Asianet Suvarna News Asianet Suvarna News

JDS Setback in Mandya : ಸುಮಲತಾ, ಚಲುವರಾಯಸ್ವಾಮಿ ನೇರ ಟಾರ್ಗೆಟ್‌

  •  ಅಭಿವೃದ್ಧಿ ವಿಷಯದಲ್ಲಿ ರಾಜಕೀಯ!
  •  ಎರಡನೇ ಕಣ್ಣಿಗೆ ಸುಣ್ಣ ಹಚ್ಚುತ್ತಿರುವುದಕ್ಕೆ ಜನರ ಆಕ್ರೋಶ
  •  ಸುಮಲತಾ, ಚಲುವರಾಯಸ್ವಾಮಿ ನೇರ ಟಾರ್ಗೆಟ್‌
Mandya People unhappy over JDS Leader On Partial Politics  snr
Author
Bengaluru, First Published Dec 18, 2021, 1:58 PM IST

 ಮಂಡ್ಯ (ಡಿ.18):   ಹಾಸನ (Hassan) ಮತ್ತು ಮಂಡ್ಯ (Mandya) ನನ್ನ ಎರಡು ಕಣ್ಣುಗಳು ಎಂದು ದೇವೇಗೌಡರು ಹೇಳುತ್ತಲೇ ಇರುತ್ತಾರೆ. ಆದರೆ, ಜಿಲ್ಲೆಯ ಅಭಿವೃದ್ಧಿ ವಿಷಯಕ್ಕೆ ಬಂದಾಗ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಮಾಮೂಲಾಗಿದೆ ಎನ್ನುವುದು ಜಿಲ್ಲೆಯ ಜನಮಾನಸದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.  ಮಂಡ್ಯ (Mandya) ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿರುವುದೂ ಕೂಡ ಜೆಡಿಎಸ್‌ ದುರ್ಬಲಗೊಳ್ಳುತ್ತಿರುವುದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. 

ದೇವೇಗೌಡರು (HD Devegowda) ಅಭಿವೃದ್ಧಿ ವಿಷಯದಲ್ಲಿ ಹಾಸನಕ್ಕೆ (Hassan) ನೀಡುವ ಪ್ರಾಧಾನ್ಯತೆಯನ್ನು ಮಂಡ್ಯಕ್ಕೆ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendta Modi) ಅವರನ್ನು ಭೇಟಿಯಾದಾಗಲೆಲ್ಲಾ ಹಾಸನ (Hassan) ಅಭಿವೃದ್ಧಿ ಸಂಬಂಧ ವಿಚಾರಗಳಿರುತ್ತವೆಯೇ ವಿನಃ ಮಂಡ್ಯಕ್ಕೆ ಸಂಬಂಧಿಸಿದ ವಿಚಾರಗಳೇ ಇರುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಮಂಡ್ಯಕ್ಕೆ ಏನು ಕೇಳಿದ್ದೀರಿ ಎಂದು ಪತ್ರಕರ್ತರು ದೇವೇಗೌಡರನ್ನೊಮ್ಮೆ ಕೇಳಿದರೆ ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ ಎಂಬ ಉತ್ತರ ಜನರನ್ನು ನಿರಾಸೆಗೊಳಿಸಿದೆ ಎನ್ನಲಾಗುತ್ತಿದೆ.

ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮೈಷುಗರ್‌ ವಿಚಾರವಾಗಿ ಪ್ರಶ್ನಿಸಿದರೆ ಅದನ್ನೆಲ್ಲಾ ನಿಮ್ಮ ಸಂಸದರು ನೋಡಿಕೊಳ್ಳುತ್ತಾರೆ ಎಂಬ ಹೇಳಿಕೆಗಳು ಜನರಿಗೆ ದಳಪತಿಗಳ ಮೇಲಿನ ವಿಶ್ವಾಸ ಕುಸಿಯುವಂತೆ ಮಾಡಿದೆ.

