Karnataka Politics : JDS ಬಿಡಲು ಹೊರಟ ಹಿರಿಯ ನಾಯಕನ ಮನ ಒಲಿಸಲು ಯತ್ನ
- ಮನಸ್ಸು ಬದಲಿಸಿ ಪಕ್ಷದಲ್ಲಿ ಜಿಟಿಡಿ ಉಳಿಸಿಕೊಳ್ಳಲು ಮನವಿ
- ವ್ಯಕ್ತಿಗಿಂತ ಪಕ್ಷ ಮುಖ್ಯ, ಯಾರೂ ಅನಿವಾರ್ಯವಲ್ಲ
- ಮುಂದಿನ ಕ್ರಮದ ಬಗ್ಗೆ ಎರಡು- ಮೂರು ದಿನಗಳಲ್ಲಿ ವರಿಷ್ಠರ ತೀರ್ಮಾನ
ಮೈಸೂರು (ಡಿ.16): ಮನಸ್ಸು ಬದಲಿಸಿ ಪಕ್ಷದಲ್ಲಿಯೇ ಉಳಿಯುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರಿಗೆ ಕೆ.ಆರ್. ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ (Sara Mahesh) ಮನವಿ ಮಾಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡರು (GT Devegowda) ನಮ್ಮ ನಾಯಕರು. ಅವರ ವರ್ಚಸ್ಸು ಹಾಗೂ ಪಕ್ಷದ ಚಿಹ್ನೆಯ ಮೇಲೆ, ಕಾರ್ಯಕರ್ತರ ದುಡಿಮೆಯಿಂದಾಗಿ ಗೆದ್ದಿದ್ದಾರೆ. ಆದ್ದರಿಂದ ಪಕ್ಷದಲ್ಲಿಯೇ ಉಳಿಯಬೇಕು ಎಂಬುದು ನನ್ನ ವೈಯಕ್ತಿಕ ಮನವಿ ಎಂದರು.
ಪಕ್ಷ ನಮಗೆ ಅನಿವಾರ್ಯವೇ ಹೊರತು ನಾವು ಪಕ್ಷಕ್ಕೆ ಅನಿವಾರ್ಯವಲ್ಲ. ಪಕ್ಷ ಇಲ್ಲದಿದ್ದರೇ ನಾನು ದೊಡ್ಡ ಸೊನ್ನೆ. ಇನ್ನೂ ಒಂದು ಕಾಲು ವರ್ಷ ಇದೆ. ಜಿ.ಟಿ.ದೇವೇಗೌಡರು (GT Devegowda) ಸೂಕ್ತ ತೀರ್ಮಾನ ಮಾಡಲಿ ಎಂದರು.
ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಜಿ.ಟಿ. ದೇವೇಗೌಡರಿಗೆ (GT Devegowda) ಪಕ್ಷದ ಬಾಗಿಲು ಮುಚ್ಚಿದೆ ಎನ್ನುತ್ತಾರೆ. ಜಿ.ಟಿ.ದೇವೇಗೌಡರು (GT Devegowda) ನಾನೇ ದಡಾರನೇ ಹಾಕಿ ಬಂದಿದ್ದೇನೆ ಎನ್ನುತ್ತಾರೆ ಎಂಬ ಬಗ್ಗೆ ಅವರ ಗಮನ ಸೆಳೆದಾಗ, 2023ರ ವರೆಗೆ ನಮ್ಮ ಜೊತೆಯಲ್ಲಿ ಇದ್ದು, ಮಾರ್ಗದರ್ಶನ ಮಾಡಿ ಎಂದ ಕೋರಿದ ಅವರು, ಹುಣಸೂರಿನಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಜೊತೆ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೊಂದು (Congress), ಬಿಜೆಪಿ (BJP) ಗೊಂದು ಮತ ಕೇಳಿರಬಹುದು. ಈಗಲೂ ಮನಸ್ಸು ಬದಲಿಸಿಕೊಳ್ಳುವ ವಿಶ್ವಾಸವಿದೆ ಎಂದರು.
ಮೈಸೂರು- ಚಾಮರಾಜನಗರ (Mysuru - Chamarajanagar) ದ್ವಿಸದಸ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಸಿ.ಎನ್. ಮಂಜೇಗೌಡರು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವರದಿ ನೀಡಲಾಗುವುದು. ಅದರ ಆಧಾರದ ಮೇಲೆ ವರಿಷ್ಠರು ಎರಡು- ಮೂರು ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಬಹುದು ಎಂದರು.
