ನಿಂತು ನಿಂತು ಓಡುತ್ತಿರುವ ಮಂಡ್ಯದ ಮೈ ಶುಗರ್‌: ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ

ಮೈ ಶುಗರ್‌ ಕಾರ್ಖಾನೆ ಶುರುವಾಗಿ ಇನ್ನು ಒಂದು ವಾರ ಕಳೆದಿಲ್ಲ. ಕಬ್ಬು ಅರೆಯುವಿಕೆ ಸರಾಗವಾಗಿ ನಡೆಯದೆ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದು ಕಬ್ಬು ಬೆಳೆಗಾರರನ್ನು ಹೈರಾಣಾಗುವಂತೆ ಮಾಡಿದೆ. 

Mandya Mysugar factory Stopped Over technical issues gvd

ಮಂಡ್ಯ (ಜು.17): ಮೈ ಶುಗರ್‌ ಕಾರ್ಖಾನೆ ಶುರುವಾಗಿ ಇನ್ನು ಒಂದು ವಾರ ಕಳೆದಿಲ್ಲ. ಕಬ್ಬು ಅರೆಯುವಿಕೆ ಸರಾಗವಾಗಿ ನಡೆಯದೆ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದು ಕಬ್ಬು ಬೆಳೆಗಾರರನ್ನು ಹೈರಾಣಾಗುವಂತೆ ಮಾಡಿದೆ. ಕಾರ್ಖಾನೆ ವಾರ್ಡ್‌ನಲ್ಲಿ ಕಬ್ಬು ತುಂಬಿದ ಲಾರಿಗಳು, ಟ್ರ್ಯಾಕ್ಟರ್‌ಗಳು, ಎತ್ತಿನ ಗಾಡಿಗಳು ಸಾಲುಗಟ್ಟಿನಿಂತಿವೆ. ಕಾರ್ಖಾನೆ ಒಳಗೆ ಮಾತ್ರವಲ್ಲದೆ ಶ್ರೀ ಕಾಳಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆ, ದಬರಿ ಕಾಲೋನಿ ಗೆ ಹೋಗುವ ರಸ್ತೆಗಳಲ್ಲೂ ಎತ್ತಿನ ಗಾಡಿಗಳು ನಿಂತಿದ್ದು ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ.

ಕಾರ್ಖಾನೆಗೆ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಆಗದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೂ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿತ್ತು. ಭಾನುವಾರ ಮಧ್ಯಾಹ್ನದ ವೇಳೆಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭವಾಯಿತಾದರೂ ರಾತ್ರಿ 8:30ರ ಸಮಯಕ್ಕೆ ಮತ್ತೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿತ್ತು. ಕಾರ್ಖಾನೆ ಒಳಗೆ ಕಬ್ಬು ಅರೆಯುವಿಕೆ ಯಾವಾಗ ಆರಂಭವಾಗುತ್ತದೆ, ಯಾವಾಗ ಸ್ಥಗಿತಗೊಳ್ಳುತ್ತದೆ ಎನ್ನುವುದೇ ಕಬ್ಬು ತಂದ ರೈತರಿಗೆ ಅರ್ಥವಾಗುತ್ತಿಲ್ಲ. ಕಂಪನಿ ಅಧಿಕಾರಿಗಳು ಕೂಡ ಕಬ್ಬು ಅರೆಯುವಿಕೆ ಯಾವ ಕಾರಣಕ್ಕೆ ಸ್ಥಗಿತಗೊಳ್ಳುತ್ತಿದೆ, ಪದೇ ಪದೇ ಸ್ಥಗಿತಗೊಳ್ಳಲು ಕಾರಣವೇನು, ಯಾವಾಗ ಕಬ್ಬು ಅರೆಯುವಿಕೆ ಆರಂಭಗೊಳ್ಳುತ್ತದೆ ಎಂಬ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳುತ್ತಿಲ್ಲ. 

ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು

ಕಾರ್ಖಾನೆ ಒಳಗಿನ ನೌಕರರಿಗೆ ಕನ್ನಡ ಬರುವುದಿಲ್ಲವಾದ್ದರಿಂದ ಅವರನ್ನು ಕೇಳಿಯೂ ಪ್ರಯೋಜನವಾಗುತ್ತಿಲ್ಲ. ಕಬ್ಬು ತಂದ ರೈತರು ಅತಂತ್ರ ಸ್ಥಿತಿಯಲ್ಲಿ ಕಾರ್ಖಾನೆ ಒಳಗೆ ಉಳಿಯುವಂತಾಗಿದೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಪ್ಪ ಸಾಹೇಬ ಪಾಟೀಲ ಅವರನ್ನು ಬದಲಾವಣೆ ಮಾಡಿ ಅವರ ಜಾಗಕ್ಕೆ ಐಎಎಸ್‌ ಅಧಿಕಾರಿಯಾಗಿ ರವಿಕುಮಾರ್‌ ಅವರನ್ನು ನೇಮಿಸಲಾಗಿದೆ. ಕಳೆದೊಂದು ವರ್ಷದಿಂದ ಕಾರ್ಖಾನೆಯಲ್ಲೇ ಉಳಿದು ಯಂತ್ರೋಪಕರಣಗಳ ಬಗ್ಗೆ ಅರಿವನ್ನು ಹೊಂದಿದ್ದ ಅಪ್ಪ ಸಾಹೇಬ ಪಾಟೀಲ ಅವರನ್ನು ರಾಜ್ಯ ಸರ್ಕಾರ ಕಂಪನಿಯಿಂದ ಬಿಡುಗಡೆಗೊಳಿಸಿದೆ.

