ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದೀಗ ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ.
ಮಂಡ್ಯ (ಫೆ.08): ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಅವಧಿ ಪೂರ್ಣಗೊಂಡಿರುವ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಹೊಸ ಸಾರಥಿಗಾಗಿ ಹುಡುಕಾಟ ತೀವ್ರಗೊಂಡಿದೆ. ತೆರವಾಗಲಿರುವ ಅಧ್ಯಕ್ಷ ಸ್ಥಾನಕ್ಕೆ ಮೂಲ ಹಾಗೂ ವಲಸಿಗರ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ.
ಕಳೆದ ವಿಧಾನಸಭಾ ಚುನಾವಣೆಯ ದಯನೀಯ ಸೋಲು ಮತ್ತು ನಂತರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಗೆಲುವು ಸಾಧಿಸದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದು ಕಾಂಗ್ರೆಸ್ ಹಿನ್ನಡೆಯನ್ನು ಸಾಬೀತುಪಡಿಸಿರುವ ಹೊತ್ತಿನಲ್ಲೇ ನೂತನ ಅಧ್ಯಕ್ಷರ ಆಯ್ಕೆ ಪಕ್ಷದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿದೆ.
2023ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ರಾಜ್ಯಾದ್ಯಂತ ನೂತನ ಮತ್ತು ಸಂಘಟನಾತ್ಮಕ ಪಡೆಯನ್ನು ರಚಿಸುವ ಮಹತ್ವಾಕಾಂಕ್ಷೆ ಹೊಂದಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ವಿಶೇಷ ಕಾಳಜಿ ವಹಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಮೆರೆದಿದ್ದು, ಬಿಜೆಪಿ ಕೂಡ ಕೆ.ಆರ್.ಪೇಟೆ ಕ್ಷೇತ್ರದ ಮೂಲಕ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ. ಕೆಲವು ಸಂದರ್ಭಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಾಗಿ ರಾಜಕಾರಣ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಎರಡೂ ಪಕ್ಷಗಳಿಂದ ಕನಿಷ್ಠ ಅಂತರ ಕಾಯ್ದುಕೊಂಡು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅಧ್ಯಕ್ಷರ ಆಯ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
'ಈ ವ್ಯಕ್ತಿ ಬೆಳಗ್ಗೆ ಎಲ್ಲಾ ಕಾಂಗ್ರೆಸ್ - ರಾತ್ರಿ ಬಿಜೆಪಿ : ಕೈನಲ್ಲಿದ್ದುಕೊಂಡು ಕಮಲಕ್ಕೆ ಸಪೋರ್ಟ್' ..
ಸದ್ಯದ ಸ್ಥಿತಿಯಲ್ಲಿ ವಿಧಾನಸಭೆ ಮತ್ತು ಲೋಕಸಭಾ ವಿಚಾರದಲ್ಲಿ ಹೇಳುವುದಾದರೆ ಕಾಂಗ್ರೆಸ್ ಶೂನ್ಯಸಾಧನೆಯೇ ಆಗಿದೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ನ್ನು ಗಟ್ಟಿಗೊಳಿಸಲು ಕನಿಷ್ಠ 3 ರಿಂದ 4 ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಪಕ್ಷದ ಮೇಲಿದ್ದು, ಪಕ್ಷದ ಚುನಾವಣಾ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ನಾಯಕನನ್ನು ಕಾಂಗ್ರೆಸ್ ಹುಡುಕಾಡುತ್ತಿದೆ.