ಸಂದೇಶ್ ಬಗ್ಗೆ ಜ.5ರ ನಂತರ ಮಾತನಾಡುವೆ: ಮೈಸೂರು ಮಹಾರಾಜರು ನನಗೆ ಟಿಕೆಟ್ ತಪ್ಪಿಸಿದರು ಎಂದು ನನ್ನ ಬಗ್ಗೆ ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ (Sandesh Nagaraj) ಅವರ ಬಗ್ಗೆ ಜ.5ರ ನಂತರ ಮಾತನಾಡುವೆ ಎಂದು ಸಾ.ರಾ.ಮಹೇಶ್ ಹೇಳಿದರು.
ಸಂದೇಶ್ ನಾಗರಾಜ್ ನಮ್ಮ ಪಕ್ಷದಿಂದ 12 ವರ್ಷಗಳ ಕಾಲ ಶಾಸಕರಾಗಿದ್ದರು. ಅವರ ಸಹೋದರ ಮೇಯರ್, ಎಂಡಿಎ (MDA) ಸದಸ್ಯರು ಆಗಿದ್ದರು. ಒಂದು ಬಾರಿ ನರಸಿಂಹರಾಜ ಕ್ಷೇತ್ರದಿಂದ ವಿಧಾನಸಭೆ ಟಿಕೆಟ್ ಕೂಡ ನೀಡಲಾಗಿತ್ತು. ಮೈಸೂರು (Mysuru) ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಕಾರಣಕ್ಕೆ 2018ರಲ್ಲಿ ಕೊಡಲಿಲ್ಲ. ಆಗ ಅವರು ಬಿಜೆಪಿ (BJP) ಅಭ್ಯರ್ಥಿಯಾದರು. ಹೀಗಾಗಿ ಪಕ್ಷ ಅವರಿಗೆ ಯಾವ ರೀತಿಯಲ್ಲೂ ಮೋಸ ಮಾಡಿಲ್ಲ. ಅವ್ರು ಕೆಲಸ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಿನ ಗೌರವವನ್ನು ಕಾರ್ಯಕರ್ತರು ಕೊಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಜ.5ರಂದು ಅವರು ಏನು ಹೇಳುತ್ತಾರೆ ಎಂಬುದರ ಮೇಲೆ ಉತ್ತರಿಸುತ್ತೇನೆ ಎಂದರು.
ಎಚ್.ಡಿ.ರೇವಣ್ಣ (HD Revanna) ಮನೆಗೆ ಬಂದು ಬಿ ಫಾರಂ ಕೊಟ್ಟಿದ್ದರು ಅನ್ನೋದು ಸುಳ್ಳು. ಬಿ ಫಾರಂ ಕೊಟ್ಟಿದ್ದರೆ ಚುನಾವಣೆಯಲ್ಲಿ (Election) ಸ್ಪರ್ಧಿಸಬೇಕಿತ್ತಲ್ಲ ಎಂದರು.
ಅವರೇನ್ ಕಳ್ಳೆಪುರಿ ಹಂಚಿದ್ರಾ?- ಜಿಟಿಡಿಗೆ ಸಾ.ರಾ. ಟಾಂಗ್
ಎಂಎಲ್ಸಿ ಚುನಾವಣೆಲೇ (MLC Election) ಕುಂಕುಮ-ಕೂದಲು- ಹಣ ಕೊಟ್ಟು ಆಣೆ- ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂದು ಜಿ.ಟಿ.ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್, ಅವರೇನು ಕಳ್ಳೆಪುರಿ ಹಂಚಿದ್ರಾ? ಎಂದು ಪ್ರಶ್ನಿಸಿದರು.
ಎರಡೂ ಪಕ್ಷಗಳಿಂದಲೂ ಅಂತರ ಕಾಪಾಡಲಿ: ಜೆಡಿಎಸ್‌ಗೆ ಒಂದು ಸ್ಪಷ್ಟತೆ ಇಲ್ಲ. ಒಂದು ಸಾರಿ ಕಾಂಗ್ರೆಸ್ (Congress), ಮತ್ತೊಂದು ಸಾರಿ ಬಿಜೆಪಿ. ಇದರಿಂದ ಹಿನ್ನೆಡೆ ಆಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಮುಗಿಸಲು ಯತ್ನಿಸುತ್ತಿವೆ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಆದರೆ ಇಬ್ಬರಿಂದಲೂ ಅಂತರ ಕಾಪಾಡಿ ಅನ್ನೋದು ನನ್ನ ವೈಯಕ್ತಿಕ ಮನವಿ ಎಂದರು.