ಜಲ ಋುಷಿ, ಆಧುನಿಕ ಭಗೀರಥ, ಪರಿಸರ ಸಂತ, ಕೆರೆಗಳ ಸಂರಕ್ಷಕ ಎಂದೆಲ್ಲಾ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು ಕೆರೆ-ಕಟ್ಟೆಗಳ ಜೀವದಾತರಾಗಿದ್ದರು.
ಮಂಡ್ಯ ಮಂಜುನಾಥ
ಮಂಡ್ಯ (ಅ.18): ಜಲ ಋುಷಿ, ಆಧುನಿಕ ಭಗೀರಥ, ಪರಿಸರ ಸಂತ, ಕೆರೆಗಳ ಸಂರಕ್ಷಕ ಎಂದೆಲ್ಲಾ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು ಕೆರೆ-ಕಟ್ಟೆಗಳ ಜೀವದಾತರಾಗಿದ್ದರು.
ಗ್ರಾಮದ ಬಳಿ ಇರುವ ಕುಂದನ ಬೆಟ್ಟದಲ್ಲಿ ಅಂತರ್ಜಲ (ground Water ) ವೃದ್ಧಿಗೆ 14 ಚೆಕ್ ಡ್ಯಾಂಗಳನ್ನು ನಿರ್ಮಿಸಿ, ಬೆಟ್ಟದ (Hill) ತಪ್ಪಲಿನಲ್ಲಿ 2000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಕಳೆದ 50 ವರ್ಷಗಳಿಂದಲೂ ಪರಿಸರ ಸಂರಕ್ಷಣೆ, ಕೆರೆಗಳನ್ನು ನಿರ್ಮಿಸುವ ಕಾರ್ಯಕ್ರಮಗಳನ್ನು ಯಾರ ನೆರವು, ಸಹಾಯವಿಲ್ಲದೆ ಏಕಾಂಗಿಯಾಗಿಯೇ ಮುಂದುವರೆಸಿಕೊಂಡು ಬಂದಿದ್ದ ಅಪರೂಪದ ಪರಿಸರ ಪ್ರೇಮಿಯಾಗಿದ್ದರು.
ಪಿಂಚಣಿ ಹಣದಿಂದ ಸಸಿ ಪೋಷಣೆ:
ದಾಸನದೊಡ್ಡಿ ನೀಲಿವೆಂಕಟೆಗೌಡರ 10 ಮಕ್ಕಳಲ್ಲಿ ಕೊನೆಯ ಮಗ ಕಾಮೇಗೌಡ. ಪತ್ನಿ ಕೆಂಪಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಪಿತ್ರಾರ್ಜಿತವಾಗಿ ಬಂದ ಎರಡು ಎಕರೆ ಜಮೀನನ್ನು ಹಂಚಿ ತಾವು ನಿರಾಧಾರಿಗಳಾಗಿದ್ದರು. ಮಕ್ಕಳ ಮನೆಯಲ್ಲೇ ಆಶ್ರಯ ಪಡೆದಿದ್ದ ಕಾಮೇಗೌಡರಿಗೆ ಸರ್ಕಾರದಿಂದ ಮಾಸಿಕ ಪಿಂಚಣಿ ಬರುತ್ತಿತ್ತು. ಈ ಹಣದಿಂದಲೇ ಸಸಿಗಳನ್ನು ಖರೀದಿಸಿ ಪೋಷಣೆ ಮಾಡುವುದು ಇವರ ಕಾಯಕವಾಗಿತ್ತು.
ಕೆರೆಗಳ ನಿರ್ಮಾಣದಲ್ಲಿ ವಿಶೇಷತೆ:
ಕಾಮೇಗೌಡರ ಕೆರೆಗಳ ನಿರ್ಮಾಣ ಜ್ಞಾನ ವಿಶೇಷ ಮತ್ತು ವೈಶಿಷ್ಠ್ಯತೆಯಿಂದ ಕೂಡಿತ್ತು. ನೀರು ಹರಿದು ಬರುವ ಮೂಲಗಳನ್ನು ಮೊದಲು ಪತ್ತೆ ಮಾಡಿ ಕೆರೆ ನಿರ್ಮಾಣಕ್ಕೆ ಜಾಗ ಗುರುತಿಸುತ್ತಾರೆ. ನಂತರ ಸುತ್ತಲೂ ನೇರಳೆ, ಆಲ, ಮತ್ತಿ , ಹೊಂಗೆ ಸೇರಿದಂತೆ ಹಲವು ಮಾದರಿಯ ಗಿಡಗಳನ್ನು ನೆಟ್ಟು ಪರಿಸರವನ್ನೂ ಕೂಡ ಸಂರಕ್ಷಿಸುವುದು ಗೌಡರ ನಿತ್ಯದ ಕಾಯಕವಾಗಿತ್ತು. ಕೆರೆಯ ಸುತ್ತಲೂ ಸುಂದರ ಕಾಡುಗಲ್ಲನ್ನು ಹಾಕಿದ್ದಾರೆ. ಕೆರೆಯಿಂದ ದಿನನಿತ್ಯದ ಬಳಕೆಗೆ ನೀರನ್ನು ತೆಗೆದುಕೊಳ್ಳುವವರಿಗೆ ಯಾವುದೇ ಅನಾಹುತ ಸಂಭವಿಸದಿರಲೆಂದು ಹಂತಗಳನ್ನು ನಿರ್ಮಿಸಿದ್ದಾರೆ. ಯಾವಾಗಲೂ ಅವುಗಳಿಗೆ ಜನ ಕಾಮೇಗೌಡನ ಕೆರೆ ಎಂದು ಹೇಳಬೇಕೆಂಬ ಮಹದಾಸೆ ಗೌಡರದ್ದು. ಅದರಂತೆ ಈತ ತನ್ನ ಮೊಮ್ಮಗಳಾದ ಪೂರ್ವಿ, ಮೊಮ್ಮಗ ಕೃಷ್ಣ ಹೆಸರು ಸೇರಿದಂತೆ ಹಲವು ಹೆಸರುಗಳನ್ನು ಒಂದೊಂದು ಕೆರೆಗೂ ನಾಮಕರಣ ಮಾಡಿರುವುದು ವಿಶೇಷವಾಗಿದೆ.
