* ಮೋದಿ ಮೆಚ್ಚಿದ ಮಂಡ್ಯದ ಭಗೀರಥ ಕಾಮೇಗೌಡಗೆ ಅನಾರೋಗ್ಯ!* ಸಮಾಜಸೇವೆಗೆ ಸರ್ಕಾರಿ ವ್ಯವಸ್ಥೆ ತಡೆಯೊಡ್ಡಿದ್ದಕ್ಕೆ ಬೇಸರ* ಅನ್ಯನೀರು ತ್ಯಜಿಸಿ ಅನಾರೋಗ್ಯಕ್ಕೆ ತುತ್ತಾದ ಕಾಮೇಗೌಡ

ಮಂಡ್ಯ(ಜ. 14) ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾದ ಪರಿಸರ ಪ್ರೇಮಿ, ಕಾಯಕಯೋಗಿ, ಆಧುನಿಕ ಭಗೀರಥ ಎಂದೇ ಕರೆಯಲ್ಮಡುವ ಕಲ್ಮನೆ ಕಾಮೇಗೌಡರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸಾಮಾಜಿಕ ಸೇವೆಗೆ ಆಡಳಿತ ವ್ಯವಸ್ಥೆ ತಡೆಯೊಡ್ಡಿದ್ದರಿಂದ ಬೇಸತ್ತ ಕಾಮೇಗೌಡರು ಅನ್ನ-ನೀರು ತ್ಯಜಿಸಿದ ಪರಿಣಾಮ ಅನಾರೋಗ್ಯಕ್ಕೊಳಗಾಗಿದ್ದಾರೆ.

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಪುಟ್ಟಮನೆಯೊಂದರಲ್ಲಿ ಅನಾರೋಗ್ಯದಿಂದ ನರಳುತ್ತಿರುವ ಕಾಮೇಗೌಡರತ್ತ ಜಿಲ್ಲಾಡಳಿತ ತಿರುಗಿಯೂ ನೋಡುತ್ತಿಲ್ಲ. ಕಾಮೇಗೌಡರ ಸೇವೆಯನ್ನು ಪರಿಗಣಿಸಿ ಪ್ರಧಾನಿ ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕಾಮೇಗೌಡರಿಗೆ ಕರೆ ಮಾಡಿ ವಾಸಕ್ಕೆ ಹೊಸ ಮನೆ ಕಟ್ಟಿಸಿಕೊಡುವ, ಮಕ್ಕಳಿಗೆ ಉದ್ಯೋಗ ಹಾಗೂ ತಮ್ಮ ಸೇವೆಗೆ ಪೂರಕವಾಗಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಅದರಂತೆ ವಿಧಾನಸೌಧದಿಂದ ಜಿಲ್ಲಾಧಿಕಾರಿಯವರಿಗೆ ಐದಾರು ಪತ್ರಗಳನ್ನು ಬರೆದರೂ ಯಾವುದಕ್ಕೂ ಅಧಿಕಾರಿಗಳು ಕ್ಯಾರೇ ಅನ್ನಲಿಲ್ಲ.

ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟ ಕಾಮೇಗೌಡ್ರು..!

ಕಾಮೇಗೌಡರು 16 ಚೆಕ್‌ಡ್ಯಾಂಗಳನ್ನು ನಿರ್ಮಿಸಿ, ಕೆರೆ-ಕಟ್ಟೆಗಳನ್ನು ರಕ್ಷಿಸುವುದರೊಂದಿಗೆ ಗಿಡ-ಮರಗಳನ್ನು ಬೆಳೆಸಿ ಸುತ್ತಮುತ್ತಲ ಪ್ರದೇಶ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರು. ಆದರೆ ಇವರ ಮೇಲೆ ಮರಳು ಗಣಿಗಾರಿಕೆ ಆರೋಪ ಹೊರಿಸಲಾಯಿತು. ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಕಾಮೇಗೌಡರ ಹೆಸರು ಶಿಫಾರಸಾಗುವುದನ್ನೂ ತಡೆಹಿಡಿಯಲಾಯಿತು. ಇಳಿ ವಯಸ್ಸಿನಲ್ಲಿ ಕಾಮೇಗೌಡರು ತನಿಖೆ ಎದುರಿಸಬೇಕಾದ ಸ್ಥಿತಿಯನ್ನೂ ತಂದೊಡ್ಡಿದರು. ಈ ಬೆಳವಣಿಗೆಗಳಿಂದ ಕಾಮೇಗೌಡರು ತೀವ್ರ ನೊಂದಿದ್ದಾರೆ.

ಸುಮಾರು 50 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆರೆ-ಕಟ್ಟೆಗಳ ನಿರ್ಮಾಣ, ಅಭಿವೃದ್ಧಿ, ಮರ ಗಿಡಗಳ ಪೋಷಣೆಗೆ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಹಲವು ಬಾರಿ ಕಾಮೇಗೌಡರು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಅನಾರೋಗ್ಯಕ್ಕೆ ತುತ್ತಾಗಿರುವ ಕಾಮೇಗೌಡರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕಿದೆ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಕಾಮೇಗೌಡರ ವಿರುದ್ಧವೇ ತನಿಖೆ: ಪರಿಸರ ಕಾಳಜಿಗಾಗಿ ಪ್ರಧಾನಿ ಮೋದಿಯಿಂದ ಶ್ಲಾಘನೆಗೊಳಗಾಗಿದ್ದ ಮಳವಳ್ಳಿಯ ಕಾಮೇಗೌಡರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಡೆದ ಕಾಮೇಗೌಡ ಮತ್ತು ದಾಸನದೊಡ್ಡಿ ಗ್ರಾಮಸ್ಥರ ನಡುವಿನ ಅಸಮಾಧಾನ ಸಂಬಂಧ ಉಪವಿಭಾಗಾಧಿಕಾರಿ ಸೂರಜ್‌ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಕಾಮೇಗೌಡರ ವಿರುದ್ಧ ದೂರುಗಳ ಮಳೆ ಬಂದಿತ್ತು.

ಗ್ರಾಮಸ್ಥರ ದೂರುಗಳ ಸತ್ಯಾಸತ್ಯತೆ, ಕಾಮೇಗೌಡರು ನಿರ್ಮಿಸಿದ್ದಾರೆ ಎನ್ನಲಾದ ಕಟ್ಟೆಗಳು ಸತ್ಯವೇ ಸುಳ್ಳೆ ಎಂಬುದನ್ನು ತಿಳಿಯಲು ನಾನೇ ಖುದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತೇನೆ.ಅಲ್ಲದೇ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತಂಡವನ್ನು ಜುಲೈ 21ರೊಳಗೆ ರಚಿಸಿ, ಆದಷ್ಟುಬೇಗ ವರದಿ ತರಿಸಿಕೊಂಡು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಉಪವಿಭಾಗಾಧಿಕಾರಿ ಸೂರಜ್‌ ತಿಳಿಸಿದ್ದರು.

ಚೇತರಿಸಿಕೊಂಡಿದ್ದರು: ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಚೇತರಿಸಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡರನ್ನು ಮಂಡ್ಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸ ನೀಡುವಂತೆ ಸೂಚಿಸಿದ್ದೆ. ಕಾಮೇಗೌಡರು ಈಗ ಚೇತರಿಸಿಕೊಂಡಿರುವುದು ಸಂತಸದ ಸಂಗತಿ. ಮಂಡ್ಯ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ಎಂದು ಚವಿವ ಸುಧಾಕರ್ ತಿಳಿಸಿದ್ದರು.