ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು
ಜಿಲ್ಲೆಯ ಮೂವರು ವಿಜ್ಞಾನಿಗಳು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಶುಕ್ರವಾರ ನಭಕ್ಕೆ ಚಿಮ್ಮಿದ ‘ಚಂದ್ರಯಾನ-3’ ಯೋಜನೆಯಲ್ಲಿ ಕೆಲಸ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಚಿಕ್ಕಬಳ್ಳಾಪುರ (ಜು.17): ಜಿಲ್ಲೆಯ ಮೂವರು ವಿಜ್ಞಾನಿಗಳು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಶುಕ್ರವಾರ ನಭಕ್ಕೆ ಚಿಮ್ಮಿದ ‘ಚಂದ್ರಯಾನ-3’ ಯೋಜನೆಯಲ್ಲಿ ಕೆಲಸ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಗುಡಿಬಂಡೆ ತಾಲೂಕಿನ ಗುರ್ರಪ್ಪ ಮತ್ತು ಗೌರಿಬಿದನೂರು ತಾಲೂಕಿನ ಆರ್.ಶ್ರೀನಾಥ್ ಮತ್ತು ಗಿರೀಶ್ ಚಂದ್ರಯಾನ-3 ಯೋಜನೆಯಲ್ಲಿ ಕೆಲಸ ಮಾಡಿದ ವಿಜ್ಞಾನಿಗಳು. ಜಂಗಾರ್ಲಹಳ್ಳಿಯ ವಿಜ್ಞಾನಿ ಗುರ್ರಪ್ಪ 2013ರಲ್ಲಿ ನಡೆದ ಮಂಗಳಯಾನ ಯೋಜನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಅವರು ಆಗ ಕೆಲಸ ನಿರ್ವಹಿಸಿದ ತಂಡದ ಮುಖ್ಯಸ್ಥರಾಗಿದ್ದರು. ಈಗ ಚಂದ್ರಯಾನ-3ರಲ್ಲಿಯೂ ಕೆಲಸ ಮಾಡಿದ್ದಾರೆ. ಅವರು 1991ರಿಂದ ಇಸ್ರೊದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.
ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಆರ್.ಶ್ರೀನಾಥ್, ಚಂದ್ರಯಾನದ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಕಲೆ ಹಾಕಿ ವಿಶ್ಲೇಷಣೆಗೆ ಒಳಪಡಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ನ್ಯಾಮಗೊಂಡ್ಲು ಗ್ರಾಮದ ಗಿರೀಶ್ ಸಹ ಚಂದ್ರಯಾನ-3 ಯೋಜನೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಇಂತಹ ಮಹತ್ವದ ಯೋಜನೆಗಳಲ್ಲಿ ಭಾಗಿಯಾಗುವುದು ಕುಟುಂಬಕ್ಕೂ ಖುಷಿ ತಂದಿದೆ ಎಂದು ಗುರ್ರಪ್ಪ ಅವರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ. ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿಗೌಡ ಈ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ
ಚಂದ್ರಯಾನ-3 ತಂಡದಲ್ಲಿ ಮಂಗಳೂರು ಮೂಲದ ಮಹಿಳಾ ವಿಜ್ಞಾನಿ: ಭಾರತ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಎಲ್ಲೆಡೆ ಇದಕ್ಕೆ ಸಂಭ್ರಮ ವ್ಯಕ್ತವಾಗಿದೆ. ದೇಶದ ಜನತೆಯಲ್ಲಿ ಅಭಿಮಾನ ಮೂಡುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಂಡದಲ್ಲಿ ಮಂಗಳೂರು ಮೂಲದ ಹಿರಿಯ ವಿಜ್ಞಾನಿಯೊಬ್ಬರು ಇದ್ದರು ಎಂಬುದು ತಿಳಿದುಬಂದಿದೆ. ಮಂಗಳೂರು ನಗರದ ಬೊಕ್ಕಪಟ್ಣ ನಿವಾಸಿ ಸುಮನಾ ವಾಲ್ಕೆ ಅವರೇ ಈ ಹಿರಿಮೆಗೆ ಪಾತ್ರರಾದವರು. ಮಂಗಳೂರಿನ ನಂದಾ ಶೇಟ್ ಮತ್ತು ಸಂಧ್ಯಾ ನಂದಾ ಶೇಟ್ ದಂಪತಿಯ ಏಕೈಕ ಪುತ್ರಿಯಾದ ಸುಮನಾ ಮಂಗಳೂರಿನಲ್ಲೇ ಶಿಕ್ಷಣ ಪೂರೈಸಿದರು.
ಎಚ್‌ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು
ಮಂಗಳೂರಿನ ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದರು. ಇವರು ಕೆನರಾ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ. ಬಳಿಕ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತರು. ಇಸ್ರೋ ವಿಜ್ಞಾನಿಯಾಗಿದ್ದ ಬೋಳೂರಿನ ರಾಮಕೃಷ್ಣ ವಾಲ್ಕೆ ಅವರನ್ನು ವಿವಾಹವಾದರು. ಬಳಿಕ ಸುಮನಾ ವಾಲ್ಕೆ ಇಸ್ರೋಗೆ ಸೇರ್ಪಡೆಗೊಂಡರು. ಇಸ್ರೋದಲ್ಲಿ ಈಗ ಹಿರಿಯ ವಿಜ್ಞಾನಿಯಾಗಿದ್ದು, ಈ ಬಾರಿಯ ಚಂದ್ರಯಾನ-3 ವಿಜ್ಞಾನಿಗಳ ತಂಡದಲ್ಲಿ ಇವರೂ ಇದ್ದಾರೆ ಎನ್ನುವುದು ಕರಾವಳಿಗರಿಗೆ ಸಂತಸದ ಸಂಗತಿ ಎನ್ನುತ್ತಾರೆ ಅವರ ಸಂಬಂಧಿ ಮಂಗಳೂರಿನ ವರದರಾಜ ನಾಗ್ವೇಕರ್.