ವರ್ಷಪೂರ್ತಿ ನೀರು:
ಬರಗಾಲ ಎದುರಾದ ಸಮಯದಲ್ಲಿ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರು ಇಂಗಿ ಹೋದರೂ ಕಾಮೇಗೌಡರ ಕೆರೆಯಲ್ಲಿ ಮಾತ್ರ ವರ್ಷವಿಡೀ ನೀರು ನಳನಳಿಸುತ್ತಿತ್ತು.
ಕೆರೆ-ಕಟ್ಟೆ, ಕಾಲುವೆಗಳಲ್ಲಿ ಯಥೇಚ್ಛವಾಗಿ ಮರಳು ಇದೆ. ಇದನ್ನು ತಾನೂ ಸಹ ಬಳಸಿಕೊಂಡಿಲ್ಲ. ಇತ್ತ ಗ್ರಾಮದವರನ್ನು ಬಳಸಿಕೊಳ್ಳಲು ಬಿಡದೆ ಅರಣ್ಯ ಸಂಪತ್ತನ್ನು ಸಂರಕ್ಷಿಸಿದ್ದರು.
ಕನ್ನಡಪ್ರಭದಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ:
ದಾಸನದೊಡ್ಡಿ ಕಾಮೆಗೌಡರ ಸಾಧನೆಯನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ್ದು, ರಷಸಿದ್ದೇಶ್ವರ ಮಠದ ಶ್ರೀಗಳು. ಕುಂದೂರು ಬೆಟ್ಟದ ರಷಸಿದ್ದೇಶ್ವರ ಮಠ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು. ನಂತರ ಇವರಿಗೆ ಪ್ರಶಸ್ತಿಯ ಸರಮಾಲೆಯೇ ಹರಿದು ಬರಲಾರಂಭಿಸಿತು. ಮಂಡ್ಯದ ಪ್ರತಿಷ್ಠಿತ ಕೆ.ವಿ.ಶಂಕರೆಗೌಡ ಟ್ರಸ್ಟ್‌ನಿಂದ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ, ಮೈಸೂರು ರಂಗಾಯಣದಿಂದ ರಂಗಾಯಣ ಪ್ರಶಸ್ತಿ, ಮೈಸೂರಿನ ಪ್ರತಿಷ್ಠಿತ ರಮಾಗೋವಿಂದ ಪ್ರಶಸ್ತಿ, ಮಳವಳ್ಳಿ ಧನಗೂರು ಮಠದಿಂದ ‚ಷಡಕ್ಷರದೇವ ಪ್ರಶಸ್ತಿ, ಚಿತ್ರದುರ್ಗದ ಮುರುಘಾ ಮಠ ನೀಡುವ ಅಂತಾರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು. ಕನ್ನಡಪ್ರಭ-ಸುವರ್ಣ ನ್ಯೂಸ್ ಸಂಸ್ಥೆಯಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಧಾನಿ ಮೋದಿಯಿಂದ ಪ್ರಶಂಸೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಧುನಿಕ ಭಗೀರಥನೆಂದೇ ಖ್ಯಾತಿ ಪಡೆದಿದ್ದ ದಾಸನದೊಡ್ಡಿ ಕಾಮೇಗೌಡರನ್ನು ಕೊಂಡಾಡಿದ್ದರು. 28 ಜೂನ್ 2020ರ ತಮ್ಮ 66ನೇ ಆವೃತ್ತಿಯ ಮನ್ ಕೀ ಬಾತ್‌ನಲ್ಲಿ ಕಾಮೇಗೌಡರ ಸಾಧನೆಯನ್ನು ನೆನೆದು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದರು. ಜೊತೆಗೆ ಕೇಂದ್ರ ಜಲಸಂಪನ್ಮೂಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮೂಲಕ ಕಾಮೇಗೌಡರಿಗೆ ಅಭಿನಂದನೆ ಸಲ್ಲಿಸಿದ್ದರು.
ಕಾಮೇಗೌಡರ ನಿಧನಕ್ಕೆ ಗಣ್ಯರ ಸಂತಾಪ
ಕಲ್ಮನೆ ಕಾಮೇಗೌಡರ (84) ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