ದ್ವೇಷದ ರಾಜಕಾರಣ :  ಲೋಕಸಭೆಗೆ (Lok sabha) ಸ್ಪರ್ಧಿಸಿದ್ದ ಪುತ್ರ ನಿಖಿಲ್‌ನನ್ನು ಸೋಲಿಸಿದರೆಂಬ ಒಂದೇ ಕಾರಣಕ್ಕೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ (Cheluvarayaswamy) ಹಾಗೂ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರನ್ನು ನೇರ ಟಾರ್ಗೆಟ್‌ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆಯೇ ವಿನಃ ಬಿಜೆಪಿ ಜೊತೆ ಉತ್ತಮ ಸಖ್ಯ ಹೊಂದಿದ್ದರೂ ಜಿಲ್ಲೆಗೆ ಅಗತ್ಯವಿರುವಷ್ಟುಅನುದಾನವನ್ನು ಬಿಡುಗಡೆ ಮಾಡಿಸದೆ, ಮೈಷುಗರ್‌ ಕಾರ್ಖಾನೆಗೆ ಚಾಲನೆಯನ್ನೂ ಕೊಡಿಸದೆ, ಅಭಿವೃದ್ಧಿ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ನಡೆಯಿಂದ ಜನರು ಜೆಡಿಎಸ್‌ಗೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರಣಿ ದೌರ್ಬಲ್ಯಗಳು :  ಜೆಡಿಎಸ್‌ (JDS) ವರಿಷ್ಠರಾಗಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಾರದಿರುವುದು, ಜೆಡಿಎಸ್‌ ಭದ್ರಕೋಟೆ ಮಂಡ್ಯ ಎಂಬ ಅತಿಯಾದ ಆತ್ಮವಿಶ್ವಾಸ, ಜಿಲ್ಲಾ ನಾಯಕತ್ವವನ್ನು ಸ್ಥಳೀಯವಾಗಿ ಸಮರ್ಥ ನಾಯಕರೊಬ್ಬರಿಗೆ ವಹಿಸದೆ ನಿಖಿಲ್‌ಗೆ ನಾಯಕತ್ವ, ಹಾಗೂ ರಾಜಕೀಯ ಅಧಿಕಾರ ಕೊಡಿಸುವುದಕ್ಕೆ ತೋರುತ್ತಿರುವ ಆತುರತೆ, ಸ್ಥಳೀಯ ಶಾಸಕರು ಅದಕ್ಕೆ ತೋರುತ್ತಿರುವ ಅಸಮಾಧಾನ, ಅಭಿವೃದ್ಧಿಯನ್ನು ಕಡೆಗಣಿಸಿ ರಾಜಕೀಯಕ್ಕಷ್ಟೇ ಮಂಡ್ಯವನ್ನು ಸೀಮಿತಗೊಳಿಸಿರುವುದು ಇವೆಲ್ಲಾ ದೌರ್ಬಲ್ಯಗಳು ಜೆಡಿಎಸ್‌ ಭದ್ರಕೋಟೆ ಅಲುಗಾಡುವುದಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ.

ನಿಖಿಲ್ಗೆ ಮತ್ತೊಂದು ಹಿನ್ನಡೆ :   ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC election) ಪರಾಭವಗೊಂಡಿರುವ ಜೆಡಿಎಸ್‌ (JDS) ತನ್ನ ಭದ್ರಕೋಟೆಯಲ್ಲಿ ಸುಭದ್ರವಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದು, ಈ ಸೋಲು ಜೆಡಿಎಸ್‌ (JDS) ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರು ಮಂಡ್ಯ (Mandya) ನೆಲದಲ್ಲಿ ನೆಲೆ ಕಂಡುಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆ ಉಂಟುಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (MLC election) ಭರ್ಜರಿ ಜಯ ಸಾಧಿಸಿ ದಾಖಲೆ ಸೃಷ್ಟಿಸಿದ್ದ ಜೆಡಿಎಸ್‌ (JDS) ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಿತ್ತು. ಆ ಮೂಲಕ ಮಂಡ್ಯ (Mandya) ಜೆಡಿಎಸ್‌ ಭದ್ರಕೋಟೆ ಎನ್ನುವುದನ್ನು ಸಾರಿ ಹೇಳಿತ್ತು. ಆದರೆ, ಸರಣಿ ಸೋಲುಗಳು ಜೆಡಿಎಸ್‌ನೊಳಗೆ ಕಳವಳವನ್ನು ಸೃಷ್ಟಿಸಿವೆ.

