ಮಂಡ್ಯ(ಸೆ.05): ಕಾಂಗ್ರೆಸ್‌ ಪ್ರಭಾವಿ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್‌ , ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳು ಪಟ್ಟಣದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಭಾವಚಿತ್ರ ಸುಟ್ಟು ಆಕ್ರೋಶ:

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿ ಮೈಸೂರು-ಚನ್ನರಾಯಪಟ್ಟಣ ಹಾಗೂ ಬೇಯ - ಕೆ.ಆರ್‌ .ಪೇಟೆ ಮುಖ್ಯ ರಸ್ತೆಯನ್ನು ಸುಮಾರು ಅರ್ಧ ಗಂಟೆಗಳ ಕಾಲ ಬಂದ್‌ ಮಾಡಿ ಪ್ರಧಾನಿ ಮೋದಿ ಮತ್ತು ಕೇಂದ್ರದ ಗೃಹ ಮಂತ್ರಿ ಅಮಿತ್‌ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾವಚಿತ್ರಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಯತ್ತ ತನಿಖಾ ಸಂಸ್ಥೆಗಳ ದುರುಪಯೋಗ:

ಕೇಂದ್ರ ಸರ್ಕಾರವು ಇಡಿ, ಸಿಬಿಐ ನಂತಹ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಮುಖಂಡರ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತಿದೆ. ಗುಜರಾತ್‌ ವಿಧಾನಸಭೆಯಿಂದ ನಡೆಯುತ್ತಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಅಹಮದ್‌ ಪಟೇಲ್ ಅವರನ್ನು ಸೋಲಿಸಲು ಅಮಿತ್‌ ಶಾ ನಿರ್ಧರಿಸಿದ್ದರು. ಈ ವೇಳೆ ಗುಜರಾತ್‌ ಶಾಸಕರನ್ನು ಬೆಂಗಳೂರಿಗೆ ಕರೆತಂದು ಅಹಮದ್‌ ಪಟೇಲ್ ಗೆಲುವು ಸಾಧಿಸಲು ಡಿ.ಕೆ.ಶಿವಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಅಮಿತ್‌ ಷಾ ಅವರು ಡಿ.ಕೆ.ಶಿವಕುಮಾರ್‌ ವಿರುದ್ಧ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಕೇಂದ್ರದ ಹಿಡಿತದಲ್ಲಿರುವ ಇಡಿ ಸಂಸ್ಥೆಯ ಮೂಲಕ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಡಿಕೆಶಿ ಅವರನ್ನು ಬಗ್ಗು ಬಡಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಇಡಿ ಬಿಜೆಪಿ ಕೈಗೊಂಬೆ; ಕೇಂದ್ರದಿಂದ ದ್ವೇಷದ ರಾಜಕಾರಣ

ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್‌, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌, ಜೆಡಿಎಸ್‌ ಮುಖಂಡ, ಜಿಪಂ ಸದಸ್ಯ ಬಿ.ಎಲ್‌.ದೇವರಾಜು, ಜಿಪಂ ಉಪಾಧ್ಯಕ್ಷೆ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌ .ಟಿ.ಮಂಜು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಿಕ್ಕೇರಿ ಸುರೇಶ್‌, ಕೆಯುಐಡಿಎಫ್‌ಸಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಬಿ.ನಾಗೇಂದ್ರಕುಮಾರ್‌, ಕೆ.ಸಿ.ಮಂಜುನಾಥ್‌ ಸೇರಿದಂತೆ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳು ಭಾಗವಹಿಸಿದ್ದರು.