ಮಂಡ್ಯ(ಸೆ.06): ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಕ್ರಮವನ್ನು ಖಂಡಿಸಿ ತಾಲೂಕು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಾಗಮಂಗಲ ಪಟ್ಟಣದಲ್ಲಿ  ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಹಳೇ ಟೋಲ್‌ ಗೇಟ್‌ನಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾ ನಿರತ ಜೆಡಿಎಸ್‌ ಕಾರ‍್ಯಕರ್ತರು, ಟಿ.ಮರಿಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮದುವೆ ನೆನಪಿಗಾಗಿ ಗಿಡ ನೆಟ್ಟ ನವದಂಪತಿ

ಈ ವೇಳೆ ಮಾತನಾಡಿದ ಜಿಪಂ ಮಾಜಿ ಸದಸ್ಯ ಡಿ.ಟಿ. ಶ್ರೀನಿವಾಸ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ತನ್ನ ವ್ಯಾಪ್ತಿಗೆ ಬರುವ ಹಲವು ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದವರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಮೇಲೆ ಮಾತ್ರ ಇಡಿ ದಾಳಿ ಇಲ್ಲ:

ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಐಟಿ ಮತ್ತು ಇಡಿ ಅಧಿಕಾರಿಗಳು ಬಿಜೆಪಿ ಪಕ್ಷದ ಮುಖಂಡರನ್ನು ಹೊರತುಪಡಿಸಿ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷದ ಕೆಲ ಪ್ರಭಾವಿ ನಾಯಕರನ್ನು ಟಾರ್ಗೆಟ್‌ ಮಾಡಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದಲೇ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಡಿಕೆಶಿಯನ್ನು ಬಂಧನ ಮುಕ್ತಗೊಳಿಸಿ:

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಇಡಿ ಅಧಿಕಾರಿಗೆ ತನಿಖೆ ಮತ್ತು ವಿಚಾರಣೆಗೆ ಹಗಲು ರಾತ್ರಿ ಎನ್ನದೆ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದರೂ ಸಹ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್‌ ಶಾ ಅವರ ಸೂಚನೆ ಮೇರೆಗೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ. ಆದ್ದರಿಂದ ಡಿ.ಕೆ.ಶಿವಕುಮಾರ್‌ ಅವರನ್ನು ಈ ಕೂಡಲೇ ಬಂಧನದಿಂದ ಮುಕ್ತಿಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳುವ ಮೂಲಕ ದೇಶದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಂಡ್ಯ: ಮೋದಿ, ಶಾ ವಿರುದ್ಧ ಹೆಚ್ಚಿದ ಕಿಚ್ಚು; ಭಾವಚಿತ್ರ ಸುಟ್ಟು ಆಕ್ರೋಶ

ನಂತರ ಮಿನಿವಿಧಾನಸೌಧದ ಮುಂಭಾಗದಲ್ಲಿ ಕೆಲ ಹೊತ್ತು ಧರಣಿ ನಡೆಸಿದ ಜೆಡಿಎಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಡಿಕೆಶಿ ಬಿಡುಗಡೆಗೆ ಆಗ್ರಹಿಸಿದ ಬಳಿಕ ತಾಲೂಕು ಶಿರಸ್ತೆದಾರ್‌ ಪ್ರಕಾಶ್‌ಗೆ ಮನವಿಪತ್ರ ಸಲ್ಲಿಸಿದರು.

KRS ಒಳಹರಿವು ಹೆಚ್ಚಳ: ತ. ನಾಡಿಗೆ ಮತ್ತೆ 43 ಸಾವಿರ ಕ್ಯುಸೆಕ್ ನೀರು

ಜೆಡಿಎಸ್‌ ಪಕ್ಷದ ಹಿರಿಯ ಮುಖಂಡ ತೂಬಿನಕೆರೆ ಜವರೇಗೌಡ, ಜಿಪಂ ಮಾಜಿ ಸದಸ್ಯ ಚಂದ್ರೇಗೌಡ, ತೆಂಗಿನಭಾಗ ನಾಗರಾಜು, ವಕೀಲ ಟಿ.ಕೆ.ರಾಮೇಗೌಡ, ಪುರಸಭೆ ಸದಸ್ಯ ಯೋಗೇಶ್‌, ತಾಪಂ ಸದಸ್ಯ ಹೇಮರಾಜು, ನೆಲ್ಲಿಗೆರೆ ಬಾಲು, ಬಸವೇಗೌಡ, ಕೆಂಪೇಗೌಡ, ನಾಗೇಶ್‌, ಪ್ರವೀಣ್‌ ಸೇರಿದಂತೆ ನೂರಾರು ಮಂದಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.