ಮದ್ದೂರು (ಫೆ.08):  ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಳ್ಳಲು ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಕೂಡ ಮುಖ್ಯ ಪಾತ್ರ ವಹಿಸಿದ್ದರು ಎಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸುರೇಶ್‌ಗೌಡ ಆರೋಪಿಸಿದರು.

ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆಯೆಲ್ಲಾ ಕಾಂಗ್ರೆಸ್‌, ರಾತ್ರಿಯೆಲ್ಲಾ ಬಿಜೆಪಿ ಪಾಳಯದಲ್ಲಿ ಸಕ್ರಿಯರಾಗಿರುತ್ತಿದ್ದ ಇವರಿಗೆಲ್ಲಾ ನಾವು ಉತ್ತರ ಕೊಡಬೇಕಿಲ್ಲ. ಮರ್ಯಾದೆಯನ್ನೂ ಕೊಡಬೇಕಿಲ್ಲ. ಇವರೆಲ್ಲಾ ಪ್ರಾಕ್ಸಿ ಬಿಜೆಪಿಯವರು ಎಂದು ಛೇಡಿಸಿದರು.

ಸಾಲ ಮನ್ನಾ ಬಗ್ಗೆ ಇವರೇನ್ರಿ (ಚಲುವರಾಯಸ್ವಾಮಿ) ಹೇಳೋದು. ಮನ್ನಾ ಮಾಡಿಸಿಕೊಂಡಿರೋರು ಹೇಳ್ತಾರೆ. ಹಾಗಾದ್ರೆ ಸರ್ಕಾರದಿಂದ 24 ರಿಂದ 25 ಸಾವಿರ ಕೋಟಿ ಮನ್ನಾ ಆಗಿರೋದು ಸುಳ್ಳಾ?. ಅದನ್ನು ತಡೆದುಕೊಳ್ಳಲಾಗದೆ ಈ ರೀತಿ ಸುಳ್ಳು ಹೇಳುತ್ತಾ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಬೆಳಗ್ಗೆ ಬಿಜೆಪಿಗೆ ಹೋಗಿ.. ಸಂಜೆ ಕಾಂಗ್ರೆಸ್‌ಗೆ ವಾಪಸ್: ಶಾಸಕಗೆ ಮುಖಭಂಗ ...

ದಿಲ್ಲಿಯಲ್ಲಿ ಕುಳಿತು ರಾಜಕಾರಣ ಮಾಡಿರುವವರು. ಅವರ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುವಷ್ಟುದೊಡ್ಡವನು ನಾನಲ್ಲ. ನಮ್ಮ ಪಕ್ಷ ಏನು ಹೇಳುವುದೋ ಅದನ್ನು ಮಾಡುತ್ತೇನೆ. ಜನರು ಕೊಟ್ಟಿರುವ ಅಧಿಕಾರವನ್ನು ನಾನೇನು ಮಾರಿಕೊಂಡಿಲ್ಲವಲ್ಲ ಎಂದು ಕುಟುಕಿದರು.

ನಾಗಮಂಗಲ ತಾಲೂಕಿನಲ್ಲಿರುವ 35 ಗ್ರಾಪಂಗಳಲ್ಲಿ ಕನಿಷ್ಠ 20 ರಿಂದ 25 ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿದೇ ಹಿಡಿಯುತ್ತೇವೆ. ಕೊಪ್ಪ ಹೋಬಳಿಯಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದರೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಜನರು ಗೆಲ್ಲಿಸದಿರುವ ಬಗ್ಗೆ ಅಸಮಾಧಾನವಿದೆ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಗ್ರಾಪಂ ಚುನಾವಣೆಗಳು ಮುಂದಿನ ಜಿಪಂ, ತಾಪಂ ಅಥವಾ ಇನ್ಯಾವುದೇ ಚುನಾವಣೆಗಳಿಗೆ ಮಾನದಂಡವಲ್ಲ. ಇದನ್ನೇ ಮಾನದಂಡವಾಗಿಸಿಕೊಂಡು ಹಗಲುಗನಸು ಕಾಣುವವರಿಗೆ ನಾವು ಏನೂ ಹೇಳಲಾಗುವುದಿಲ್ಲ. ಅವರು ಆಕಾಶದಲ್ಲೇ ಇರಲಿ. ನಾವು ಭೂಮಿಯ ಮೇಲಿದ್ದುಕೊಂಡೇ ಅಭಿವೃದ್ಧಿ ಮಾಡುತ್ತೇವೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೆ 8 ಸಾವಿರ ಕೋಟಿ ರು. ಎಲ್ಲಿ ತಂದಿದ್ದಾರೆ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ ಸರ್ಕಾರದ ದಾಖಲೆಗಳನ್ನು ತೆಗೆದುನೋಡಲಿ ಗೊತ್ತಾಗುತ್ತೆ ಎಂದು ಚುಟುಕಾಗಿ ಉತ್ತರಿಸಿದ ಸುರೇಶ್‌ಗೌಡ ಅವರು, ಅಭಿವೃದ್ಧಿ ವಿಚಾರದಲ್ಲಿ ಅವರ ಕಾಲದ ಕೆಲಸಗಳನ್ನು ನಾನು ಮಾಡಿಸುತ್ತಿದ್ದೇನೆ. ನನ್ನ ಕಾಲದ ಕೆಲಸಗಳನ್ನು ಅವರೂ ಮಾಡಿಸಿದ್ದಾರೆ. ಇದೆಲ್ಲವೂ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ ಎಂದರು.

ಎಲ್‌.ಆರ್‌. ಶಿವರಾಮೇಗೌಡರು ಶಾಸಕರು, ಸಂಸದರಾಗಿದ್ದವರು. ಅವರನ್ನು ಪಕ್ಷದಲ್ಲಿ ಎಲ್ಲಿಯೂ ಕಡೆಗಣಿಸಿಲ್ಲ. ಮುಂದಿನ ಚುನಾವಣೆಯಲ್ಲಿ ಅವರೇ ಪಕ್ಷದ ಅಭ್ಯರ್ಥಿ ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ತೇಲಿಸಿದರು.

2018ರ ಚುನಾವಣೆ ವೇಳೆ ಮುಂದಿನ ಬಾರಿಗೆ ಕ್ಷೇತ್ರ ಬಿಟ್ಟುಕೊಡಬೇಕೆಂಬ ಬಗ್ಗೆ ಮಾತುಕತೆಯೇ ನಡೆದಿಲ್ಲ. ಟಿಕೆಟ್‌ ನೀಡುವ ವಿಚಾರದಲ್ಲಿ ಜೆಡಿಎಸ್‌ ವರಿಷ್ಠರು ತೀರ್ಮಾನ ಮಾಡುತ್ತಾರೆ. ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಅವರು ಸಮರ್ಥರಿದ್ದು ಅಭ್ಯರ್ಥಿ ಆಯ್ಕೆ ಮಾಡುವರು ಎಂದರು.