ಚಚುನಾವಣಾ ದೃಷ್ಟಿಯಿಂದ ಇಡೀ ಜಿಲ್ಲೆಯನ್ನು ಸಮಗ್ರವಾಗಿ ಸಂಘಟಿಸುವ ಸಾಮರ್ಥ್ಯ ಹೊಂದಿರುವ ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ಯುವ ಅಜಾತಶತ್ರುತ್ವದ ವ್ಯಕ್ತಿತ್ವ ಹೊಂದಿರುವ ಮುಖಂಡರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರ ಕಾಂಗ್ರೆಸ್‌ನದ್ದಾಗಿದೆ. ಈಗಾಗಲೇ ಕಾಂಗ್ರೆಸ್‌ನೊಳಗೆ ಗುಂಪುಗಾರಿಕೆ ತೀವ್ರಗೊಂಡಿದ್ದು, ಎಲ್ಲಾ ಗುಂಪುಗಳನ್ನು ಸಮನ್ವಯತೆಯಿಂದ ತೆಗೆದುಕೊಂಡುಹೋಗುವ ನಾಯಕನ ಅಗತ್ಯತೆಯನ್ನು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಂತಹವರಿಗೆ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಷ್ಟೇ ಸೀಮಿತಗೊಳಿಸಿ ಚುನಾವಣೆಯಿಂದ ಹೊರಗಿದ್ದು, ಪಕ್ಷ ಸಂಘಟನೆಯ ಏಕಮಾತ್ರ ಉದ್ದೇಶ ಹೊಂದಿರುವ ನಾಯಕನಿಗಷ್ಟೇ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಕುರಿತು ರಾಜ್ಯ ವರಿಷ್ಠರ ಮಟ್ಟದಲ್ಲಿ ಮಾತುಕತೆ ನಡೆದಿದ್ದು, ಕಾಂಗ್ರೆಸ್ ಮಾನದಂಡಗಳಿಗೆ ಹೊಂದಾಣಿಕೆಯಾಗುವ ನಾಯಕರಿಗೆ ಅಧ್ಯಕ್ಷ ಪಟ್ಟಕಟ್ಟಲು ಪೂರ್ವಸಿದ್ಧತೆಗಳು ಮುಂದುವರೆದಿವೆ.
ಆಕಾಂಕ್ಷಿತರ ದಂಡು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂಲ- ವಲಸಿಗರು ತೀವ್ರ ಪೈಪೋಟಿ ನಡೆಸಿದ್ದಾರೆ. ಒಂದೆಡೆ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ತಮ್ಮ ಕಟ್ಟಾಬೆಂಬಲಿಗರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಧಿಪತ್ಯ ಸ್ಥಾಪಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಒಂದು ಹಂತದಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಅಧ್ಯಕ್ಷರನ್ನಾಗಿಸುವ ಪ್ರಕ್ರಿಯೆ ಆರಂಭಿಸಿದರಾದರೂ ಸ್ವತಃ ರಮೇಶ್ ಅವರೇ ಕ್ಷೇತ್ರ ನಾಯಕತ್ವಕ್ಕಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಅವರ ಹೊರತಾಗಿ ಉತ್ಸಾಹಿ ನಾಯಕರನ್ನು ಹುಡುಕಾಡುವ ಪ್ರಯತ್ನ ಮುಂದುವರೆದಿದೆ.
ಮತ್ತೊಂದೆಡೆ ಮೂಲ ಕಾಂಗ್ರೆಸ್ಸಿಗರ ಗುಂಪು ಪ್ರತ್ಯೇಕವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದು, ಈ ನಡುವೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮೂಲ-ವಲಸಿಗರನ್ನು ಒಗ್ಗೂಡಿಸಿ ನೂತನ ಅಧ್ಯಕ್ಷರನ್ನು ವರಿಷ್ಠರ ಆದೇಶದನ್ವಯ ಆಯ್ಕೆ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿ.ಡಿ.ಗಂಗಾಧರ್ ನಿರ್ಗಮನದ ನಂತರ ಸ್ಥಾನಕ್ಕಾಗಿ ಮಾಜಿ ಶಾಸಕ ಎಚ್.ಬಿ.ರಾಮು, ರವಿಕುಮಾರ್ ಗಣಿಗ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ಜಯರಾಂ, ಮೈಷುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಮಂಡ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಜಬೀವುಲ್ಲಾ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಸಿ.ಎಂ.ದ್ಯಾವಪ್ಪ, ಪಾಲಹಳ್ಳಿ ಚಂದ್ರಶೇಖರ್ ಸೇರಿದಂತೆ ಇತರರು ಹೋರಾಟ ನಡೆಸುತ್ತಿದ್ದಾರೆ.
