಂಗಳಲ್ಲಿ ಕುಡಿವ ನೀರಿನ ಸಮಸ್ಯೆ:

ಮಳೆಯಿಲ್ಲದ ಕಾರಣ ರಾಜ್ಯದ 122 ತಾಲೂಕುಗಳ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಕಾಣಿಸಿಕೊಂಡಿದೆ. ಅದರಲ್ಲೂ ರಾಜ್ಯದ 5958 ಗ್ರಾಮ ಪಂಚಾಯಿತಿಗಳ ಪೈಕಿ 539 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಲ್ಲದೆ, 112 ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ಹಾಗೂ 622 ಹಳ್ಳಿಗಳಿಗೆ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಒಟ್ಟು 734 ಹಳ್ಳಿಗಳಿಗೆ ನೀರು ಪೂರೈಕೆ ಆರಂಭಿಸಲಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ನೀರಿನ ಸಮಸ್ಯೆ ಎದುರಿಸುವ ಹಳ್ಳಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಗ್ರಾಮೀಣ ಭಾಗ ಹೊರತುಪಡಿಸಿ ನಗರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ವ್ಯಾಪ್ತಿಯ 17 ನಗರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸಿದೆ. ಒಟ್ಟು 87 ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 24 ವಾರ್ಡ್‌ಗಳಿಗೆ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ.

----5 ಜಿಲ್ಲೆಗಳಲ್ಲಷ್ಟೇ ವಾಡಿಕೆ ಮಳೆ:

ಕಳೆದ ಜೂ. 1ರಿಂದ ಜು. 18ರವರೆಗಿನ ಮಾಹಿತಿಯಂತೆ ರಾಜ್ಯದ 31 ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಂತೆ ಮಳೆ ಸುರಿದಿದೆ. ಉಳಿದಂತೆ 25 ಜಿಲ್ಲೆಗಳಲ್ಲಿ ಸಾಧಾರಣ ಕೊರತೆ ಮತ್ತು 1 ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ವಾಡಿಕೆಗಿಂತ ಶೇ. 37ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ.

ಎಲ್ಲೆಲ್ಲಿ ಎಷ್ಟಿದೆ ಜಲಸಂಗ್ರಹ?

- ರಾಜ್ಯದಲ್ಲಿ ಇವೆ ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ನಿರ್ವಹಣೆಯ 36202 ಕೆರೆಗಳು

- ಮುಂಗಾರು ಕೊರತೆಯ ಕಾರಣ 5862 ಕೆರೆಗಳಲ್ಲಿ ಒಂದು ಹನಿಯೂ ನೀರಿಲ್ಲದೆ ಖಾಲಿ

- 13627 ಕೆರೆಗಳಲ್ಲಿ ಶೇ.30ಕ್ಕಿಂತ ಕಮ್ಮಿ, 11170 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ನೀರು

- 4959 ಕೆರೆಗಳಲ್ಲಿ ಶೇ. 51ರಿಂದ 99ರಷ್ಟು ನೀರು. 584 ಕೆರೆಗಳು ಮಾತ್ರ ಪೂರ್ತಿ ಭರ್ತಿ

- ಬರ ಹೀಗೆ ಮುಂದುವರಿದರೆ ನೀರಿಲ್ಲದೆ ಒಣಗುವ ಕೆರೆಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ

---ಕೆರೆಗಳ ವಿವರ:

ಸಣ್ಣ ನೀರಾವರಿ:

  • ಖಾಲಿ ಕೆರೆಗಳು: 616
  • ಶೇ. 30ರಷ್ಟು ಭರ್ತಿ: 1802
  • ಶೇ. 31-50ರಷ್ಟು ಭರ್ತಿ: 791
  • ಶೇ. 51-99ರಷ್ಟು ಭರ್ತಿ: 582
  • ಸಂಪೂರ್ಣ ಭರ್ತಿಯಾಗಿರುವ ಕೆರೆಗಳು: 22
  • ಒಟ್ಟು: 3813

ಜಿಲ್ಲಾ ಪಂಚಾಯಿತಿ:

  • ಖಾಲಿ ಕೆರೆಗಳು: 5246
  • ಶೇ. 30ರಷ್ಟು ಭರ್ತಿ: 11825
  • ಶೇ. 31-50ರಷ್ಟು ಭರ್ತಿ: 10379
  • ಶೇ. 51-99ರಷ್ಟು ಭರ್ತಿ: 4377
  • ಸಂಪೂರ್ಣ ಭರ್ತಿಯಾಗಿರುವ ಕೆರೆಗಳು: 562
  • ಒಟ್ಟು: 32389