ಅವರನ್ನು ತಾಂತ್ರಿಕ ನಿರ್ದೇಶಕರಾಗಿ ಉಳಿಸಿಕೊಳ್ಳುವ ಸಕ್ಕರೆ ಸಚಿವರ ಭರವಸೆ ಇದುವರೆಗೂ ಈಡೇರಿಲ್ಲ. ಇದರಿಂದಾಗಿ ಕಾರ್ಖಾನೆಯೊಳಗೆ ತಾಂತ್ರಿಕ ನೈಪುಣ್ಯತೆ ಹೊಂದಿರುವ ಯಾವೊಬ್ಬ ಅಧಿಕಾರಿಯೂ ಇಲ್ಲದಿರುವುದು ಕಬ್ಬುವರಿಕೆ ಪದೇ ಪದೇ ಸ್ಥಗಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಸೂಚಿಸುವವರೇ ಇಲ್ಲದಂತಾಗಿದೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಪ್ರಮುಖ ಅಧಿಕಾರಿಗಳ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಇದರಿಂದ ಕಬ್ಬನ್ನು ತಂಡ ರೈತರಿಗೆ ಏನು ಮಾಡಬೇಕೆಂಬುದೇ ತೋಚದಂತಾಗಿದೆ. 

ಕಾರ್ಖಾನೆ ಸಮರ್ಪಕವಾಗಿ ಮುನ್ನಡೆಯ ಬೇಕಾದರೆ ರೈತರು ಸಹಕರಿಸಬೇಕು ಎಂಬ ಬಣ್ಣದ ಮಾತುಗಳು ಅಧಿಕಾರಿ ವಲಯದಿಂದ ಕೇಳಿ ಬರುತ್ತಿದ್ದವಾದರೂ, ಕಬ್ಬು ಅರೆಯುವಿಕೆ ನಿರಂತರವಾಗಿ ನಡೆಯಲು ಕಾರ್ಖಾನೆಯನ್ನು ಸಜ್ಜುಗೊಳಿಸುವಲ್ಲಿ ವೈಫಲ್ಯ ಸಾಧಿಸಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಕಂಡುಬರುತ್ತಿದೆ. ಮೈ ಶುಗರ್‌ ಕಾರ್ಖಾನೆಗೆ ಸಕಾಲದಲ್ಲಿ 50 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕಾರ್ಖಾನೆ ಯಂತ್ರೋಪಕರಣಗಳ ದುರಸ್ತಿ ಸಮರ್ಪಕವಾಗಿ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ನಡುವೆಯೂ ಕಾರ್ಖಾನೆ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದಕ್ಕೆ ಕಾರಣವೇನು ಎಂಬುದೇ ಅರ್ಥವಾಗದಂತಾಗಿದೆ. ಕಾರ್ಖಾನೆಗೆ ಕಬ್ಬು ತಂದ ರೈತರು ದಿನಗಟ್ಟಲೆ ಕಾದು ಕೂರುವಂತಾಗಿದೆ.

ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ

ಕಾರ್ಖಾನೆ ಒಳಗೆ ಪದೇಪದೇ ಕಬ್ಬು ಅರೆಯುವಿಕೆ ಸ್ಥಗಿತಗೊಳ್ಳುತ್ತಲೇ ಇದೆ. ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಯಾರು ಹೇಳುತ್ತಿಲ್ಲ. ಒಮ್ಮೆ ಕರೆಂಚ್‌ ಇಲ್ಲ ಎನ್ನುತ್ತಾರೆ. ಇನ್ನೊಮ್ಮೆ ಬೆಲ್ಟ ಕಟ್ಟಾಗಿದೆ ಎಂದು ಹೇಳುತ್ತಿದ್ದಾರೆ. ಕಬ್ಬು ಅರೆಯುವಿಕೆ ಯಾವಾಗ ಆರಂಭವಾಗುತ್ತದೆ ಎಂದು ಕೇಳಿದರೆ ಅಧಿಕಾರಿಗಳಾದಿಯಾಗಿ ನೌಕರರು ಸರಿಯಾಗಿ ಹೇಳುತ್ತಿಲ್ಲ. ನಮಗೆ ಬೇರೆ ಬೇರೆ ಕಾರ್ಖಾನೆಯವರು ಕಬ್ಬನ್ನು ನೀಡುವಂತೆ ಕೇಳಿಕೊಂಡಿದ್ದರು. ಆದರೆ ನಾವು ಮೈ ಶುಗರ್‌ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದು ಇಲ್ಲಿಗೆ ತಂದೆವು. ಇಲ್ಲಿ ನೋಡಿದರೆ ಪರಿಸ್ಥಿತಿಯೇ ಬೇರೆಯಾಗಿದೆ. ಸಕಾಲದಲ್ಲಿ ಕಬ್ಬು ಅರೆಯದಿದ್ದರೆ ನಮಗೇ ನಷ್ಟವಾಗುತ್ತದೆ. ನಾವು ಕಬ್ಬನ್ನು ಇಲ್ಲಿಗೆ ತಂದು ತಪ್ಪು ಮಾಡಿದೆವು ಎಂದು ಅನ್ನಿಸುತ್ತಿದೆ ಎಂದು ಕಾರ್ಖಾನೆಗೆ ಕಬ್ಬು ತಂದ ರೈತರಿಂದ ಕೇಳಿಬರುತ್ತಿದ್ದ ಮಾತಾಗಿತ್ತು.

Latest Videos
Follow Us:
Download App:
  • android
  • ios