ಮಂಡ್ಯ ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನದೊಂದಿಗೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮಹಮ್ಮದ್ ಜಬೀವುಲ್ಲಾ ಅಲ್ಪಸಂಖ್ಯಾತರ ವಿಭಾಗದಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರೆ, ಮೈಷುಗರ್ ಅಧ್ಯಕ್ಷರಾಗಿದ್ದ ಹಾಲಹಳ್ಳಿ ರಾಮಲಿಂಗಯ್ಯನವರು ಒಕ್ಕಲಿಗರ ಕೋಟಾದಡಿ ಸ್ಪರ್ಧೆಗಿಳಿದಿದ್ದಾರೆ. ನಗರಸಭಾ ಸದಸ್ಯರಾಗಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಹಿರಿಯ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಎಂ.ಡಿ.ಜಯರಾಂ ದಲಿತ ವರ್ಗದ ಕೋಟಾದಡಿ ಸ್ಪರ್ಧೆಗಿಳಿದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಪಕ್ಷದ ಬೆಳವಣಿಗೆಗೆ ಸಾಕಷ್ಟುಕೊಡುಗೆಯನ್ನೂ ನೀಡಿದ್ದೇನೆ. ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ. ಪಕ್ಷವನ್ನು ಸಂಘಟಿಸುವ ಶಕ್ತಿ ನನ್ನಲ್ಲೂ ಇದೆ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಪಕ್ಷದ ವರಿಷ್ಠರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಮೂಲ-ವಲಸಿಗರನ್ನು ಒಗ್ಗೂಡಿಸಿಕೊಂಡು ಹೋಗುವ ಆತ್ಮವಿಶ್ವಾಸ ನನ್ನಲ್ಲಿದೆ.
- ಹಾಲಹಳ್ಳಿ ರಾಮಲಿಂಗಯ್ಯ, ಕೆಪಿಸಿಸಿ ಕಾರ್ಯದರ್ಶಿ
ಇದುವರೆಗೂ ಅಲ್ಪಸಂಖ್ಯಾತರ ವಿಭಾಗಕ್ಕೆ ಅಧ್ಯಕ್ಷ ಹುದ್ದೆಯೇ ದೊರಕಿಲ್ಲ. 35 ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇನೆ. 8000 ಕಾಂಗ್ರೆಸ್ ಪಕ್ಷದ ಸದಸ್ಯರನ್ನು ನೋಂದಾಯಿಸಿದ್ದು, ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿ ನಿಂತಿದ್ದೇನೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸುವ ಶಕ್ತಿ ಇದೆ. ನಾವೂ ಜಿಲ್ಲಾಧ್ಯಕ್ಷ ಸ್ಥಾನ ಅವಕಾಶದ ನಿರೀಕ್ಷೆಯಲ್ಲಿದ್ದೇನೆ.
- ಮಹಮ್ಮದ್ ಜಬೀವುಲ್ಲಾ, ಅಧ್ಯಕ್ಷರು, ನಗರ ಬ್ಲಾಕ್ ಕಾಂಗ್ರೆಸ್
ನನಗೆ ಹಿಂದೆಯೇ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಬೇಕಿತ್ತು. ಕೆಲವರ ವಿರೋಧದಿಂದ ನನಗೆ ತಪ್ಪಿತು. ಪಕ್ಷದ ಬೆಳವಣಿಗೆಗೆ ಇದುವರೆಗೂ ಶಕ್ತಿಮೀರಿ ಶ್ರಮಿಸುತ್ತಾ ಬಂದಿದ್ದೇನೆ. ನನಗೆ ವರಿಷ್ಠರು ಅವಕಾಶ ಮಾಡಿಕೊಟ್ಟಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೊಸ ಚೈತನ್ಯಶಕ್ತಿಯನ್ನು ತಂದುಕೊಡಲು ಶ್ರಮಿಸುವೆ.
-ಎಂ.ಡಿ.ಜಯರಾಂ, ಕೆಪಿಸಿಸಿ ಸದಸ್ಯರು