ಸೋಲಿನ ಹಿಂದೆ ಅನುಮಾನಗಳು:  ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯಸಾಧಿಸಿದ್ದ ಜೆಡಿಎಸ್‌ (JDS) 6 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದ್ದು, ಇಬ್ಬರು ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿದ್ದರೂ ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿ ಗೌಡರ (Appaji Gowda) ಸೋಲು ಪಕ್ಷದೊಳಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರತಿ ಚುನಾವಣೆಯಲ್ಲೂ ಜೆಡಿಎಸ್‌ (JDS) ಗೆಲುವಿನ ವಿಶ್ವಾಸದೊಡನೆಯೇ ಸಂಘಟನಾತ್ಮಕ ಹೋರಾಟ ಆರಂಭಿಸುತ್ತದೆಯಾದರೂ ಅಂತಿಮವಾಗಿ ಪರಾಭವಗೊಳ್ಳುವುದು ಪಕ್ಷದ ಹಿನ್ನಡೆಗೆ ಕಾರಣವೆಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ (MLC Election) ಬಳಿಕ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ (JDS-  Congress) ಸರ್ಕಾರ ಅಧಿಕಾರದಲ್ಲಿದ್ದರೂ ಸ್ಥಳೀಯವಾಗಿ ಅಷ್ಟದಿಕ್ಕುಗಳಲ್ಲಿ ಜೆಡಿಎಸ್‌ ಶಾಸಕರೇ ವಿಜೃಂಭಿಸುತ್ತಿದ್ದರೂ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರ ಸೋಲು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿತ್ತಲ್ಲದೆ, ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ (HD Kumataswamy) ಅವರನ್ನು ಆಘಾತಗೊಳಿಸಿತ್ತು. ನಂತರ 2020ರಲ್ಲಿ ನಡೆದ ಕೆ.ಆರ್‌.ಪೇಟೆ(KR Pete) ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಗೆಲುವಿನ ಸಾಧ್ಯತೆ ಇತ್ತು. ಆದರೆ, ಜಿಲ್ಲೆಯಲ್ಲಿ ರಾಜಕೀಯ (Politics) ಹಿನ್ನೆಲೆಯೇ ಇಲ್ಲದ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ಜೆಡಿಎಸ್‌ನ್ನು ಇನ್ನಷ್ಟು ದುರ್ಬಲಗೊಳಿಸಿತ್ತು.

ವರವಾಗದ ವಿಧಾನಪರಿಷತ್‌ ಚುನಾವಣೆ:  ಈ ಎರಡೂ ಸೋಲುಗಳ ಪ್ರತೀಕಾರವಾಗಿ ಆರಂಭಿಸಿದ ವಿಧಾನ ಪರಿಷತ್‌ ಚುನಾವಣೆ ಕೂಡ ಜೆಡಿಎಸ್‌ಗೆ ವರವಾಗಲಿಲ್ಲ. 2400ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವುದಾಗಿ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದ ಜೆಡಿಎಸ್‌ ಲೋಕಸಭಾ ಚುನಾವಣೆ (Loksabha election) ಸೋಲನ್ನು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿತ್ತು. ಆದರೆ, 97 ಮತಗಳ ಅಂತರದಿಂದ ಸೋತು ಕಾಂಗ್ರೆಸ್‌ಗೆ ಶರಣಾಗಿದ್ದು ಜೆಡಿಎಸ್‌ನ ಮತ್ತೊಂದು ಹಿನ್ನಡೆಯಾಗಿದೆ.

Follow Us:
Download App:
  • android
  • ios